ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ, ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ಜನತೆ ಬಹಳ ನಿರೀಕ್ಷೆಯೊಂದಿಗೆ ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಬಿ.ಜೆ.ಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು ವಿಧಾನಸೌಧದಲ್ಲಿ ಪಕ್ಷದ ಆಡಳಿತ ಬದಲಾಗಿದೆ. ಅಧಿಕಾರ ನಡೆಸುತ್ತಿರುವವರ ಮುಖಗಳು ಬದಲಾಗಿವೆ. ಆದರೆ ಯಥಾಸ್ಥಿತಿ ಆಡಳಿತ ಮುಂದುವರೆಯುತ್ತಿದೆ ಎಂದು ರೈತ ಮುಖಂಡರು ಆಕ್ರೋಶ ಹೊರಹಾಕಿದರು.
ಈ ಸರ್ಕಾರ ಬಂದು ಒಂದು ವರ್ಷ ಅವಧಿಯಲ್ಲೇ ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟಿದ್ದ 187 ಕೋಟಿ ಹಣ ದುರುಪಯೋಗದ ಹಗರಣದ ಆರೋಪಕ್ಕೆ ಒಳಗಾಗಿದೆ. ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಲಂಗು-ಲಗಾಮಿಲ್ಲದೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭೂ-ಮಾಫಿಯಾಗಳ ಅಕ್ರಮಗಳು ನಿರಂತರವಾಗಿ ಸಾಗುತ್ತಲೇ ಇವೆ. ರೈತರ ಆತ್ಮಹತ್ಯೆ ಸರಣಿ ಮುಂದುವರೆಯುತ್ತಲೇ ಇದೆ ಎಂದು ಆರೋಪಿಸಿದರು.
ರೈತಪರ ನೀತಿಗಳನ್ನು ರೂಪಿಸಲು, ರೈತರ ಆತ್ಮಹತ್ಯೆ ತಡೆಗಟ್ಟಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಯಾದಗಿರಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ವಿ. ಪಾಟೀಲ, ಜಿಲ್ಲಾಧ್ಯಕ್ಷ ಶರಣು.ವಿ.ಮಂದರವಾಡ, ರೈತ ಮುಖಂಡರಾದ ಚಂದ್ರಕಲಾ ಬಾಗೂರು, ಮುದ್ದಣ್ಣ ಅಮ್ಮಾಪೂರ, ಮಲ್ಕಣ್ಣ ಎಸ್.ಚಿಂತಿ, ಸಿದ್ದಣ್ಣ ಕುಂಬಾರಪೇಟೆ, ಮಲ್ಲಣ್ಣ ನೀಲಹಳ್ಳಿ, ಶಂಕರ ಜಾಧವ ,ಭೀಮರಾಯ ಎಲ್ಲೇರಿ, ಭೀಮರಾಯ ಯಡಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರೈತ ಸಂಘದ ಹಕ್ಕೊತ್ತಾಯಗಳು
- ರೈತರ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವತಃ ವೆಚ್ಚವನ್ನು ಭರಿಸಬೇಕೆಂದು ಸರ್ಕಾರ ತೀರ್ಮಾನಿಸಿದೆ. ಈ ತೀರ್ಮಾನವು ರೈತರಿಗೆ ಹೊರೆಯಾಗಿದ್ದು, 2-3 ಲಕ್ಷ ರೂಪಾಯಿ ದೊಡ್ಡ ಮೊತ್ತದ ವೆಚ್ಚವನ್ನು ರೈತರು ಭರಿಸಲು ಸಾಧ್ಯವಾಗುವುದಿಲ್ಲ. ಸರ್ಕಾರ ಈ ತೀರ್ಮಾನವನ್ನು ಹಿಂಪಡೆದು ಹಿಂದಿನ ಪದ್ಧತಿಯನ್ನು ಮುಂದುವರೆಸಬೇಕು. ಕರ ನಿರಾಕರಣೆ ಚಳುವಳಿಯಲ್ಲಿ ರೈತ ಕುಟುಂಬದವರು ಉಳಿಸಿಕೊಂಡಿರುವ ಗೃಹ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಬೇಕು.
- ಕಳೆದ ವರ್ಷ ಏಪ್ರಿಲ್‌ನಿಂದ ಇದುವರೆಗೆ 1182 ರೈತರ ಆತ್ಮಹತ್ಯೆಗೆ ಒಳಗಾಗಿದ್ದಾರೆ. ಈ ಆತ್ಮಹತ್ಯೆಗಳಲ್ಲಿ ಯುವಕರು ಹೆಚ್ಚು ಒಳಗಾಗಿದ್ದು ಆತಂಕಕ್ಕೀಡು ಮಾಡಿದ್ದು, ಸರ್ಕಾರ ಆತ್ಮಹತ್ಯೆ ತಡೆಗಟ್ಟಲು ರೈತ ಪರ ಕಾರ್ಯಕ್ರಮಗಳನ್ನು ರೂಪಿಸಬೇಕು. ರೈತ ಸಮುದಾಯಕ್ಕೆ ಆತ್ಮಸ್ಥೆರ್ಯ ತುಂಬಬೇಕು. ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಕೃಷಿ ಬೆಲೆ ಆಯೋಗವನ್ನು ಸಬಲೀಕರಣಗೊಳಿಸಬೇಕು. ರಾಜ್ಯ ಸರ್ಕಾರವೇ ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಪಿ ನಿಗದಿಪಡಿಸಿ ಖರೀದಿಸಬೇಕು. ಹಿಂದೆಂದು ಕಂಡರಿಯದ ಬರಗಾಲವನ್ನು ರಾಜ್ಯ ಎದುರಿಸಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕುಗಳು ಸಾಲಬಾಕಿ ವಸೂಲಿಗಾಗಿ ರೈತರಿಗೆ ಕಿರುಕುಳ ನೀಡುತ್ತಿವೆ ಇದನ್ನು ತಪ್ಪಿಸಲು ರೈತರ ರಕ್ಷಣೆಗೆ ಬರಬೇಕು.
- ರೈತರ ಎಲ್ಲ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ವಿಸ್ತರಿಸಿ ಗ್ರಾಮ ಮಟ್ಟದಲ್ಲಿ ಬೆಳೆ ಹಾನಿ ನಿರ್ಧರಿಸಬೇಕು. ವಿಮಾ ಕಂಪೆನಿಗಳು ಉಳಿಸಿಕೊಂಡಿರುವ ಬಾಕಿಯನ್ನು ರೈತರ ಖಾತೆಗೆ ಕೂಡಲೇ ಹಾಕಬೇಕು.
- ಫಸಲು ಪಹಣಿ ದುರಸ್ಥಿ, ಪಕ್ಕಾ ಪೋಡಿ, ಹದ್ದುಬಸ್ತು ಶುಲ್ಕ ದುಬಾರಿಯಾಗಿದ್ದು, ಅದನ್ನು ಕೂಡಲೇ ಇಳಿಸಬೇಕು.
- ಬರ ಪರಿಹಾರದ ಹಣ ವಿಮಾ ಪರಿಹಾರದ ಹಣವನ್ನು ಸಹ ಬ್ಯಾಂಕ್‌ನವರು ಸಾಲಕ್ಕಾಗಿ ಜಮೆ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್‌ನವರಿಗೆ ಸೂಕ್ತ ನಿರ್ದೇಶನ ನೀಡಿ ಇದನ್ನು ತಪ್ಪಿಸಬೇಕು.
- ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆಯ ಕಿರುಕುಳವನ್ನು ತಪ್ಪಿಸಿ ಸಾಗುವಳಿ ಮಾಡುತ್ತಿರುವ ಎಲ್ಲ ರೈತರಿಗೆ ಪಟ್ಟಾ ನೀಡಬೇಕು.
- ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ಟನ್ ಒಂದಕ್ಕೆ 150/- ರೂ. ಪಾವತಿಸಬೇಕೆಂದು ಹಿಂದಿನ ಸರ್ಕಾರ ತೀರ್ಮಾನಿಸಿದ್ದು, ಇದಕ್ಕಿರುವ ತಾಂತ್ರಿಕ ತೊಂದರೆಗಳನ್ನು ಕೂಡಲೇ ನಿವಾರಿಸಿ ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು ರಾಜ್ಯ ಸರ್ಕಾರ ಎಂ.ಎಸ್.ಪಿ ಘೋಷಿಸಬೇಕು.
- ಸರ್ಕಾರ ಮಾತಿನಂತೆ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು.
- ಯಾದಗಿರಿ ಜಿಲ್ಲೆಯಾದ್ಯಂತ ಬರ ಪರಿಹಾರ ಸಮರ್ಪಕವಾಗಿ ವಿತರಿಸದೇ ಇದ್ದರೆ ಮುಂದಿನ ಯಾವುದೇ ಕೆಟ್ಟ ಪರಿಣಾಮಕ್ಕೆ ಜಿಲ್ಲಾಡಳಿತವೇ ನೇರ ಹೊಣೆ.
- ರೈತರಿಗೆ ಬರವಸೆ ನೀಡಿದಂತೆ ಸತತವಾಗಿ 7 ಗಂಟೆ ನೀಡಬೇಕಾಗಿರುವ ವಿದ್ಯುತ್‌ನ್ನು ಹಗಲು ಹೊತ್ತಿನಲ್ಲಿ ಕೊಡುವಂತೆ ಒತ್ತಾಯ.





