ಅಂತಾರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆ ಹೇಳದಷ್ಟೂ ಹೃದಯ ದಾರಿದ್ರ್ಯ ತೋರಿದ್ದಾರೆ ಪ್ರಧಾನಮಂತ್ರಿ ಮೋದಿ.
ಕೇವಲ 56 ಅಂಗುಲ ಅಗಲದ ಎದೆ ಇದ್ದರೆ ಸಾಲದು, ಅದರೊಳಗೊಂದು ಹೃದಯವೂ ಇರಬೇಕೆಂದು ಹಿಂದೊಮ್ಮೆ ಹೇಳಿದ್ದರು ಪ್ರಿಯಾಂಕಾ ಗಾಂಧೀ. ಹತ್ತು ದಿನಗಳ ಹಿಂದೆ ಪ್ರಕಟವಾದ ಸಿ.ಬಿ.ಎಸ್.ಇ. ಶಾಲಾ ಫಲಿತಾಂಶದಲ್ಲಿ ಉತ್ತೀರ್ಣರಾಗಿದ್ದ ಮಕ್ಕಳಿಗೆ ಅಭಿನಂದನೆ ಹೇಳಿದ್ದರು. ಈ ಮಕ್ಕಳಿಗೆ ತೋರಿದ ಇದೇ ಹೃದಯವಂತಿಕೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡದ, ಭಾರತದ ಬಾವುಟವನ್ನು ಎತ್ತಿ ಹಿಡಿದ ಮಹಿಳೆಗೂ ತೋರಬಹುದಿತ್ತು. ವಿಶ್ವಗುರು ಎಂದು ನಗಾರಿ ಬಾರಿಸುವವರು ‘ವಿಶ್ವಗುರುವಿನ’ ಪತಾಕೆ ಹಾರಿಸಿದವರನ್ನು ಅಭಿನಂದಿಸಬೇಕಲ್ಲವೇ? ದೀಪಾ ಭಾಸ್ತಿ ಅವರು ಮಾಡಿದ್ದ ಬಾನು ಅವರ ಸಣ್ಣ ಕತೆಗಳ ಇಂಗ್ಲಿಷ್ ಅನುವಾದ ‘ಹಾರ್ಟ್ ಲ್ಯಾಂಪ್’ಗೆ ಇದೇ ತಿಂಗಳ 21 ರಂದು ಬೂಕರ್ ಪ್ರಶಸ್ತಿ ದೊರೆತಿತ್ತು.
ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾದ ರಾಹುಲ್ ಗಾಂಧೀ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಬಾನು ಮುಷ್ತಾಕ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸದಾ ಪ್ರಚಾರ ಪಡೆಯುವುದರಲ್ಲಿ ಮುಂಚೂಣಿಯಲ್ಲಿರುವ ನರೇಂದ್ರ ಮೋದಿಯವರು, ನಮ್ಮ ದೇಶಕ್ಕೆ ಇಷ್ಟೊಂದು ಪ್ರತಿಷ್ಠಿತ ಪ್ರಶಸ್ತಿ ಬಂದಿದ್ದರೂ ಕೂಡ ಒಂದು ಅಭಿನಂದನಾ ಟ್ವೀಟ್ ಕೂಡ ಮಾಡದಿರುವುದು ಅವರ ಸಣ್ಣತನಕ್ಕೆ ಸಾಕ್ಷಿ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಈ ರೀತಿಯ ಹೃದಯ ದಾರಿದ್ರ್ಯ ಪ್ರದರ್ಶಿಸಿರುವುದು ಇದೇ ಮೊದಲೇನಲ್ಲ.
ರವೀಶ್ ಕುಮಾರ್ – 2019
ದೇಶದ ಹಿರಿಯ ಪತ್ರಕರ್ತ ರವೀಶ್ ಕುಮಾರ್ ‘ಏಷ್ಯಾದ ನೋಬೆಲ್’ ಎಂದೇ ಬಣ್ಣಿಸಲಾಗುವ ರಾಮೊನ್ ಮ್ಯಾಗ್ಸೇಸೆ ಪ್ರಶಸ್ತಿಗೆ 2019ರಲ್ಲಿ ಭಾಜನರಾಗಿದ್ದರು. ಎನ್‌ಡಿಟಿವಿ ಹಿಂದಿ ಚಾನೆಲ್‌ನಲ್ಲಿದ್ದ ಸಂದರ್ಭದಲ್ಲಿ ಪ್ರೈಮ್ ಟೈಮ್ ಕಾರ್ಯಕ್ರಮದ ಮೂಲಕ ಮನೆಮಾತಾಗಿದ್ದ ರವೀಶ್ ಕುಮಾರ್ ಅವರಿಗೆ, ಜನಸಾಮಾನ್ಯರ ಸಂಕಷ್ಟಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಗಮನ ಸೆಳೆಯುವಂತೆ ಮಾಡಿದ್ದಕ್ಕಾಗಿ ಹಾಗೂ ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ಈ ಅಂತಾರಾಷ್ಟ್ರೀಯ ಪ್ರಶಸ್ತಿಯು ಲಭಿಸಿತ್ತು.

ರವೀಶ್ ಕುಮಾರ್ ಅವರು ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ಮತ್ತು ಕೋಮುವಾದವನ್ನು ದಿಟ್ಟವಾಗಿ ಖಂಡಿಸುವ ಕೆಲವೇ ಕೆಲವು ಪತ್ರಕರ್ತರಲ್ಲೊಬ್ಬರು.
ಗೀತಾಂಜಲಿ ಶ್ರೀ – 2022
ಗೀತಾಂಜಲಿ ಶ್ರೀ ಅವರು ಹಿಂದಿ ಭಾಷೆಯ ಪ್ರಮುಖ ಲೇಖಕಿಯಾಗಿ ಗುರುತಿಸಿಕೊಂಡವರು. ಇವರು 2018ರಲ್ಲಿ ಬರೆದಿದ್ದ “ರೇತ್ ಸಮಾಧಿ” ಪುಸ್ತಕವನ್ನು ಅಮೆರಿಕದ ಡೇಸಿ ರಾಕ್ವೆಲ್ ಇಂಗ್ಲಿಷ್ಗೆ ಅನುವಾದಿಸಿದ್ದರು.

‘ಟೂಂಬ್ ಆಫ್ ಸ್ಯಾಂಡ್’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರಕಟಗೊಂಡಿದ್ದ ಈ ಕೃತಿಗೆ 2022ರಲ್ಲಿ ಬೂಕರ್ ಪ್ರಶಸ್ತಿ ಸಂದಿತ್ತು. ಬೂಕರ್ ಪ್ರಶಸ್ತಿ ಪಡೆದ ಮೊದಲ ಹಿಂದೀ ಮೂಲದ ಕೃತಿ ಎಂಬ ಗೌರವಕ್ಕೂ ಪಾತ್ರವಾಗಿತ್ತು. ಅಷ್ಟೇ ಅಲ್ಲದೆ ಬೂಕರ್ ಗೆದ್ದ ಮೊದಲ ದಕ್ಷಿಣ ಏಷ್ಯಾದ ಭಾಷಾ ಕೃತಿ ಎಂಬ ಹೆಗ್ಗಳಿಕೆ ಹೊಂದಿತ್ತು. ಇವರನ್ನೂ ಅಭಿನಂದಿಸದೆ ಹೋದರು ಪ್ರಧಾನಿ ಮೋದಿ. ಗೀತಾಂಜಲಿಶ್ರೀ ಕೋಮುವಾದದ ವಿರುದ್ಧ ದನಿ ಎತ್ತಿದವರಾಗಿದ್ದರು ಎಂಬುದು ಇಲ್ಲಿ ಉಲ್ಲೇಖಿಸಬೇಕಾದ ಸಂಗತಿ.





