ಬ್ರಾಹ್ಮಣ ಸಮುದಾಯ ಮುಂದುವರಿದ್ದಿದ್ದರೂ ನಮ್ಮಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಹಿಂದುಳಿದಿದ್ದಾರೆ. ಅವರೆಲ್ಲರ ಸಮಸ್ಯೆ ಪರಿಹರಿಸಲು ನಾವೆಲ್ಲ ಒಗ್ಗಟ್ಟಾಗಿ ಪ್ರಯತ್ನಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಬೆಂಗಳೂರಿನ ಬೊಬ್ಬುರಕಮ್ಮೆ ಸಭಾಭವನದಲ್ಲಿ ನಡೆದ ಆಚಾರ್ಯತ್ರಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಪ್ರ ಸಮುದಾಯದ ಸ್ವಂತ ಉದ್ಯಮ ನಡೆಸುವವರಿಗೆ ಕಿರು ಸಾಲಯೋಜನೆಯ ಫಲಾನುಭವಿಗಳಿಗೆ ಪತ್ರ ವಿತರಿಸಿ, ಚಾಣಕ್ಯ ಆಡಳಿತ ತರಬೇತಿ ಯೋಜನೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
“ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ನಾವೇ ಸ್ಥಾಪಿಸಿದ್ದು. ನಮ್ಮ ಸಮಾಜ ಅತ್ಯಂತ ಸ್ವಾಭಿಮಾನಿ ಸಮಾಜ. ಕಷ್ಟದಿಂದ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರು ನಮ್ಮಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮುಂದುವರೆದ ಸಮಾಜ ಎಂಬ ಹಣೆಪಟ್ಟಿ ಇದ್ದರೂ, ಬ್ರಾಹ್ಮಣ ಸಮುದಾಯದಲ್ಲಿಯೂ ಬಡವರಿದ್ದಾರೆ, ಹತ್ತಾರು ಸಮಸ್ಯೆಗಳು ಇವೆ. ಯಾರು ಏನೇ ಹೇಳಲಿ. ನಮ್ಮ ಸರ್ಕಾರ ಬ್ರಾಹ್ಮಣರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ, ಮುಂದೆ ಕೂಡ ಸ್ಪಂದಿಸುತ್ತೇವೆ” ಎಂದು ತಿಳಿಸಿದರು.

“ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರದ ಉದ್ದೇಶ ಎಲ್ಲ ಸಮಾಜ ಬೆಳೆಯಬೇಕು ಎಂಬುದಾಗಿದೆ. ಕಷ್ಟದಲ್ಲಿ ಇದ್ದವರಿಗೆ ಸರ್ಕಾರದ ಸಹಾಯ ಸಿಗಬೇಕು ಎಂಬುದು ನಮ್ಮ ಉದ್ದೇಶ. ಬ್ರಾಹ್ಮಣರಿಗೆ ಸಮಸ್ಯೆಯೇ ಇಲ್ಲ ಎನ್ನುವುದು ಶುದ್ಧ ತಪ್ಪು. ನಾನಂತೂ ಸದಾ ನಿಮ್ಮ ಬೆಂಬಲಕ್ಕೆ ಇದ್ದೇನೆ. ನಮ್ಮ ಸಮುದಾಯದ ಬಡವರ ಸಮಸ್ಯೆ ಪರಿಹರಿಸಲು ಬದ್ಧನಿದ್ದೇನೆ” ಎಂದು ಸಚಿವರು ತಿಳಿಸಿದರು.
“ಜಾತಿಗಣತಿ ತಪ್ಪು ಅಂತ ಭಾವಿಸಬೇಡಿ. ಸಲ್ಲದ ವದಂತಿಗಳಿಗೆ ಕಿವಿಗೊಡಬೇಡಿ. ಸರಿಯಾದ, ವೈಜ್ಞಾನಿಕ ಮಾಹಿತಿ ಇದ್ದಾಗ ಮಾತ್ರ ಸರ್ಕಾರ ಸಮರ್ಪಕ ಯೋಜನೆ ರೂಪಿಸಲು ಸಾಧ್ಯ. ಜಾತಿ ಗಣತಿಯಿಂದ ಬ್ರಾಹ್ಮಣರಲ್ಲಿರುವ ಬಡವರು, ಇಲ್ಲಿಯ ಸಮಸ್ಯೆ ಸರಿಯಾಗಿ ತಿಳಿಯಲು ಸಾಧ್ಯವಾಗುತ್ತದೆ. ಆಗ ಹೊಸ ಹೊಸ ಯೋಜನೆ ಮಾಡಲು ಅನುಕೂಲವಾಗುತ್ತದೆ. ಬ್ರಾಹ್ಮಣ
ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸಲು ನಾನು ಸರ್ಕಾರದ ಮಟ್ಟದಲ್ಲಿ ಎಲ್ಲ ಸಹಕಾರ ನೀಡುತ್ತೇನೆ. ಅಧ್ಯಕ್ಷರಾದ ಅಸಗೋಡು ಜಯಸಿಂಹ ಅವರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಹಲವಾರು ಜನೋಪಯೋಗಿ ಕಾರ್ಯಕ್ರಮ ರೂಪಿಸಿದ್ದಾರೆ. ಯೋಜನೆಗಳ ಮಾಹಿತಿ ಜನರಿಗೆ ತಲುಪಿಸುವುದು, ಅರ್ಹರಿಗೆ ಸೌಲಭ್ಯ ವಿತರಣೆ ಆಗುತ್ತಿದೆ. ನಾವೆಲ್ಲ ಒಗ್ಗಟ್ಟಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸೋಣ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಸಗೋಡು ಜಯಸಿಂಹ ಮಾತನಾಡಿ, “ಬ್ರಾಹ್ಮಣ ಸಮುದಾಯದಲ್ಲಿ ಉದ್ಯಮಶೀಲತೆ ವೃದ್ಧಿಸುವಂತೆ ಪ್ರಸಕ್ತ ಸಾಲಿನಿಂದ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ.ಈಗಾಗಲೇ 1 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದು, 400 ಮಂದಿಯನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ. ಅದೇ ರೀತಿ, ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಸಮುದಾಯದ 100 ಅಭ್ಯರ್ಥಿಗಳಿಗೆ ತಲಾ 1 ಲಕ್ಷ ರೂಪಾಯಿ ಸಹಾಯ ಧನ ಸಹ ನೀಡಲಾಗುತ್ತಿದೆ” ಎಂದು ವಿವರಿಸಿದರು.
“ಮಂಡಳಿಯು ನಿರಂತರವಾಗಿ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ರಾಜ್ಯ ಸರ್ಕಾರ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಅಗತ್ಯ ಅನುದಾನ ನೀಡುತ್ತಿದ್ದು, ಸಮಸ್ತ ಬ್ರಾಹ್ಮಣ ಸಮುದಾಯದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಚಾರ್ಯತ್ರಯ ಜಯಂತೋತ್ಸವದ ಅಂಗವಾಗಿ ವಿಪ್ರ ಸಮುದಾಯದ ವಿವಿಧ ಕ್ಷೇತ್ರದ ಸಾಧಕರಾದ ಸಾಹಿತಿ, ಅನುವಾದಕಾರ ಬಿ.ಎಸ್.ಜಯಪ್ರಕಾಶ್ ನಾರಾಯಣ್, ಬಿ.ವಿ.ಆಚಾರ್ಯ, ಡಾ.ಎನ್.ಅನಂತರಾಮನ್, ಡಾ.ಶ್ರೀನಾಥ್, ಆರ್.ವಿ.ಜಾಗೀರ್ ದಾರ್, ಕ್ಯಾಪ್ಟನ್ ಗೋಪಿನಾಥ್, ವಿದ್ವಾನ್ ಬಿ.ಕೆ.ಅನಂತರಾವ್, ರಘುತ್ತೋಮ್ ಕೊಪ್ಪರ್ ಸೇರಿದಂತೆ 12 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.

ಡಾ. ಬೆಳವಾಡಿ ಮಂಜುನಾಥ್ ರವರಿಂದ ಶ್ರೀ ಶಂಕರಾಚಾರ್ಯರ ಉಪನ್ಯಾಸ ಹಾಗೂ ಡಾ. ಶಲ್ವಪಿಳ್ಳೈ ಅಯ್ಯಂಗಾರ್ ರವರಿಂದ ಶ್ರೀ ರಾಮಾನುಜಾಚಾರ್ಯರ ಉಪನ್ಯಾಸ ಮತ್ತು ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ರವರಿಂದ ಶ್ರೀ ಮಧ್ವಾಚಾರ್ಯರ ಉಪನ್ಯಾಸ ಕಾರ್ಯಕ್ರಮ ನೆರವೇರಿಸಲಾಯಿತು. ಉದ್ಯಮ ನೇರ ಸಾಲ ಯೋಜನೆ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಹಾಗೂ ಚಾಣಕ್ಯ ಆಡಳಿತ ತರಬೇತಿ ಯೋಜನೆಗೆ ಇದೇ ವೇಳೆ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕರಾದ ಆರ್ ವಿ ದೇಶಪಾಂಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್, ಮಾಜಿ ಅಡೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ದೀಪಾಶ್ರೀ, ಮಂಡಳಿಯ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.







