ತಮ್ಮ ಸಹೋದರಿಯ ವಿವಾಹದ ಹಿನ್ನೆಲೆಯಲ್ಲಿ 14 ದಿನಗಳ ಕಾಲ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್, ಜಾಮೀನು ಅವಧಿಯು ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಮತ್ತೆ ತಿಹಾರ್ ಜೈಲಿಗೆ ಹಿಂದಿರುಗಿದ್ದಾರೆ.
ಉಮರ್ ಖಾಲಿದ್ ಅವರ ಕೆಲವು ವಾಟ್ಸ್ಆ್ಯಪ್ ಸಂದೇಶಗಳನ್ನು ಆಧರಿಸಿ ದೆಹಲಿ ಗಲಭೆಗೆ ಉಮರ್ ಖಾಲಿದ್ ಸಂಚು ರೂಪಿಸಿದ್ದರೆಂದು ಆರೋಪಿಸಲಾಗಿದೆ. ಇದೇ ಆರೋಪದ ಮೇಲೆ 2020ರಲ್ಲಿ ಅವರನ್ನು ದೆಹಲಿ ಪೊಲೀಸರು ಉಮರ್ ಖಾಲಿದ್ ಅವರನ್ನು ಬಂಧಿಸಿದ್ದರು. ಅಂದಿನಿಂದ ಸರಿಯಾದ ವಿಚಾರಣೆಯೂ ಇಲ್ಲದೆ, ಜಾಮೀನೂ ದೊರೆಯದೆ ಉಮರ್ ಖಾಲಿದ್ ಜೈಲಿನಲ್ಲಿಯೇ ಇದ್ದಾರೆ.
ತಮ್ಮ ಸಹೋದರಿಯ ವಿವಾಹದಲ್ಲಿ ಭಾಗಿಯಾಗಲು 14 ದಿನಗಳ ಷರತ್ತುಬದ್ಧ ಜಾಮೀನು ನೀಡಿ ದೆಹಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್ಜೆ) ಸಮೀರ್ ಬಾಜ್ಪೈ ಆದೇಶಿಸಿದ್ದರು.
ಖಾಲಿದ್ ಅವರ ಸಹೋದರಿಯ ವಿವಾಹವು ಡಿಸೆಂಬರ್ 27ರಂದು ನಿಗದಿಯಾಗಿತ್ತು. ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಡಿಸೆಂಬರ್ 14 ರಿಂದ ಡಿಸೆಂಬರ್ 29ರವರೆಗೆ ಜಾಮಿನು ನೀಡಬೇಕೆಂದು ಕೋರಿ ಖಾಲಿದ್ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಡಿಸೆಂಬರ್ 14ರಿಂದ ಜಾಮೀನು ನೀಡುವ ಬದಲಾಗಿ, ಡಿಸೆಂಬರ್ 16ರಿಂದ ಜಾಮೀನು ಮಂಜೂರು ಮಾಡಿತ್ತು.

14 ದಿನಗಳ ಷರತ್ತು ಬದ್ಧ ಜಾಮೀನು ನೀಡಿದ್ದ ವೇಳೆ ನ್ಯಾಯಾಲಯವು, “ಜೈಲಿನಿಂದ ಹೊರಬಂದ ಅವಧಿಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ. ಕುಟುಂಬ, ಸಂಬಂಧಿಕರು ಹಾಗೂ ಸ್ನೇಹಿತರನ್ನಲ್ಲದೆ ಬೇರೆ ಯಾರನ್ನೂ ಭೇಟಿ ಮಾಡುವಂತಿಲ್ಲ. ತಮ್ಮ ಮನೆಯಲ್ಲಿ ಅಥವಾ ಅವರು ನಿರ್ದಿಷ್ಟಪಡಿಸಿದಂತೆ ವಿವಾಹ ಸಮಾರಂಭಗಳು ನಡೆಯುವ ಸ್ಥಳದಲ್ಲಿ ಮಾತ್ರವೇ ಅವರು ಇರಬೇಕು” ಎಂದು ನ್ಯಾಯಾಲಯ ಷರತ್ತು ವಿಧಿಸಿತ್ತು.
ಡಿಸೆಂಬರ್ 29ಕ್ಕೆ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಮತ್ತೆ ತಿಹಾರ್ ಜೈಲಿಗೆ ಉಮರ್ ಖಾಲಿದ್ ಹಿಂದಿರುಗಿದ್ದಾರೆ. ಈ ವೇಳೆ ಉಮರ್ ಖಾಲಿದ್ ಅವರ ತಂದೆ ಎಸ್ ಕ್ಯೂ ಆರ್ ಇಲ್ಯಾಸ್, ತಾಯಿ ಸೇರಿದಂತೆ ಕುಟುಂಬದ ಸದಸ್ಯರು, ಸ್ನೇಹಿತರು ಉಪಸ್ಥಿತರಿದ್ದರು.





