ರದ್ದಾಗಿರುವ ದೆಹಲಿಯ ಅಬಕಾರಿ ನೀತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ಮಂಗಳವಾರ ತಿಹಾರ್ ಜೈಲಿನಿಂದಲೇ ಬಂಧನಕ್ಕೊಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಂದು ದೆಹಲಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ಆದೇಶಿಸಿದೆ.
ಕೇಜ್ರಿವಾಲ್ ಅವರನ್ನು ಐದು ದಿನಗಳ ಕಸ್ಟಡಿಗೆ ನೀಡುವಂತೆ ಸಿಬಿಐ ಕೋರಿತ್ತು. ಆದರೆ ಇದಕ್ಕೆ ಮನ್ನಣೆ ನೀಡದ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ರಜಾಕಾಲದ ನ್ಯಾಯಾಧೀಶ ಅಮಿತಾಭ್ ರಾವತ್ ಅವರು, ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ, ಆದೇಶಿಸಿದ್ದಾರೆ.
#BREAKING Delhi Court remands Chief Minister Arvind Kejriwal to CBI custody for three days in the liquor policy case. #ArvindKejriwal #CBI @ArvindKejriwal @AamAadmiParty @CBIHeadquarters pic.twitter.com/AQn7edt4II
— Live Law (@LiveLawIndia) June 26, 2024
ಕೇಜ್ರಿವಾಲ್ ಅವರನ್ನು ಜೂನ್ 29 ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ದೆಹಲಿ ಅಕ್ರಮ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಕಳೆದ ಮಾರ್ಚ್ 21ರಂದು ಇಡಿ (ಜಾರಿ ನಿರ್ದೇಶನಾಲಯ) ಬಂಧಿಸಿತ್ತು. ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಜೂನ್ 2ರಂದು ಅವರು ಮತ್ತೆ ನ್ಯಾಯಾಲಯದ ಮುಂದೆ ಶರಣಾಗಿ, ಜೈಲಿಗೆ ತೆರಳಿದ್ದರು.
ಇದನ್ನು ಓದಿದ್ದೀರಾ? ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಕೇಂದ್ರ ತನಿಖಾ ಸಂಸ್ಥೆಯು ತಿಹಾರ್ ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ದಾಖಲಿಸಿತ್ತು. ಮಂಗಳವಾರ ತಡರಾತ್ರಿ ತಿಹಾರ್ ಜೈಲಿನಿಂದಲೇ ಬಂಧಿಸಿತ್ತು.





