ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕರಾವಳಿಯ ವ್ಯಕ್ತಿಯೋರ್ವ ತನ್ನ ಆಪ್ತ ಸ್ನೇಹಿತನಿಗೆ ಕರೆ ಮಾಡುತ್ತಾನೆ. ಆ ತುಳು ಸಂಭಾಷಣೆ ಹೀಗಿದೆ.
ಬೆಂಗಳೂರಿನ ವ್ಯಕ್ತಿ(ತುಳು ಭಾಷೆ): “ಯಂಕ್ಲೆನ ಊರುದ ಪೊಲೀಸ್ ಸ್ಟೇಷನ್ಡ್ ಊರುದ ಏರಾಂಡಲಾ ಗುರ್ತ ಇತ್ತಿನ ಪೊಲೀಸ್ದಕ್ಲ್ ಉಲ್ಲೆರಾ? ಯಂಕ್ ಒಂಜಿ ಬೇಲೆ ಆವೊಡಿತ್ತುಂಡ್”
(ಕನ್ನಡ ಅನುವಾದ: ನಮ್ಮ ಊರಿನ ಪೊಲೀಸ್ ಸ್ಟೇಷನ್ನಲ್ಲಿ ನಿನಗೆ ಪರಿಚಯ ಇರುವ ಯಾರಾದರೂ ಊರಿನ ಪೊಲೀಸಿನವರಿದ್ದಾರಾ? ನನಗೆ ಒಂದು ಕೆಲಸ ಆಗಬೇಕಿತ್ತು”
ಕರಾವಳಿಯಲ್ಲಿರುವ ಸ್ನೇಹಿತ: “ಇಜ್ಜಿ ಮಾರೆ, ಊರುದ ಸ್ಟೇಷನ್ಡ್ ಇಪ್ಪುನ ಪೂರಾ ಪೊಲೀಸ್ ದಕ್ಲ್ ಪೂರ ಬೇತೆ ಜಿಲ್ಲೆದಕ್ಲ್. ಯಂಕ್ಲೆನ ಊರುದ ಪರಿಚಯದ ಏರ್ಲಾ ಇಜ್ಜೆರ್ ಮಾರೆ..”
(ಇಲ್ಲ ಮಾರಾಯ, ಊರಿನ ಪೊಲೀಸ್ ಸ್ಟೇಷನ್ನಲ್ಲಿ ಇರುವುದು ಎಲ್ಲರೂ ಬೇರೆ ಜಿಲ್ಲೆಯವರು. ನಮ್ಮ ಊರಿನವರು ಯಾರೂ ಇಲ್ಲ ಮಾರಾಯ.)
ಹೌದು. ಈ ಸಂಭಾಷಣೆ ಕಲ್ಪನೆಯಲ್ಲ ವಾಸ್ತವವೇ ಆಗಿದೆ! ಯಾಕೆಂದರೆ ದಕ್ಷಿಣ ಕನ್ನಡ ಜಿಲ್ಲೆ ಇರಲಿ ಅಥವಾ ಉಡುಪಿ ಸೇರಿ ಕರಾವಳಿ ಭಾಗದ ಇತರೆ ಪ್ರದೇಶವಿರಲಿ, ಈ ಭಾಗದ ಯುವಜನತೆ ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರಿ ಉದ್ಯೋಗಕ್ಕೆ ಸೇರಲು ‘ಮನಸ್ಸೇ’ ಮಾಡುತ್ತಿಲ್ಲ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಎಂಬಂತೆ ಸರ್ಕಾರಿ ನೌಕರಿ ಸಂಬಂಧ ಕರ್ನಾಟಕದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕೆಪಿಎಸ್ಸಿ, ಯುಪಿಎಸ್ಸಿ, ಐಎಎಸ್, ಕೆಎಎಸ್, ಪೊಲೀಸ್ ಇಲಾಖೆಯ ನೇಮಕಾತಿ ಪರೀಕ್ಷಾ ಪೂರ್ವ ಉಚಿತ ತರಬೇತಿ ಪಡೆಯಲು ಅರ್ಜಿಯನ್ನು ಆಹ್ವಾನಿಸಿತ್ತು. ಆದರೆ, ಎಲ್ಲ ತರಬೇತಿಗೆ ಕರಾವಳಿಯ ಅಲ್ಪಸಂಖ್ಯಾತ ಸಮುದಾಯದ ‘ಯುವಜನರು’ ಆಸಕ್ತಿಯನ್ನೇ ತೋರಿಸಿಲ್ಲ.
‘ಕರಾವಳಿಗರೇ ಬನ್ನಿ ಪೊಲೀಸ್ ಇಲಾಖೆಗೆ’ ಅಭಿಯಾನ ನಡೆಸಿದ್ದ ಪೊಲೀಸ್ ಇಲಾಖೆ!
ಕರಾವಳಿ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆಗೆ ಸೇರುವವರ ಸಂಖ್ಯೆ ತೀರಾ ಕಡಿಮೆ. ಪ್ರತಿಬಾರಿ ನೇಮಕಾತಿ ನಡೆದಾಗಲೂ ಶೇ.60ರಷ್ಟು ಮಂದಿ ಉತ್ತರ ಕರ್ನಾಟಕ ಹಾಗೂ ಇತರೆ ಜಿಲ್ಲೆಗಳ ಅಭ್ಯರ್ಥಿಗಳೇ ಆಯ್ಕೆಯಾಗುತ್ತಾರೆ. ಈ ಅಸಮತೋಲನ ತಪ್ಪಿಸಲು, ಕರಾವಳಿಗರನ್ನು ಸೆಳೆಯಲು ಪೊಲೀಸ್ ಇಲಾಖೆ ಆಂದೋಲನವನ್ನು ಕೂಡ ಆರಂಭಿಸಿತ್ತು.
2019ರಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ಎಡಿಜಿಪಿಯಾಗಿದ್ದ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಈ ಹಿಂದೆ ಕರಾವಳಿಯ ಯುವಕರು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವಂತೆ, “ಕರಾವಳಿಗರೇ ಬನ್ನಿ ಪೊಲೀಸ್ ಇಲಾಖೆಗೆ” ಎಂಬ ಅಭಿಯಾನವನ್ನೂ ನಡೆಸಿದ್ದರು. ಕಾರವಾರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಾಗಾರ ನಡೆಸುವ ಮೂಲಕ ಯುವ ಜನತೆಯನ್ನು ಇಲಾಖೆಯತ್ತ ಸೆಳೆಯಲು ಶ್ರಮಿಸಿದ್ದರು. ಆದರೆ, ಅದು ಯಾವುದು ಕೂಡ ಈವರೆಗೆ ಫಲ ಕೊಟ್ಟಿಲ್ಲ ಎಂಬುದು ವಾಸ್ತವದ ಸಂಗತಿ.
ಬೆಂಗಳೂರು, ಬಾಗಲಕೋಟೆ, ಗದಗ, ಬಿಜಾಪುರ ಸೇರಿದಂತೆ ಯಾವುದೇ ಜಿಲ್ಲೆಗಳಲ್ಲಿ ನೇಮಕಾತಿ ನಡೆದರೂ ಸ್ಥಳೀಯರು ನಿರೀಕ್ಷೆಗೂ ಮೀರಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ಕರಾವಳಿಯಲ್ಲಿ ಮಾತ್ರ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಮುಂದೆ ಹೊರ ಜಿಲ್ಲೆಗಳ ಅಭ್ಯರ್ಥಿಗಳು ಒಂದು ವೇಳೆ ಅರ್ಜಿ ಹಾಕದಿದ್ದರೆ, ಹೊರ ರಾಜ್ಯದವರು ಕರಾವಳಿಯಲ್ಲಿ ಕೆಲಸಕ್ಕೆ ಸೇರುವ ಸ್ಥಿತಿ ಬರಬಹುದು ಎಂದರೆ ಅತಿಶಯೋಕ್ತಿ ಎನಿಸದು.
ಉಡುಪಿ, ದಕ್ಷಿಣ ಕನ್ನಡ, ಕಾರವಾರ ಜಿಲ್ಲೆಗಳಲ್ಲಿ ಯುವಕರು ಪೊಲೀಸ್ ಇಲಾಖೆಯಾಗಲೀ ಅಥವಾ ಸರ್ಕಾರಿ ಸೇವೆಗೆ ಸೇರದಿರಲು ನಿರಾಸಕ್ತಿ ಮಾತ್ರ ಕಾರಣವಲ್ಲ; ಮಾಹಿತಿ ಹಾಗೂ ತಿಳಿವಳಿಕೆ ಕೊರತೆಯೂ ಪ್ರಮುಖ ಕಾರಣ. ಹಾಗಾಗಿ, ಕರಾವಳಿ ಭಾಗದ ಮೊಗವೀರ, ಕೊರಗ, ಮಲೆಕುಡಿಯ, ಅಲ್ಪಸಂಖ್ಯಾತ ಸಮುದಾಯದ ಯುವಕ-ಯುವತಿಯರಿಗೆ ಸಂಬಂಧಪಟ್ಟ ಇಲಾಖೆಯವರು ನಿರಂತರ ಮಾಹಿತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದರೂ ಕರಾವಳಿಯ ಯುವ ಜನತೆ ‘ದೊಡ್ಡ ಮನಸ್ಸು’ ಮಾಡುತ್ತಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.

ಪೊಲೀಸ್ ಇಲಾಖೆಯ ತರಬೇತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳೆಷ್ಟು?
ಕರ್ನಾಟಕದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೂಲಕ ಇತ್ತೀಚೆಗೆ 2025-26ನೇ ಸಾಲಿಗೆ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಅರ್ಜಿಯನ್ನು ಆಹ್ವಾನಿಸಿತ್ತು. ಈ ಯೋಜನೆಗೆ ಕರಾವಳಿ ಜಿಲ್ಲೆಗಳ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ಪೊಲೀಸ್ ಇಲಾಖೆ ಸೇರ್ಪಡೆಗೋಸ್ಕರ ತರಬೇತಿ ಯೋಜನೆಗೆ ಅರ್ಜಿ ಹಾಕಿದ ಅಭ್ಯರ್ಥಿಗಳ ಸಂಖ್ಯೆ ಎಷ್ಟು ಎಂದು ನೀವು ಕೇಳಿದರೆ, ಅಚ್ಚರಿ ಪಡಬಹುದು. ಎರಡೂ ಜಿಲ್ಲೆಗಳಿಂದ ಬಂದ ಅರ್ಜಿಗಳ ಸಂಖ್ಯೆ ಕೇವಲ 31. ಇದರಲ್ಲಿ 27 ಅರ್ಜಿಗಳು ದಕ್ಷಿಣ ಕನ್ನಡದಿಂದ ಬಂದಿದ್ದರೆ, ಕೇವಲ 4 ಅರ್ಜಿಗಳು ಉಡುಪಿ ಜಿಲ್ಲೆಯಿಂದ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದ ಒಟ್ಟು 27 ಅರ್ಜಿಗಳ ಪೈಕಿ 12 ಅರ್ಜಿಗಳಷ್ಟೇ ಸರಿಯಾಗಿ ಭರ್ತಿಯಾಗಿದೆ ಎಂದರೆ ನೀವು ನಂಬಲೇಬೇಕು. ಉಳಿದ ಅರ್ಜಿಗಳು ಅಪೂರ್ಣವಾಗಿದೆ ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕಾರಿಗಳು ಈದಿನ ಡಾಟ್ ಕಾಮ್ಗೆ ನೀಡಿದ್ದಾರೆ.

ಏನಿದು ತರಬೇತಿ ಯೋಜನೆ?
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಳೆದ ಸೆಪ್ಟೆಂಬರ್ 22ರಂದು 2025-26ನೇ ಸಾಲಿಗೆ 60 ದಿನಗಳ ವಸತಿ ಸಹಿತ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಯನ್ನು ಪ್ರತಿಷ್ಠಿತ ಸಂಸ್ಥೆಯ ಮೂಲಕ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿತ್ತು. ಸದರಿ ತರಬೇತಿಗೆ ಅರ್ಹ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 2025ರ ಅಕ್ಟೋಬರ್ 3ರೊಳಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿತ್ತು. ಈ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸುವಂತೆ ಸೂಚಿಸಿತ್ತು. ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಕರಾವಳಿ ಜಿಲ್ಲೆಗಳ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳು ಆಸಕ್ತಿಯನ್ನೇ ತೋರಿಸಿಲ್ಲ. ಸದ್ಯ ಈ ಬೆಳವಣಿಗೆ, ಪೊಲೀಸ್ ಇಲಾಖೆಗೆ ಸೇರಲು ಬಯಸುವ ಅಲ್ಪಸಂಖ್ಯಾತ ಸಮುದಾಯದ ‘ನಿರಾಸಕ್ತಿ’ಯನ್ನು ಬಹಿರಂಗಗೊಳಿಸಿದೆ.
ಅರ್ಜಿ ಸಲ್ಲಿಸಿದವರ ಜಿಲ್ಲಾವಾರು ವಿವರ ಹೇಗಿದೆ?
2025ರ ಅಕ್ಟೋಬರ್ 3ರೊಳಗೆ ನೀಡಲಾಗಿದ್ದ ಅವಕಾಶದಲ್ಲಿ ಈವರೆಗೆ ಅರ್ಜಿ ಸಲ್ಲಿಸಿದವರ ವಿವರವನ್ನು ಅಲ್ಪಸಂಖ್ಯಾತರ ಇಲಾಖೆಯು ಈದಿನ ಡಾಟ್ ಕಾಮ್ಗೆ ನೀಡಿದ್ದು, ರಾಜ್ಯದ ಒಟ್ಟು 31 ಜಿಲ್ಲೆಗಳಿಂದ ಒಟ್ಟು 1996 ಅಭ್ಯರ್ಥಿಗಳು ಪೊಲೀಸ್ ಕಾನ್ಸ್ಟೇಬಲ್ ಆಗಲು ತರಬೇತಿ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇವುಗಳ ಪೈಕಿ 690 ಅರ್ಜಿಗಳು ಅಪೂರ್ಣವಾದದ್ದು.
1210 ಮಂದಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ರಾಜ್ಯದ ನಾನಾ ಜಿಲ್ಲೆಗಳಿಂದ ಅರ್ಜಿ ಸಲ್ಲಿಸಿದ್ದಾರೆ. ಉಳಿದಂತೆ ಜೈನ ಸಮುದಾಯದಿಂದ 64 ಮಂದಿ, ಕ್ರಿಶ್ಚಿಯನ್ ಸಮುದಾಯದಿಂದ 19, ಬೌದ್ಧ ಸಮುದಾಯದಿಂದ 10 ಹಾಗೂ ಪಾರ್ಸಿಯಿಂದ ಮೂರು ಮಂದಿ ಕಾನ್ಸ್ಟೇಬಲ್ ಆಗಲು ತರಬೇತಿ ಬಯಸಿ ಅರ್ಜಿ ಸಲ್ಲಿಸಿದವರು.
ಬೆಳಗಾವಿ ಜಿಲ್ಲೆಯಿಂದ ಅತ್ಯಧಿಕ ಅಭ್ಯರ್ಥಿಗಳು ಅಂದರೆ 231 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆ ನಂತರ ಕ್ರಮವಾಗಿ ವಿಜಯಪುರ ಜಿಲ್ಲೆಯಿಂದ 215, ರಾಯಚೂರು ಜಿಲ್ಲೆಯಿಂದ 207 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಮೂರು ಜಿಲ್ಲೆಗಳಿಂದಷ್ಟೇ 200ಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಬೆಳಗಾವಿ ಜಿಲ್ಲೆಯಿಂದ ಸಲ್ಲಿಕೆಯಾದ ಒಟ್ಟು 231 ಅರ್ಜಿಗಳ ಪೈಕಿ ಮುಸ್ಲಿಂ ಸಮುದಾಯದಿಂದ ಒಟ್ಟು 119 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೆ, ಉಡುಪಿ ಜಿಲ್ಲೆಯಿಂದ ಕೇವಲ ಓರ್ವ ಮುಸ್ಲಿಂ ಅಭ್ಯರ್ಥಿ ಅರ್ಜಿ ಸಲ್ಲಿಸಿದ್ದಾರೆ. ಇನ್ನುಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇವಲ 10 ಮಂದಿ ಮುಸ್ಲಿಂ, ಇಬ್ಬರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಗಳು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಗೆ ಸೇರಲು ಬಯಸುವ ಅಲ್ಪಸಂಖ್ಯಾತ ಸಮುದಾಯದ ಮಂದಿ ಬಯಸುತ್ತಿಲ್ಲ ಎಂಬುದಕ್ಕೆ ಈ ಅಂಕಿ-ಅಂಶಗಳು ತಿಳಿಸುತ್ತಿವೆ.
ಇದಲ್ಲದೆ, ಇತ್ತೀಚೆಗೆ ಅಲ್ಪಸಂಖ್ಯಾತರ ಇಲಾಖೆಯು ಕೆಎಎಸ್ ಸೇರಿದಂತೆ ಐಎಎಸ್ ತರಬೇತಿ ನೀಡುವುದಕ್ಕೂ ಅರ್ಜಿ ಆಹ್ವಾನಿಸಿತ್ತಾದರೂ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಕೇವಲ 17 ಮಂದಿ ಅರ್ಜಿ ಸಲ್ಲಿಸಿದ್ದರು. ಇನ್ನು ಕೆಪಿಎಸ್ಸಿ ವಿಚಾರ ಬಂದಾಗಲೂ ಕಥೆ ಬೇರೇನಿಲ್ಲ. ಈ ಉಭಯ ಜಿಲ್ಲೆಯಿಂದ ಅರ್ಜಿ ಸಲ್ಲಿಸಿದ್ದವರ ಸಂಖ್ಯೆ ಕೇವಲ ಏಳು ಮಂದಿ ಎಂದರೆ ನಂಬಲೇಬೇಕು. ಸರ್ಕಾರಿ ಸೇವೆಗೆ ಸೇರುವುದು, ಸೇರದೇ ಇರುವುದು ಬೇರೆ ಮಾತಾದರೂ ಅದಕ್ಕೆ ಪ್ರಯತ್ನಿಸುವವರ ಸಂಖ್ಯೆಯೂ ಎರಡಂಕೆ ದಾಟಲ್ಲ ಅನ್ನುವುದೇ ಕರಾವಳಿಗರ ಮಟ್ಟಿಗೆ ವಿಪರ್ಯಾಸದ ಸಂಗತಿ.

ಈ ರೀತಿಯ ಅಂಕಿ-ಅಂಶಗಳು ಮಂಗಳೂರು ಅಥವಾ ಕರಾವಳಿ ಭಾಗದ ಅಲ್ಪಸಂಖ್ಯಾತ ಸಮುದಾಯದ ಜನರದ್ದು ಮಾತ್ರವಲ್ಲ. ಎಲ್ಲ ಸಮುದಾಯಗಳದ್ದೂ ಕೂಡ ಇದೇ ಕಥೆ ಎಂಬಂತಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ, “ಮಂಗಳೂರು ಅಥವಾ ಕರಾವಳಿ ಭಾಗದವರು ಪೊಲೀಸ್ ಬಿಡಿ, ಸರ್ಕಾರಿ ಕೆಲಸಕ್ಕೇನೆ ಸೇರಲ್ಲ” ಎಂಬ ಮಾತು ಜನಜನಿತವಾಗಿದೆ.
ಖಾಸಗಿ ವಲಯದಲ್ಲಿ ಹೆಚ್ಚು ಆಸಕ್ತಿ
ಮಂಗಳೂರು ಸೇರಿದಂತೆ ಕರಾವಳಿಯ ನಗರಗಳು ಉದ್ಯಮ ಸ್ನೇಹಿ ನಗರವಾಗಿ ಗುರುತಿಸಿಕೊಂಡಿದೆ. ಇಲ್ಲಿ ಮಂಗಳೂರು ರಿಫೈನರಿ, ಪೋರ್ಟ್, IT/BT ಕಂಪನಿಗಳು ಮತ್ತು ಬ್ಯಾಂಕಿಂಗ್ ವಲಯವು ಹೆಚ್ಚು ಉದ್ಯೋಗಗಳನ್ನು ಒದಗಿಸುತ್ತವೆ. ಹೀಗಾಗಿ, ಕರಾವಳಿ ಭಾಗದ ಯುವಜನತೆ, ‘ಹೈ-ಸ್ಯಾಲರಿ’ ಖಾಸಗಿ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸರ್ಕಾರಿ ಉದ್ಯೋಗಗಳಲ್ಲಿ ವೇತನ ಕಡಿಮೆ ಇದೆ ಎಂಬ ಭಾವನೆ ಕೂಡ ಜನರ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ.
ಅಲ್ಲದೇ, ಕರಾವಳಿಯ ಯುವಕರು ದೂರದ ದುಬೈ, ಸೌದಿ ಅರೇಬಿಯಾ, ಕತಾರ್, ಒಮನ್ ಸೇರಿದಂತೆ ಇತರೆ ಭಾಗಗಳಿಗೆ ತೆರಳಿ ಅಲ್ಲಿ ಉತ್ತಮ ಸಂಬಳದ ಉದ್ಯೋಗ ಅರಸಿ ಹೋಗುವ ಪರಿಪಾಠ ಈಗಲೂ ಮುಂದುವರಿದಿದೆ. ಹೀಗಾಗಿಯೇ, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಹಾಕುವ ಗೋಜಿಗೇ ಹೋಗುತ್ತಿಲ್ಲ.

ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್, “ಕರಾವಳಿಯ ಜನರು ಈ ಹಿಂದೆಯಿಂದಲೂ ಸರ್ಕಾರಿ ಸೇವೆಗೆ ಸೇರಿಕೊಳ್ಳುವುದರ ಬಗ್ಗೆ ನಿರಾಸಕ್ತಿಯನ್ನು ಪಾಲಿಸುತ್ತಾ ಬಂದಿದ್ದಾರೆ. ಸರ್ಕಾರಿ ಸೇವೆಗೆ ಸೇರಿ ಎಂದು ಸೋಷಿಯಲ್ ಮೀಡಿಯಾ ಮೂಲಕವೂ ಎಲ್ಲ ಪ್ರಯತ್ನ ನಡೆಸುತ್ತಿದ್ದೇವೆ. ಆದರೂ, ಹೇಳಿಕೊಳ್ಳುವಷ್ಟು ಸ್ಪಂದನೆ ಸಿಗುತ್ತಿಲ್ಲ ಅನ್ನುವುದೇ ಬೇಸರದ ಸಂಗತಿ. ಉದ್ಯೋಗ, ವೇತನ ಅಂತ ಬಂದಾಗ ಖಾಸಗಿ ವಲಯಕ್ಕೇ ಹೆಚ್ಚು ಮಣೆ ಹಾಕುತ್ತಾರೆ” ಎಂದು ತಿಳಿಸಿದರು.

“ಅಲ್ಪಸಂಖ್ಯಾತರ ಇಲಾಖೆಯು ಇತ್ತೀಚೆಗೆ ಕರೆದಿದ್ದ ತರಬೇತಿ ಯೋಜನೆಗೂ ನಿರೀಕ್ಷಿತ ಸ್ಪಂದನೆ ಬಂದಿಲ್ಲ. ಬೇರೆ ಜಿಲ್ಲೆಗಳಲ್ಲಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದರೂ, ಕರಾವಳಿ ಭಾಗದಲ್ಲಿ ಫಲ ನೀಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇವಲ 10 ಮಂದಿ ಮುಸ್ಲಿಂ, ಇಬ್ಬರು ಕ್ರಿಶ್ಚಿಯನ್ ಸಮುದಾಯದ ಅಭ್ಯರ್ಥಿಗಳು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ಸೇರಿದಂತೆ ಎಲ್ಲ ಸರ್ಕಾರಿ ಸೇವೆಗೆ ಸೇರಲು ಕರಾವಳಿಯ ಯುವ ಜನತೆ ಮನಸ್ಸು ಮಾಡಬೇಕು” ಎಂದು ಕಳಕಳಿಯಿಂದ ಜಿನೇಂದ್ರ ಕೋಟ್ಯಾನ್ ಕರಾವಳಿಗರಲ್ಲಿ ಈದಿನ ಡಾಟ್ ಕಾಮ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ 8500 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧಾರ ಕೈಗೊಂಡಿರುವ ಸರ್ಕಾರ
ಕರ್ನಾಟಕ ಸರ್ಕಾರವು ಮುಂಬರುವ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ 8500 ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ನಿರ್ಧರಿಸಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಗೃಹ ಸಚಿವ ಪರಮೇಶ್ವರ್, “ಕಾನ್ಸ್ಟೇಬಲ್, ಪಿಎಸ್ಐ ನೇಮಕಾತಿಗೆ ಮುಖ್ಯಮಂತ್ರಿಗಳು ಅನುಮತಿ ಕೊಟ್ಟಿದ್ದಾರೆ. ಕೆಎಸ್ಆರ್ಪಿ, ಸಿಎಆರ್, ಸಿವಿಲ್ ಸೇರಿದಂತೆ 16 ಸಾವಿರ ಪೊಲೀಸ್ ಪೇದೆ ಹುದ್ದೆಗಳು ಖಾಲಿ ಇವೆ. 8500 ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಒಂದು ವಾರದಲ್ಲಿ ನೋಟಿಫಿಕೇಷನ್ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.





