“ವಕ್ಫ್ ಆಸ್ತಿಯನ್ನು ಬಿಟ್ಟುಕೊಡಬೇಕು, ಅದಂತೂ ಹೌದು. ಅಷ್ಟೇ ಅಲ್ಲದೇ, ಅಗತ್ಯಬಿದ್ದರೆ ಭಾರತ ದೇಶದಿಂದಲೇ ಓಡುವ ಪರಿಸ್ಥಿತಿ ನಿರ್ಮಾಣ ಮಾಡಬಲ್ಲ ತಾಕತ್ತಿದೆ”…ಹೀಗಂತ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿರುವುದು, ನಮೋ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ.
ವಿಜಯಪುರದಲ್ಲಿ ವಕ್ಫ್ ಕಾನೂನು ರದ್ದತಿಗೆ ಹಾಗೂ ಸಾರ್ವಜನಿಕರ, ರೈತರ, ಸಂಘ-ಸಂಸ್ಥೆಗಳ, ದೇವಸ್ಥಾನಗಳ, ಸರ್ಕಾರಿ ಆಸ್ತಿ/ಜಮೀನುಗಳನ್ನು ವಕ್ಪ್ ಆಸ್ತಿ ಎಂದು ಉತಾರೆಯಲ್ಲಿ ನಮೂದಿಸುವುದನ್ನು ಕೈಬಿಡುವಂತೆ ಒತ್ತಾಯಿಸಿ ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನ ಎದುರು ಪ್ರತಿಭಟನಾ ಸಭೆಯನ್ನು ಶಾಸಕ ಯತ್ನಾಳ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಈ ರೀತಿಯ ದ್ವೇಷ ಭಾಷಣಗೈದಿದ್ದಾರೆ.
ಅಲ್ಲದೇ, “ಕರ್ನಾಟಕದ ನೆಲದಲ್ಲಿ ಮುಸಲ್ಮಾನರ ಅತ್ಯಂತ ಹೆಚ್ಚು ಸ್ಲೀಪರ್ ಸೆಲ್ ಇರುವುದು ವಿಜಯಪುರ ಜಿಲ್ಲೆಯಲ್ಲಿ. ಇದು ಉಗ್ರವಾದಿಗಳ ಸ್ಲೀಪರ್ ಸೆಲ್‌ನ ತವರೂರು ಆಗಿದೆ. ಇದನ್ನು ಎನ್‌ಎಐ ಕೂಡ ಖಚಿತಪಡಿಸಿದೆ. ಎಲ್ಲೋ ಬಾಂಬ್ ದಾಳಿಯಾದರೆ ಅದರ ಜಾಡು ಹುಡುಕುವುದು ವಿಜಯಪುರದಲ್ಲಿ. ಈ ಸ್ಲೀಪರ್ ಸೆಲ್‌ಗಳು ಸದ್ದಿಲ್ಲದೇ ಕೆಲಸ ಮಾಡುತ್ತಿದ್ದಾರೆ. ವಿಜಯಪುರದಿಂದಲೇ ಸ್ಲೀಪರ್ ಸೆಲ್‌ಗಳನ್ನು ರಫ್ತು ಮಾಡುತ್ತಿದ್ದಾರೆ” ಎಂದು ಇಲ್ಲಸಲ್ಲದ ಆರೋಪವನ್ನು ಸೂಲಿಬೆಲೆ ಮಾಡಿದ್ದಾರೆ.
“ವಕ್ಫ್ ಎನ್ನುವುದು ದೇಶವನ್ನು ಮತ್ತೊಮ್ಮೆ ಇಭ್ಭಾಗವಾಗಿಸುವ ಕೆಟ್ಟ ಪ್ರಯತ್ನ. ಪ್ರತಿ ರಾಜ್ಯದಲ್ಲೂ ವಕ್ಫ್ ಬೋರ್ಡ್ ಇದೆ. ವಕ್ಫ್ ಬೋರ್ಡ್ ಕಮಿಟಿಗೆ ಬೇರೆ ಧರ್ಮೀಯರು ಇರುವಂತಿಲ್ಲ. ಆದರೇ ನಮ್ಮ ದೇವಸ್ಥಾನದ ಆಡಳಿತ ಮಂಡಳಿಗೆ ಮುಸ್ಲಿಂ, ಕ್ರಿಶ್ಚಿಯರನ್ನು ನಿಯೋಜಿಸಬಹುದು ಎಂದರೆ ಯಾವ ನ್ಯಾಯ?” ಎಂದು ಸೂಲಿಬೆಲೆ ಪ್ರಶ್ನಿಸಿದ್ದಾರೆ.
“ಹಿಂದೂಗಳ ಮತವನ್ನೇ ಪಡೆದುಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಇದು ಮುಸಲ್ಮಾನರ ಸರ್ಕಾರ ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಮತ ಹಾಕಿದ ಹಿಂದೂಗಳಿಗೆ ಕಪಾಳಕ್ಕೆ ಹೊಡೆದಂತೆ ಮಾಡಿದೆ. ಹೀಗಾಗಿ ಕಾಂಗ್ರೆಸ್‌ಗೆ ಮತ ಹಾಕಿದ ಹಿಂದೂಗಳು ಕಣ್ಣೀರು ಹಾಕಿ ಪ್ರಾಯಶ್ಚಿತ್ತ ಪಡಬೇಕು” ಎಂದು ಇದೇ ವೇಳೆ ನಮೋ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಾಂಗ್ರೆಸ್‌ನ ವಿರುದ್ಧವೂ ಕಿಡಿಕಾರಿದ್ದಾರೆ.
ಈ ಪ್ರತಿಭಟನೆಯಲ್ಲಿ ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, “ವಕ್ಫ್ ಕಾಯ್ದೆ ಒಂದು ರೀತಿ ಲ್ಯಾಂಡ್ ಜಿಹಾದ್‍ನ ಒಂದು ಭಾಗ ಆಗಿದೆ” ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
“ವಕ್ಫ್ ಕಾಯ್ದೆಯನ್ನು ಲವ್ ಜಿಹಾದ್ ಮಾದರಿಯಲ್ಲಿಯೇ ಸರ್ಕಾರ ಲ್ಯಾಂಡ್ ಜಿಹಾದ್ ಮಾಡಲು ಹೊರಟಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ದೇಶದಲ್ಲಿ ಸಂವಿಧಾನ ಪ್ರಕಾರ ಆಡಳಿತ ನಡೆಯುತ್ತಿಲ್ಲ. ಕಾಂಗ್ರೆಸ್ ನಮ್ಮ ರಾಷ್ಟ್ರ, ನಮ್ಮ ಶ್ರೇಷ್ಠ ಸಂವಿಧಾನವನ್ನು ಪ್ರತಿನಿಧಿಸುತ್ತಿಲ್ಲ, ಅದು ಕೇವಲ ಘಜ್ನಿ, ಘೋರಿ, ಸುಲ್ತಾನನ್ನು ಪ್ರತಿನಿಧಿಸುತ್ತಿದೆ. ಸುಲ್ತಾನನ ಕಾಲ ಮುಗಿದು ಹೋಗಿದೆ” ಎಂದು ಹೇಳಿಕೆ ನೀಡಿದ್ದಾರೆ. ಎಂದರು.
“ಹಿಂದುಳಿದವರು, ದಲಿತರು, ಬಡವರಿಂದ ಹಿಂದೂತ್ವದ ಹೋರಾಟ ಉಳಿದಿದೆ, ಶ್ರೀಮಂತ ಹಿಂದೂಗಳು ಹೋರಾಟಕ್ಕೆ ಬಾರದಿದ್ದರೂ ಸಹ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸವನ್ನಾದರೂ ಮಾಡಬೇಕು. ಹಿಂದೂಪರ ಮಾತನಾಡುವ ಎಲ್ಲ ರಾಜಕಾರಣಿಗಳು ಒಂದಾಗಬೇಕು” ಎಂದು ಇದೇ ವೇಳೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಸಾಮರಸ್ಯವನ್ನು ಹಾಳು ಮಾಡುವ ಹುನ್ನಾರ: ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್
“ವಿಜಯಪುರ ಶಾಸಕ ಯತ್ನಾಳ ಹಾಗೂ ಅವರ ತಂಡ ವಕ್ಫ್ ಕಾಯ್ದೆ ಕುರಿತು ಹಿಂದೂ ಸಮಾಜದವರಲ್ಲಿ ತಪ್ಪು ಮಾಹಿತಿ ನೀಡಿ, ಗೊಂದಲ ಮೂಡಿಸುವ ಮೂಲಕ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ” ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಆರೋಪಿಸಿದ್ದಾರೆ.
“ಶಾಸಕ ಯತ್ನಾಳ ಅವರು ಜಿಲ್ಲೆಯಲ್ಲಿ ಸಾಮರಸ್ಯವನ್ನು ಹಾಳು ಮಾಡುವುದನ್ನು ಬಿಟ್ಟು ನಗರದ ಅಭಿವೃದ್ಧಿಗೆ ಗಮನ ನೀಡಬೇಕು. ನಗರದಲ್ಲಿ ಹಾಳಾದ ರಸ್ತೆಗಳ ಅಭಿವೃದ್ಧಿ ಮಾಡಬೇಕು. ಸಚಿವ ಜಮೀರ್ ಅಹ್ಮದ ಖಾನ್ ಅವರು, ಜಿಲ್ಲೆಯಲ್ಲಿನ 10 ಸಾವಿರ ಎಕರೆ ವಕ್ಫ್ ಭೂಮಿ ಸಮೀಕ್ಷೆ ಮಾಡಲು, ಉತಾರೆ ಎಂಟ್ರಿ ಮಾಡಲು ತಿಳಿಸಿದ್ದಾರೆ. ಯಾವುದೇ ರೈತರ ಆಸ್ತಿಯನ್ನು ವಕ್ಫ್‌ಗೆ ವರ್ಗಾಯಿಸಲು ಹೇಳಿಲ್ಲ. ಜಿಲ್ಲೆಯಲ್ಲಿ ವಕ್ಫ್‌ಯಿಂದ ಯಾವುದೇ ರೈತರಿಗೆ ಅನ್ಯಾಯವಾದರೆ ನಾವೇ ಅವರ ಜೊತೆ ನಿಂತು ಹೋರಾಟ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಸುಪ್ರೀಂ ಕೋರ್ಟ್ ನ್ಯಾಯದೇವತೆ ಪ್ರತಿಮೆಯ ಕಣ್ಣಿಗಿದ್ದ ಕಪ್ಪು ಬಟ್ಟೆ ತೆರವು
“ಶಾಸಕ ಯತ್ನಾಳ ಅವರು, ಮೊದಲು ಬಕ್ರೀದ್, ಈದ್-ಮಿಲಾದ, ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದಾರೆ. ಆದರೆ ಇಂದು ಮುಸ್ಲಿಂ ವಿರೋಧಿ ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣಕ್ಕಾಗಿ ಜಾತಿ, ಧರ್ಮವನ್ನು ಬಳಕೆ ಮಾಡಿಕೊಳ್ಳಬಾರದು. ಜಾತಿ, ಧರ್ಮ ರಾಜಕಾರಣ ಸಮಾಜದಲ್ಲಿ ಅಶಾಂತಿ ತಂದೊಡ್ಡುತ್ತದೆ. ನಗರದಲ್ಲಿ ಹಿಂದೂ-ಮುಸ್ಲಿಂ ಒಟ್ಟಾಗಿದ್ದೇವೆ. ಹಿಂದೂಗಳು ಯಾರೂ ಕೂಡ ಯತ್ನಾಲ್ ಅವರ ಮಾತನ್ನು ಕೇಳಬಾರದು” ಎಂದು ತಿಳಿಸಿದ್ದಾರೆ.





