ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕದ ನಿಯೋಗವು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ವತಿಯಿಂದ ನವೋದ್ಯಮ ಕಂಪನಿಗಳಿಗೆ ಉತ್ತೇಜನ ನೀಡಲು 2025-26ನೇ ಸಾಲಿನ ಆಯವ್ಯಯದಲ್ಲಿ ‘ಎಲಿವೇಟ್ ಮೈನಾರಿಟೀಸ್-2025’ ಯೋಜನೆಯಡಿಯಲ್ಲಿ ಮೀಸಲಿಟ್ಟಿರುವ ಅನುದಾನವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಯೋಜನೆಗೆ ಕೆ ಎಂ ಡಿ ಸಿ ಯಲ್ಲಿ 5 ಕೋಟಿ ರೂ. ಮೀಸಲಿಡಲಾಗಿದೆ. ಅನುದಾನ ಕೋರಿ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗಿದ್ದು, ಈಗ ಲಭ್ಯವಿರುವ ಅನುದಾನ ಕಡಿಮೆಯಾಗಿದೆ. ಆದುದರಿಂದ, ಈ ಯೋಜನೆಗೆ ಹೆಚ್ಚುವರಿ 5 ಕೋಟಿ ರೂ. ಅನುದಾನ ಒದಗಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಗೆ ಮನವಿ ಮಾಡಲಾಗಿದೆ.

ಈ ಯೋಜನೆಯಲ್ಲಿ ಅನುದಾನ ಹೆಚ್ಚಳವಾದಲ್ಲಿ ಹೊಸ ಉದ್ಯಮಗಳು ಬೆಳೆದು ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ ಇದರ ಶ್ರೇಯಸ್ಸು ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ನಸೀಮ್ ಅಹ್ಮದ್ ಅಭಿಪ್ರಾಯಿಸಿದ್ದಾರೆ.
ಈ ಆಗ್ರಹದ ಭಾಗವಾಗಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸಚಿವ ರಹೀಂ ಖಾನ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಮೆಹರೋಝ್ ಖಾನ್, ಶಾಸಕ ರಿಝ್ವಾನ್ ಅರ್ಶದ್, ವಿಧಾನಪರಿಷತ್ ಸದಸ್ಯೆ ಬಲ್ಕೀಸ್ ಬಾನು ಅವರಿಗೆ ಸೋಲಿಡಾರಿಟಿ ಯೂತ್ ಮೂವೆಂಟ್ ನಿಯೋಗ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್ ಹಾಗೂ ರಾಜ್ಯ ಕಾರ್ಯದರ್ಶಿ ಅಸದುಲ್ಲಾ ಖಾನ್ ಬಸವಕಲ್ಯಾಣ ಉಪಸ್ಥಿತರಿದ್ದರು.






