- ವಿಡಿಯೋ ವೈರಲ್ ಮಾಡಿದ ಮಹಿಳೆಯ ವಿರುದ್ಧ ಕ್ರಮಕ್ಕೆ ಆಗ್ರಹ
- ಹನುಮಂತನ ಸ್ಟಿಕರ್ ಇರುವ ಫೋಟೋ ವಾಟ್ಸ್ಅಪ್ನಲ್ಲಿ ವೈರಲ್
ಬಿಎಂಟಿಸಿ ಬಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮುಸ್ಲಿಂ ಸಮುದಾಯಕ್ಕೆ ಸೇರಿದ ನಿರ್ವಾಹಕರೊಬ್ಬರು ತಲೆಗೆ ಧರಿಸಿದ್ದ ಹಸಿರು ಟೋಪಿಯನ್ನು ಮಹಿಳಾ ಪ್ರಯಾಣಿಕರೊಬ್ಬರು ಪ್ರಶ್ನಿಸಿ ಬಲವಂತವಾಗಿ ತೆಗೆಸಿರುವ ಘಟನೆಯೊಂದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಟೋಪಿ ತೆಗೆದು ಸಹನೆಯಿಂದ ಉತ್ತರಿಸಿದ ಕಂಡಕ್ಟರ್ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇದೇ ವೇಳೆ ವಿಡಿಯೋ ವೈರಲ್ ಮಾಡಿದ ಮಹಿಳೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ನೆಟ್ಟಿಗರು, ಇದು ಕೂಡ ಒಂದು ರೀತಿಯಲ್ಲಿ ಅನೈತಿಕ ಪೊಲೀಸ್ ಗಿರಿ. ಹಾಗಾಗಿ ಆಕೆಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಏನಿದೆ?
ಬಿಎಂಟಿಸಿ ಬಸ್ನಲ್ಲಿ ನಿರ್ವಾಹಕರೊಬ್ಬರು ಕರ್ತವ್ಯದ ವೇಳೆ ಹಸಿರು ಬಣ್ಣದ ಟೋಪಿ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನು ಗಮನಿಸಿ ವಿಡಿಯೋ ಮಾಡಲು ಆರಂಭಿಸಿದ ಅಪರಿಚಿತ ಮಹಿಳಾ ಪ್ರಯಾಣಿಕರೋರ್ವರು, ಇದನ್ನು ಪ್ರಶ್ನಿಸಿದ್ದಾರೆ.
ಸರ್ಕಾರಿ ಸೇವೆಯಲ್ಲಿರುವಾಗ ಸರ್ಕಾರವೇ ಸಮವಸ್ತ್ರ ನೀಡುತ್ತದೆ. ಅದರಲ್ಲಿ ಈ ಹಸಿರು ಟೋಪಿ ಕೂಡ ಭಾಗವಾಗಿದೆಯೇ ಎಂದು ಮಹಿಳೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಕಂಡಕ್ಟರ್ ನಯವಾಗಿಯೇ ಉತ್ತರಿಸಿ, ನಾನು ತುಂಬಾ ಸಮಯದಿಂದ ಹೀಗೆಯೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.
ಇದಕ್ಕೆ ಏರುಧ್ವನಿಯಲ್ಲಿ ಮತ್ತೆ ಪ್ರಶ್ನೆ ಮಾಡಿರುವ ಆ ಮಹಿಳೆ, “ಸುಮಾರು ವರ್ಷದಿಂದ ಹಾಕೋದು ಬೇರೆ. ನಿಮ್ಮ ಧರ್ಮವನ್ನು ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ. ಸಮವಸ್ತ್ರದಲ್ಲಿ ಹಾಕೋದಕ್ಕೆ ಅವಕಾಶ ಇಲ್ಲ ಅಂದ ಮೇಲೆ ಹಾಕಬಾರದು” ಎಂದು ಹೇಳಿರುವುದು ಆ ಮಹಿಳೆಯೇ ಮಾಡಿರುವ ವಿಡಿಯೋದಲ್ಲಿ ದಾಖಲಾಗಿದೆ.
ವಾಟ್ಸಾಪಲ್ಲಿ ನೋಡ್ದೆ. ಆ ಮಹಿಳೆಯ ಹೃದಯದಲ್ಲಿ ತುಂಬಿದ ಕೋಮು ವಿಷದ ತೀವ್ರತೆಯನ್ನು ಅಳೆಯುವ ಯಂತ್ರವೊಂದಿದ್ರೆ ಅದರ ಮುಳ್ಳುಗಳೇ ಒಡೆದುಹೋಗುತ್ತಿದ್ವೆನೋ?. ಕುಂಕುಮ, ಮಾಲೆಗಳನ್ನು ಧರಿಸುವಂತೆ ಟೋಪಿಗೂ ಅವಕಾಶವಿದೆಎಂದಾಗಿದೆ ನನ್ನ ಭಾವನೆ. ಏನಿದ್ದರೂ ವಿಷ ಕಾರುತ್ತಿರುವ ಮಹಿಳೆಯ ಮುಂದೆಯೂ ಸೌಮ್ಯವಾಗಿ ನಡೆದುಕೊಂಡ ನಿರ್ವಾಹಕರಿಗೆ ನನ್ನದೊಂದು ಸಲಾಂ pic.twitter.com/RFaIXGuq3M
— Mohamed Haneef (@Mohamed47623244) July 11, 2023
01:37 ನಿಮಿಷದ ಈ ವಿಡಿಯೋದಲ್ಲಿ, ಬಿಎಂಟಿಸಿ ಕಂಡಕ್ಟರ್, ಕೊನೆಗೆ ಟೋಪಿ ತೆಗೆದು, ‘ನನಗೆ ಏನೂ ಸಮಸ್ಯೆ ಇಲ್ಲ ಬಿಡಿ..’ ಎಂದು ಸೌಮ್ಯವಾಗಿಯೇ ನಡೆದುಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
‘ಇದು ನೈತಿಕ ಪೊಲೀಸ್ ಗಿರಿ’ ಎಂದ ನೆಟ್ಟಿಗರು
ಬಲವಂತವಾಗಿ ಟೋಪಿ ತೆಗೆಸಿದ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ನೆಟ್ಟಿಗರಿಂದ ಹಲವು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಂಡಕ್ಟರ್ ಅವರ ಸೌಮ್ಯ ನಡೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದರೆ, ಬುದ್ಧಿವಾದ ಹೇಳಲೇ ಬೇಕೆಂದಿದ್ದರೆ ಮುಖ ತೋರಿಸಲು ಭಯವಿರುವ ಮಹಿಳೆಗೆ ವಿಡಿಯೋ ಮಾಡಿ, ಅದನ್ನು ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಟ್ವಿಟರ್ನಲ್ಲಿ ಹನೀಫ್ ಎಂಬವರು ಈ ವಿಡಿಯೋ ಹಂಚಿಕೊಂಡು, “ಆ ಮಹಿಳೆಯ ಹೃದಯದಲ್ಲಿ ತುಂಬಿದ ಕೋಮು ವಿಷದ ತೀವ್ರತೆಯನ್ನು ಅಳೆಯುವ ಯಂತ್ರವೊಂದಿದ್ದರೆ ಅದರ ಮುಳ್ಳುಗಳೇ ಒಡೆದು ಹೋಗುತ್ತಿದ್ದವೇನೋ? ಕುಂಕುಮ, ಮಾಲೆಗಳನ್ನು ಧರಿಸುವಂತೆ ಟೋಪಿಗೂ ಅವಕಾಶವಿದೆ ಎಂದಾಗಿದೆ ನನ್ನ ಭಾವನೆ. ಏನಿದ್ದರೂ ವಿಷ ಕಾರುತ್ತಿರುವ ಮಹಿಳೆಯ ಮುಂದೆಯೂ ಸೌಮ್ಯವಾಗಿ ನಡೆದುಕೊಂಡ ನಿರ್ವಾಹಕರಿಗೆ ನನ್ನದೊಂದು ಸಲಾಂ” ಎಂದು ಬರೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಘಟನೆ ಯಾವಾಗ, ಎಲ್ಲಿ ನಡೆದಿದ್ದು ಎಂಬ ಮಾಹಿತಿ ಇದ್ದರೆ ಹಂಚಿಕೊಳ್ಳಿ ಎಂದು ಕೋರಿದ್ದಾರೆ.
ಟ್ವಿಟರ್ನಲ್ಲಿ ಈ ವಿಡಿಯೋವನ್ನು ಬಿಎಂಟಿಸಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಟ್ಯಾಗ್ ಮಾಡಿರುವ ‘ದಿ ನ್ಯೂಸ್ ಮಿನಿಟ್’ನ ಪತ್ರಕರ್ತ ಪ್ರಜ್ವಲ್, “ಈ ಕಂಡಕ್ಟರ್ ನ ಸಂಯಮಕ್ಕೆ ಬೆರಗಾದೆ. ಈ ಮಹಿಳೆ ಯಾವ ನಿಯಮದ ಬಗ್ಗೆ ಮಾತನಾಡುತ್ತಿದ್ದಾಳೆ? ಇದು ನೈತಿಕ ಪೊಲೀಸ್ಗಿರಿ” ಎಂದು ಹೇಳಿದ್ದಾರೆ.
ವಿಡಿಯೋ ವೈರಲಾಗುತ್ತಿರುವ ಬಗ್ಗೆ ಈ ದಿನ.ಕಾಮ್ ಬಿಎಂಟಿಸಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವರನ್ನು ಸಂಪರ್ಕಿಸಿದಾಗ, ‘ಇದು ತುಂಬಾ ಹಳೆಯ ವಿಡಿಯೋ ಇರಬಹುದು’ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.
ಘಟನೆ ಯಾವಾಗ ನಡೆದದ್ದು, ವಿಡಿಯೋ ವೈರಲ್ ಮಾಡಿದ ಮಹಿಳೆ ಯಾರು ಎಂಬ ಬಗ್ಗೆ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.
ಈ ವಿಡಿಯೋ ಬೆಳಕಿಗೆ ಬಂದ ಬಳಿಕ ಕೆಎಸ್ಆರ್ಟಿಸಿ ಬಸ್ನ ಹಿಂಬದಿಯಲ್ಲಿ ಹನುಮಂತನ ಸ್ಟಿಕರ್ ಇರುವ ಫೋಟೋ ಕೂಡ ವಾಟ್ಸ್ಅಪ್ನಲ್ಲಿ ವೈರಲಾಗುತ್ತಿದೆ.

“ಒಂದು ವೇಳೆ ಟೋಪಿ ಹಾಕುವುದು ತಪ್ಪು ಎಂದಾದರೆ, ಪ್ರತಿಯೊಂದು ಬಸ್ಸಿನಲ್ಲಿ ದೇವರ ಫೋಟೋ, ಕುಂಕುಮ, ಹೂ -ಹಾರ ಹಾಕಬಾರದು. ಇಬ್ಬಗೆಯ ನೀತಿ ಆಗಬಾರದು” ಎಂಬ ಸಂದೇಶದೊಂದಿಗೆ ಫೋಟೋ ಹರಿದಾಡುತ್ತಿದೆ.





