ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ಸಂಪೂರ್ಣ ಹದಗೆಟ್ಟಿರುವ ಹೊಂಡ ಗುಂಡಿಗಳಿಂದ ತುಂಬಿರುವ ಹೆದ್ದಾರಿ ಟೋಲ್ ರಸ್ತೆ, ಉರಿಯದ ಬೀದಿ ದೀಪಗಳು, ಪಾದಚಾರಿಗಳಿಗೆ ದಾರಿಯ ಸಮಸ್ಯೆ ಹಾಗೂ ಸ್ಥಳೀಯ ವಾಹನಗಳಲ್ಲಿ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿಸಿರುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುತ್ತಿರುವುದನ್ನು ಖಂಡಿಸಿ ಸಾರ್ವಜನಿಕರು ಕುಂದಾಪುರದ ಸಾಸ್ತಾನ ಟೋಲ್ ಗೆ ಮುತ್ತಿಗೆ ಹಾಕಲು ಮುಂದಾದ ಘಟನೆ ನಡೆದಿದೆ. ಕೊನೆಗೆ ಪೋಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ಮನವೊಲಿಸಿದ್ದಾರೆ.
ಸಂಸ್ಥೆಯ ಹೆಸರಿನಲ್ಲಿ ನೋಂದಾಯಿತ ವಾಹನಗಳಿಗೆ ಟೋಲ್ ವಿಧಿಸುವ ನೆಪದಲ್ಲಿ ಸ್ಥಳೀಯ ಶಾಲೆಗಳ ವಾಹನಕ್ಕೆ ಹಾಗೂ ಸ್ಥಳೀಯ ಕೆಲವು ಉದ್ಯಮಗಳ ವಾಹನಗಳಿಗೆ ಟೋಲ್ ವಿಧಿಸುವುದರ ಮೂಲಕ ಟೋಲ್ ಗೇಟ್ ನವರು ಒಡೆದು ಅಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಸಾಸ್ತಾನ ಟೋಲ್ ಗೇಟ್ ಹೋರಾಟ ಸಮಿತಿಯ ಅಡ್ವೊಕೇಟ್ ಶ್ಯಾಮ್ ಸುಂದರ್ ನಾಯರಿ, “ಇಲ್ಲಿ ಟೋಲ್ ಸಂಗ್ರಹಿಸುತ್ತಾರೆ. ಆದರೆ ಸಾರ್ವಜನಿಕರಿಗೆ ಯಾವುದೇ ರೀತಿಯ ಅನುಕೂಲ ಮಾಡಿಕೊಡುವುದಿಲ್ಲ. ದ್ವಿಚಕ್ರ ವಾಹನಗಳಿಗೆ ಸರ್ವೀಸ್ ರಸ್ತೆ ಮಾಡಿ ಕೊಡಬೇಕು ಎನ್ನುವ ಕಾನೂನು ಇದೆ. ನಾವು ಎಷ್ಟೋ ಬಾರಿ ಹೇಳಿದ್ದೇವೆ. ಹೇಳಿದ ಕೂಡಲೇ ಮಾಡಿ ಕೊಡುತ್ತೇವೆ, ಮೇಲ್ವಿಚಾರಕರಿಗೆ ತಿಳಿಸಿದ್ದೇವೆ, ಪತ್ರ ರವಾನಿಸಿದ್ದೇವೆ, ದೆಹಲಿಗೆ ಪತ್ರ ಹೋಗಿದೆ ಎಂದು ಸಬೂಬು ಹೇಳುತ್ತಾರೆ. ಕಳೆದ ಜೂನ್ ನಲ್ಲಿ ಜಿಲ್ಲಾಧಿಕಾರಿ ಸಹ ಮೀಟಿಂಗ್ ಮಾಡಿದ್ದಾರೆ. ಅದರೂ ಕೂಡ ಯಾವುದೇ ಸ್ಪಂದನೆ ಇಲ್ಲ” ಎಂದು ಕಿಡಿಕಾರಿದರು.

ಸ್ಥಳೀಯ ಶಾಲಾ ವಾಹನಗಳಿಗೆ ವಿನಾಯಿತಿ ನೀಡಬೇಕು, ಸಂಘ ಸಂಸ್ಥೆಗಳಿಗೆ ಮತ್ತು ಈ ಹಿಂದೆ ಇದ್ದ ವಿನಾಯಿತಿಯನ್ನು ಮುಂದುವರೆಸಿಕೊಂಡು ಬರಬೇಕು ಮತ್ತು ಇಲ್ಲಿ ರಸ್ತೆಯಲ್ಲಿ ಆದ ಹೊಂಡಗಳನ್ನು ಇನ್ನು ಎರಡು ಮೂರು ದಿನಗಳ ಒಳಗೆ ಮುಚ್ಚಬೇಕು ಎಂದು ಆಗ್ರಹಿಸಿದ ಅವರು, ನಮ್ಮ ಮನವಿಗೆ ಯಾವುದೇ ರೀತಿಯ ಸ್ಪಂದನೇ ನೀಡದಿದ್ದರೆ ಮುಂದಿನ ದಾರಿಯೇ ಹೋರಾಟ, ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು.
ಈ ದಿನ.ಕಾಮ್ ಜೊತೆ ಮಾತನಾಡಿದ ಸಾಸ್ತಾನ ಟೋಲ್ ಗೇಟ್ ಹೋರಾಟ ಸಮಿತಿಯ ಪ್ರತಾಪ್ ಶೆಟ್ಟಿ, “ನಮ್ಮ ಸಾಸ್ತಾನಕ್ಕೆ ಒಂದು ಶನಿಯನ್ನು ತಂದು ಹಾಕಿದ್ದಾರೆ. ಈ ಶನಿ ಇಲ್ಲದಿರುತ್ತಿದ್ದರೆ ನಾವು ನೆಮ್ಮದಿಯಿಂದ ಇರುತ್ತಿದ್ದೆವು. ಇಲ್ಲಿ ಸೇರುವ ಅವಶ್ಯಕತೆ ಸಹ ಇರಲಿಲ್ಲ. ಈ ಟೋಲ್ ಗೇಟ್ ನಮ್ಮ ಅವಶ್ಯಕತೆಗೆ ಮಾಡಿದಲ್ಲ, ಅವರ ಲಾಭಕ್ಕೋಸ್ಕರ ಮಾಡಿರುವುದು. ನಮ್ಮ ಜೀವವನ್ನು ತೆಗೆಯುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

“ಕಳೆದ 2016ರಿಂದ ಹೋರಾಟ ಹೋರಾಟ ಮಾಡಿಕೊಂಡು ಈಗಲೂ ಸಹ ಹೋರಾಟವೇ ಆಗಿದೆ ಬಿಟ್ಟಿದೆ. ಮೊದಲಿದ್ದ ನವಯುಗ ಕಂಪನಿಯವರು ಸ್ವಲ್ಪ ಪ್ಯಾಚ್ ವರ್ಕ್ ಮಾಡಿ ಅಂದರೆ ಅದನ್ನು ಅರ್ಧ ಮಾಡುತ್ತಿದ್ದರು. ಇವರು ಯಾರೋ ಇಂಗ್ಲೆಂಡ್ ಮೂಲದ ಕಂಪನಿ ಕೆ ಕೆ ಅರ್ ಎಂದು ತಿಳಿಸಿದ್ದಾರೆ. ಇವರು ಬಂದ ನಂತರ, ಈವರೆಗೆ ಒಂದೇ ಒಂದು ಕೆಲಸ ಸರಿ ಮಾಡಿದ್ದಿಲ್ಲ. ಟೋಲ್ ತನಕ ರಸ್ತೆ ಚೆನ್ನಾಗಿ ಮಾಡಿದ್ದಾರೆ. ಅದರ ಮುಂದಿನ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮಣಿಪಾಲ | ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಶಾಲಾ ಮಕ್ಕಳ ರಿಕ್ಷಾ: ಮೂವರಿಗೆ ಗಾಯ
ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ಕೊಟ್ಟು, ಕಂಪನಿಯ ಜೊತೆ ಮತ್ತು ಹೋರಾಟ ಸಮಿತಿ ಜೊತೆ ಮಾತನಾಡಿ ಸ್ಥಳೀಯರಿಗೆ ರಿಯಾಯಿತಿ ಮುಂದುವರೆಸುವಂತೆ ಮತ್ತು ರಸ್ತೆ ಹೊಂಡ ಗುಂಡಿಗಳನ್ನು ಮುಚ್ಚುವಂತೆ ಆಶ್ವಾಸನೆಯನ್ನು ನೀಡಿದ್ದಾರೆ.
ಒಟ್ಟಿನಲ್ಲಿ, ಈ ಟೋಲ್ ಗೇಟ್ನಿಂದಾಗಿ ಪ್ರತಿನಿತ್ಯ ಓಡಾಡುವ ಜನ ಸಾಮಾನ್ಯರ ಜೀವನ ಕಷ್ಟಕರವಾಗಿದೆ. ದುಡಿದದ್ದೆಲ್ಲವನ್ನು ಟೋಲ್ ಕಟ್ಟಿಕೊಂಡು ಕೂತುಕೊಂಡರೆ ಹೊಟ್ಟೆಗೆ ತಿನ್ನುವುದಾದರೂ ಏನು ಎಂಬುದು ಸಾರ್ವಜನಿಕರ ಪ್ರಶ್ನೆ. ಈ ಪ್ರಶ್ನೆ ಈವರೆಗೆ ಕೇವಲ ಪ್ರಶ್ನೆಯಾಗಿಯೇ ಉಳಿದಿದೆ.





ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




