“ರಾಜ್ಯದ ಅಂಗನವಾಡಿಗಳ ಪುನಃಶ್ಚತನಕ್ಕೆ ತೀರ್ಮಾನಿಸಲಾಗಿದ್ದು, ಮೊದಲ ಹಂತದಲ್ಲಿ 10 ಸಾವಿರ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್, ಸೀರೆ, ಔಷಧ ಕಿಟ್, ತೂಕದ ಯಂತ್ರಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
“ಅಂಗನವಾಡಿಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಿ ಸರ್ಕಾರಿ ಮಾಂಟೆಸ್ಸರಿ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದಿಂದ 20 ಸಾವಿರ ಸ್ಮಾರ್ಟ್ ಕ್ಲಾಸ್ಗಳು ಮಂಜೂರಾಗಿವೆ. 15 ಸಾವಿರಕ್ಕೂ ಹೆಚ್ಚು ಪದವೀಧರ ಶಿಕ್ಷಕರು ಕೆಲಸ ಮಾಡುತ್ತಿದ್ದು, ಎಲ್ಲರಿಗೂ ತರಬೇತಿ ನೀಡಲು ನಿರ್ಧರಿಸಲಾಗಿದೆ. ನಿಮ್ಮ ಕೌಶಲ್ಯ ಹೆಚ್ಚಿಸಲು ತರಬೇತಿ ನೀಡಲಾಗುವುದು. ಇದಕ್ಕಾಗಿ ₹10 ಕೋಟಿ ಮೀಸಲಿಡಲಾಗಿದೆ” ಎಂದು ಸಚಿವೆ ಮಾಹಿತಿ ನೀಡಿದರು.
ಬೆಳಗಾವಿಯ ಕುಮಾರ ಗಂಧರ್ವ ಹಾಲ್ ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ ಶಿಶು ಅಭಿವೃದ್ಧಿ ಯೋಜನೆ ಬೆಳಗಾವಿ (ಗ್ರಾಮೀಣ) ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್, ಮೆಡಿಸಿನ್ ಕಿಟ್ ಹಾಗೂ ಸಾರಿ ಹಂಚಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ಕಾರ್ಯಕ್ರಮದಲ್ಲಿ… pic.twitter.com/SotHUp2Pqh
— Laxmi Hebbalkar (@laxmi_hebbalkar) June 28, 2024
“ಮೊಬೈಲ್ನಲ್ಲಿ ಪೋಷನ್ ಅಭಿಯಾನ, ಪಲ್ಸ್ ಪೋಲಿಯೋ ಅಭಿಯಾನ ಸೇರಿ ಇತರ ಕೆಲಸ ಮಾಡಲು ಆಗುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ದೂರು ನೀಡಿದ್ದರು. ಹಾಗಾಗಿ, 13 ಸಾವಿರ ಮೌಲ್ಯದ ಉತ್ತಮ ಗುಣಮಟ್ಟದ ಸ್ಯಾಮ್ಸಂಗ್ ಮೊಬೈಲ್ ವಿತರಿಸಲಾಗುತ್ತಿದೆ. ಕೇವಲ ಮೊಬೈಲ್ ವಿತರಣೆ ಮಾಡಿ ಕೆಲಸ ಮುಗಿದಿದೆ ಅಂತ ಸುಮ್ಮನೆ ಕುಳಿತಿಲ್ಲ. ನಮ್ಮ ಕ್ಷೇತ್ರದಲ್ಲಿ 650 ಮೊಬೈಲ್ ಕೊಡುತ್ತಿದ್ದೇವೆ. ತಾಂತ್ರಿಕ ತೊಂದರೆ ಬಂದರೆ ಎಕ್ಸ್ಚೇಂಜ್ ಮಾಡಲು ಹೆಚ್ಚುವರಿ ಮೊಬೈಲ್ ತರಿಸಿದ್ದೇವೆ. ಇಡೀ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್ ಆಗಿ ಕಾಣಬೇಕು. ನಮ್ಮ ಅಂಗನವಾಡಿಗಳು ಅಪ್ಗ್ರೇಡ್ ಆಗಿ ಸಕ್ಷಮ ಅಂಗನವಾಡಿಗಳು ಬೇಕು. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ 20 ಸಾವಿರ ಅಂಗನವಾಡಿಗಳಿಗೆ ಸ್ಮಾರ್ಟ್ ಕ್ಲಾಸ್ ತೆಗೆದುಕೊಂಡು ಬಂದಿರುವೆ” ಎಂದು ಹೇಳಿದರು.
“130 ರೂ. ಗೌರವ ಧನದೊಂದಿಗೆ ಅಂಗನವಾಡಿಗಳು ಕಾರ್ಯಾರಂಭ ಆಗಿದ್ದವು. ಪಿಯುಸಿ ಕಲಿತ 20 ಸಾವಿರ, ಪದವಿ ಪಡೆದ 15 ಸಾವಿರ, ಸ್ನಾತಕೋತ್ತರ ಪದವಿ ಪಡೆದ 2 ಸಾವಿರ ಅಂಗನವಾಡಿ ಶಿಕ್ಷಕಿಯರಿದ್ದಾರೆ. ತಜ್ಞರ ಕಮಿಟಿ ಮಾಡಿ 9 ರಿಂದ 10 ಸಾವಿರ ಅಂಗನವಾಡಿಗಳಿಗೆ ಸರ್ಕಾರಿ ಮಾಂಟೆಸ್ಸರಿ ಮಾಡಲಾಗುವುದು. ನಿಮ್ಮೆಲ್ಲರ ಹೋರಾಟದಿಂದ ಅಂಗನವಾಡಿಗೆ ಹೊಸ ಹೆಸರು ಬಂದಿದೆ” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
“ಮಕ್ಕಳ ಭವಿಷ್ಯ ಸುಧಾರಣೆಗೆ ರಾಜ್ಯ ಸರ್ಕಾರ ಹಲವಾರು ಮಹತ್ವದ ತೀರ್ಮಾನ ಕೈಗೊಂಡಿದೆ. ಅದಕ್ಕೆ ತಕ್ಕಂತೆ ಅಂಗನವಾಡಿ ಕಾರ್ಯಕರ್ತೆಯರೂ ತಮ್ಮ ಕೌಶಲ ವೃದ್ಧಿಸಿಕೊಳ್ಳಬೇಕು” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.





