ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಜುಲೈ 16ರಂದು ಸಂಭವಿಸಿದ ಭೂ ಕುಸಿತ ಘಟನೆ ನಡೆದು ಸರಿಸುಮಾರು ಒಂದು ತಿಂಗಳಾಗುತ್ತಾ ಬಂದಿದೆ.
ಗಂಗಾವಳಿ ನದಿಯಲ್ಲಿ ಕಾಣೆಯಾದ ಮೂವರ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಹಿಂದೇಟು ಹಾಕಿತ್ತು. ಆದರೆ ಕಾರವಾರದ ಶಾಸಕ ಸತೀಶ್ ಸೈಲ್ ಅವರ ಸೂಚನೆಯಂತೆ ಉಡುಪಿಯ ಮುಳುಗುತಜ್ಞ ಈಶ್ವರ್ ಮಲ್ಪೆಯವರು ಗಂಗಾವಳಿ ನದಿಯಲ್ಲಿ ಮಂಗಳವಾರ ಸಂಜೆ ವೇಳೆಯಲ್ಲಿ ಶೋಧ ಕಾರ್ಯಕ್ಕಿಳಿದಿದ್ದರು. ಈ ವೇಳೆ ಗ್ಯಾಸ್ ಟ್ಯಾಂಕರ್ನ ಚಿಕ್ಕ ಭಾಗ ಹಾಗೂ ಕೇರಳ ಮೂಲದ ಭಾರತ್ ಬೆಂಝ್ ಲಾರಿಯ ವೀಲ್ ಜಾಕ್ ಕಾರ್ಯದಲ್ಲಿ ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಬುಧವಾರ ಕೂಡ ಶೋಧ ಕಾರ್ಯಾಚರಣೆಯನ್ನು ಬೆಳಗ್ಗೆ 10 ಗಂಟೆಯಿಂದಲೇ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ನೌಕಾದಳದ ತಂಡ ಆರಂಭಿಸಿದೆ.
ಕೇರಳದ ಲಾರಿ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಶವಕ್ಕಾಗಿ ಶೋಧ ನಡೆಸಬೇಕಿದ್ದು, ಇದೀಗ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಲಾಗಿದೆ.

ಕಾರವಾರ ಶಾಸಕ ಸತೀಶ್ ಸೈಲ್ ಸೂಚನೆ ಮೇರೆಗೆ ಇದೀಗ ಮತ್ತೆ ಶೋಧ ಕಾರ್ಯ ಆರಂಭವಾಗಿದ್ದು, ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಗಂಗಾವಳಿ ನದಿಯಲ್ಲಿ ಪರಿಶೀಲಿಸಿದಾಗ ಗ್ಯಾಸ್ ಟ್ಯಾಂಕರ್ನ ಸ್ವಲ್ಪ ಭಾಗ ಪತ್ತೆಯಾಗಿದೆ.
ಕೇರಳದ ಚಾಲಕ ಅರ್ಜುನ್ ಎಂಬಾತನಿಗೆ ಸೇರಿದ್ದ ಲಾರಿಯ ಕೆಲವು ಭಾಗಗಳು ಪತ್ತೆಯಾಗಿರುವುದು ಶೋಧ ತಂಡಕ್ಕೆ ಹೊಸ ಭರವಸೆ ಮೂಡಿಸಿದೆ. ತಂಡವು ಗಂಗಾವಳಿ ನದಿಯ ಮಧ್ಯದಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದೆ.
ನಾಪತ್ತೆಯಾದವರ ಪತ್ತೆಗೆ ಒತ್ತಡ ಹೆಚ್ಚಿದ್ದು, ಭರವಸೆಯಂತೆ ಜಿಲ್ಲಾಡಳಿತ ಮತ್ತೆ ಶೋಧ ಕಾರ್ಯ ಆರಂಭಿಸಿದೆ. ಅದರಂತೆ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಜಿಲ್ಲಾಡಳಿತ ಮತ್ತು ಭಾರತೀಯ ನೌಕಾಪಡೆ ಜಂಟಿಯಾಗಿ ಶೋಧ ಕಾರ್ಯದಲ್ಲಿ ಭಾಗಿಯಾಗಿವೆ.

ನೌಕಾಪಡೆಯ ಅಧಿಕಾರಿಗಳು ರಾಡಾರ್ ಮತ್ತು ಇತರ ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು ಶೋಧ ಕಾರ್ಯಾಚರಣೆಯನ್ನು ನಡೆಸಿದರೆ, ಡೈವರ್ಗಳು ನಾಪತ್ತೆಯಾದ ಮೂವರಿಗಾಗಿ ನೀರೊಳಗೆ ಮುಳುಗಿ ಶೋಧ ನಡೆಸುತ್ತಿದ್ದಾರೆ.
ಜಿಲ್ಲಾಡಳಿತದ ಪ್ರಕಾರ ಭೂಕುಸಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ, ಆದರೆ ಇದುವರೆಗೆ 8 ಶವಗಳು ಮಾತ್ರ ಪತ್ತೆಯಾಗಿವೆ. ಕೇರಳ ಸರ್ಕಾರ ಮತ್ತು ಮಾಧ್ಯಮಗಳು ಶೋಧ ಕಾರ್ಯಾಚರಣೆಗೆ ಮುಂದಾಗುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದವು. ಶಿರೂರು ಮರು ಕಾರ್ಯಾಚರಣೆಯನ್ನು ಕೇರಳದ ಬಹುತೇಕ ಮುಖ್ಯ ಮಾಧ್ಯಮಗಳು ಸ್ಥಳದಲ್ಲೇ ನಿಂತು ವರದಿ ಮಾಡುತ್ತಿದೆ.

ನದಿಯಲ್ಲಿ ಮತ್ತೆ ಲಾರಿ ಡೀಸೆಲ್ ಸೋರಿಕೆಯ ಸುಳಿವು
ಇನ್ನು ಶೋಧ ಕಾರ್ಯಾಚರಣೆ ವೇಳೆ ಈಶ್ವರ್ ಮಲ್ಪೆ ತಂಡವು ನದಿಯಲ್ಲಿ ಮತ್ತೆ ಲಾರಿ ಡೀಸೆಲ್ ಸೋರಿಕೆಯ ಸುಳಿವು ಪತ್ತೆಯಾಗಿರುವುದಾಗಿ ಮಾಹಿತಿ ನೀಡಿದೆ.
ಈ ಬಗ್ಗೆ ಮಾತನಾಡಿರುವ ಈಶ್ವರ್ ಮಲ್ಪೆ, “ಕಾರ್ಯಾಚರಣೆ ಆರಂಭ ಮಾಡಿದ್ದೇವೆ. ಲಾರಿ ಇಂತಹದ್ದೇ ಸ್ಥಳದಲ್ಲಿ ಇದೆ ಎಂಬುವುದು ಖಚಿತ ಆಗಿದೆ. ಆದರೆ ಆ ಲಾರಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಬಿದ್ದಿದೆ. ಮಣ್ಣನ್ನು ತೆರವು ಮಾಡುವ ಕಾರ್ಯದ ಬಳಿಕ ಮೃತ ದೇಹಗಳು ಸಿಗುವ ಸಾಧ್ಯತೆಯಿದೆ” ಎಂದು ತಿಳಿಸಿದ್ದಾರೆ.





