ದೇಶದಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ರಾಜ್ಯಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕದ ಹಾಲು ಉತ್ಪಾದಕರ ಒಕ್ಕೂಟವಾಗಿರುವ ‘ಕೆಎಂಎಫ್(ಕರ್ನಾಟಕ ಸಹಕಾರಿ ಹಾಲು ಮಾರಾಟ ಮಹಾಮಂಡಳ) ಸಂಸ್ಥೆಯು, ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.
ಸೆ.17ರಂದು(ನಾಳೆ) ಒಂದೇ ದಿನ ರಾಜ್ಯಾದ್ಯಂತ 500 ‘ನಂದಿನಿ’ ಮಳಿಗೆಗಳಿಗೆ ಏಕಕಾಲದಲ್ಲಿ ಚಾಲನೆ ನೀಡಲು ಈಗಾಗಲೇ ತಯಾರಿ ನಡೆಸಿದ್ದು, ಕಲ್ಯಾಣ ಕರ್ನಾಟಕದ ಪ್ರಮುಖ ನಗರವಾದ ಕಲಬುರಗಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ 500 ಮಳಿಗೆಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಶಿವಸ್ವಾಮಿ, “ಸೆ.17ರಂದು(ನಾಳೆ) ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಕಲಬುರಗಿ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಸ್ಥಾಪಿಸಲಾಗಿರುವ ಹೊಸ 500 ನಂದಿನಿ ಮಳಿಗೆ, ಪಾರ್ಲರ್ಗಳಿಗೆ ವಿದ್ಯುಕ್ತವಾಗಿ ಏಕಕಾಲದಲ್ಲಿ ಚಾಲನೆ ನೀಡಲಿದ್ದಾರೆ. ಇದು ಕೆಎಂಎಫ್ ಇತಿಹಾಸದಲ್ಲಿ ಒಂದು ಪ್ರಮುಖ ಮೈಲುಗಲ್ಲಾಗಿದ್ದು, ‘ನಂದಿನಿ’ ಬ್ರ್ಯಾಂಡ್ನ ಪ್ರಚಾರದ ಜೊತೆಗೆ ಉತ್ಪನ್ನಗಳ ವಹಿವಾಟು ವಿಸ್ತರಣೆಗೆ ಅನುಕೂಲವಾಗಲಿದೆ” ಎಂದು ತಿಳಿಸಿದ್ದಾರೆ.
“ಕರ್ನಾಟಕ ಹಾಲು ಮಹಾಮಂಡಳವು ಕಳೆದ ಐದು ದಶಕಗಳಿಂದ “ನಂದಿನಿ” ಬ್ರ್ಯಾಂಡ್ನಲ್ಲಿ ಪರಿಶುದ್ಧ ಹಾಗೂ ರುಚಿಕರ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕರ್ನಾಟಕ ಮಾತ್ರವಲ್ಲದೇ, ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಗೋವಾ, ದೆಹಲಿ, ಮಹಾರಾಷ್ಟ್ರ, ಉತ್ತರಪ್ರದೇಶ ಜೊತೆಗೆ ಜಮ್ಮು ಮತ್ತು ಕಾಶ್ಮೀರಗಳಲ್ಲಿಯೂ ಸಹ ಮಾರಾಟ ಮಾಡುತ್ತಿದೆ. 2023-24ನೇ ಸಾಲಿನಲ್ಲಿ ಕೆಎಂಎಫ್ ಮತ್ತು ಜಿಲ್ಲಾ ಒಕ್ಕೂಟಗಳ ಸಂಯೋಜಿತವಾಗಿ ಇದ್ದಂತಹ ರೂ. 21,345 ಕೋಟಿ ವಹಿವಾಟು, 2024-25 ನೇ ಸಾಲಿನಲ್ಲಿ ರೂ. 24,928 ಕೋಟಿ ತಲುಪಿದೆ. ಆ ಮೂಲಕ ಶೇ. 16.5 ಪ್ರಗತಿಯನ್ನು ಸಾಧಿಸಲಾಗಿದೆ. 2025-26 ನೇ ಸಾಲಿಗೆ ರೂ. 28,444 ಕೋಟಿ ತಲುಪುವ ಗುರಿಯನ್ನು ಸಂಸ್ಥೆಯು ಹೊಂದಿದೆ. ಅದರ ಭಾಗವಾಗಿ ಏಕಕಾಲದಲ್ಲಿ 500 ಹೊಸ ನಂದಿನಿ ಮಳಿಗೆ, ಪಾರ್ಲರ್ಗಳಿಗೆ ಚಾಲನೆ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

“ನಂದಿನಿಯ ಎಲ್ಲ ಉತ್ಪನ್ನಗಳು ಸಕಾಲದಲ್ಲಿ ಗ್ರಾಹಕರಿಗೆ ಲಭ್ಯತೆ ಮತ್ತು ವ್ಯವಸ್ಥಿತವಾದ ಮಾರಾಟಕ್ಕೆ ರಾಜ್ಯಾದ್ಯಂತ 2,598 ನಂದಿನಿ ಮಳಿಗೆ, ಪಾರ್ಲರ್ಗಳು ಈಗಾಗಲೇ ಕಾರ್ಯಾಚರಿಸುತ್ತಿದೆ. ಈ ಎಲ್ಲ ಮಳಿಗೆಗಳ ಮುಖಾಂತರ ಗ್ರಾಹಕರಿಗೆ ಕೈಗೆಟುಕುವ ಬೆಲೆಗಳಲ್ಲಿ ಸಕಾಲದಲ್ಲಿ ದೊರೆಯುವಂತೆ ಮಾಡಲಾಗಿದೆ. ಇದಕ್ಕೆ ಹೊಸದಾಗಿ 500 ಸಂಖ್ಯೆ ನಂದಿನಿ ಪಾರ್ಲರ್ಗಳು ಸೇರ್ಪಡೆಯಾಗಲಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ ಹಾಲು ಒಕ್ಕೂಟದ ಜಿಲ್ಲೆಗಳಾದ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಕಲಬುರಗಿ ಹಾಲು ಒಕ್ಕೂಟದ ಜಿಲ್ಲೆಗಳಾದ ಕಲಬುರಗಿ, ಬೀದರ್ ಮತ್ತು ಯಾದಗಿರಿ ಪ್ರದೇಶಗಳಲ್ಲಿ ಒಟ್ಟು 68 ಸಂಖ್ಯೆ ಹೊಸ ನಂದಿನಿ ಪಾರ್ಲರ್ಗಳನ್ನು ಪ್ರಾರಂಭಿಸಲಾಗುತ್ತಿದೆ. ಇದೂ ಒಳಗೊಂಡಂತೆ ಒಟ್ಟಾರೆ ಇಡೀ ರಾಜ್ಯಾದ್ಯಂತ 500 ಹೊಸ ನಂದಿನಿ ಮಳಿಗೆ, ಪಾರ್ಲರ್ಗಳು ಉದ್ಘಾಟನೆಗೊಳ್ಳಲಿವೆ” ಎಂದು ಕೆಎಂಎಫ್ ಎಂಡಿ ಬಿ. ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟವು ‘ನಂದಿನಿ’ ಬ್ರ್ಯಾಂಡ್ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕದ ಹಾಲು ಸಹಕಾರಿ ಸಂಘವಾಗಿದೆ. ಇದು ಪ್ರಾಥಮಿಕ ಡೈರಿ ಸಂಘಗಳಿಂದ ಹಾಲು ಸಂಗ್ರಹಿಸಿ, ಸಂಸ್ಕರಿಸಿ ಗ್ರಾಹಕರಿಗೆ ಕಳೆದ 5 ದಶಕಗಳಿಂದ ವಿತರಿಸುತ್ತದೆ. ಕೆಎಂಎಫ್ ಭಾರತದ ಡೈರಿ ಸಹಕಾರಿಗಳಲ್ಲಿ ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಹಾಲು ಸಂಗ್ರಹಣೆ ಮತ್ತು ಮಾರಾಟದಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.
ಕೆಎಂಎಫ್ 16 ಒಕ್ಕೂಟಗಳನ್ನು ಹೊಂದಿದ್ದು, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳನ್ನು ಒಳಗೊಂಡಿರುವ ‘ಬಮೂಲ್’ ಒಕ್ಕೂಟವು ಹೆಚ್ಚು ಹಾಲು ಸಂಗ್ರಹ ಹಾಗೂ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಬಮೂಲ್ ನಿತ್ಯವೂ ಸರಾಸರಿ 17.18 ಲಕ್ಷ ಕೆಜಿ ಹಾಲು ಸಂಗ್ರಹಿಸುತ್ತಿದ್ದು, 9.40 ಲಕ್ಷ ಲೀ. ಪ್ರಮಾಣದಷ್ಟು ಮಾರಾಟ ಮಾಡುತ್ತಿದೆ. ರಾಜಧಾನಿಯಲ್ಲಿ ಹಾಲು ಹಾಗೂ ಮೊಸರು ಮಾರಾಟ 22 ಲಕ್ಷ ಲೀಟರ್ಗೂ ಅಧಿಕ ಮಾರಾಟವಾಗುತ್ತಿದೆ.

ಬೆಂಗಳೂರು ಹೊರತುಪಡಿಸಿ ಹಾಸನ, ಮಂಡ್ಯ, ತುಮಕೂರು, ಮೈಸೂರು ಹಾಗೂ ಶಿವಮೊಗ್ಗ, ದಕ್ಷಿಣ ಕನ್ನಡದ ಒಕ್ಕೂಟಗಳಲ್ಲಿ ಹೆಚ್ಚಿನ ಹಾಲು ಸಂಗ್ರಹವಾಗುತ್ತಿದೆ. ಹಸುಗಳ ಸಂಖ್ಯೆ ಕಡಿಮೆ ಇರುವುದರಿಂದ ಕಲಬುರಗಿ ಒಕ್ಕೂಟದಲ್ಲಿ 0.60 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಈ ಪೈಕಿ ಶೇ.95 ಮಾರಾಟವಾಗುತ್ತಿದೆ.
ನಂದಿನಿ ಬ್ರ್ಯಾಂಡ್ ಮೂಲಕ ಕರ್ನಾಟಕ ಹಾಲು ಮಹಾಮಂಡಳವು ಎಲ್ಲ ವರ್ಗಗಳಲ್ಲಿ ವೈವಿಧ್ಯಮಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿವಿಧ ಗ್ರಾಹಕನ ವಯೋಮಿತಿಗೆ ಹಾಗೂ ಮನಸ್ಥಿತಿಗೆ ತಕ್ಕಂತೆ ಕೈಗೆಟುಕುವ ಬೆಲೆಯಲ್ಲಿ ಈಗಾಗಲೇ ಬಿಡುಗಡೆ ಮಾಡಿದ್ದು, 175ಕ್ಕೂ ಅಧಿಕ ಹಾಲಿನ ಉತ್ಪನ್ನಗಳು 395 ಶ್ರೇಣಿಗಳಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ.
ಬ್ರ್ಯಾಂಡ್ಗಳ ಆರ್ಥಿಕ ಸದೃಢತೆ, ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ಗಳ ಮೌಲ್ಯಮಾಪನವನ್ನು ಅಳೆಯುವ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಬ್ರ್ಯಾಂಡ್ ಫೈನಾನ್ಸ್ ಮೌಲ್ಯಮಾಪನ ಸಂಸ್ಥೆಯು 2025ರಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಈ ವರದಿಯಲ್ಲಿ ‘ನಂದಿನಿ’ ಬ್ರ್ಯಾಂಡ್ 2024ರಲ್ಲಿ 43ನೇ ಸ್ಥಾನದಿಂದ 2025ರಲ್ಲಿ 38ನೇ ಸ್ಥಾನಕ್ಕೆ ಏರಿದೆ. ಭಾರತೀಯ ಬ್ರ್ಯಾಂಡ್ಗಳ ಅಗ್ರ ನೂರರಲ್ಲಿ ‘ನಂದಿನಿ’ ಬ್ರ್ಯಾಂಡ್ ಮೌಲ್ಯವು 1,079 ಮಿಲಿಯನ್ಗೆ (107.9 ಕೋಟಿ ರೂ) ಏರಿಕೆಯಾಗಿದೆ. ಇದು ಹಿಂದಿನ ವರ್ಷಕ್ಕಿಂತ 139 ಮಿಲಿಯನ್ (13.9 ಕೋಟಿ ರೂ.) ಬ್ರ್ಯಾಂಡ್ ಮೌಲ್ಯ ಹೆಚ್ಚಳವಾಗಿದೆ.

ಇನ್ನು, ಆಹಾರ ಮತ್ತು ಪಾನೀಯಗಳ ವಿಭಾಗದಲ್ಲಿ ‘ನಂದಿನಿ’ ಬ್ರ್ಯಾಂಡ್ ದೇಶದಲ್ಲೇ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದೆ. ಮೊದಲ ಸ್ಥಾನದಲ್ಲಿ ‘ಅಮುಲ್’ ಇದ್ದರೆ, ಎರಡು ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ‘ಮದರ್ ಡೈರಿ’ ಮತ್ತು ‘ಬ್ರಿಟಾನಿಯಾ’ ಇದೆ. ಐದನೇ ಸ್ಥಾನದಲ್ಲಿದೆ ‘ಡಾಬರ್’ ಸಂಸ್ಥೆ ಇದೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಸಂಘಕ್ಕೆ (ಕೆಎಂಎಫ್) ಐವತ್ತು ವರ್ಷಗಳ ಇತಿಹಾಸ ಇದೆ. 1974ರಲ್ಲಿ ಕರ್ನಾಟಕ ಡೈರಿ ಡೆವಲಪ್ಮೆಂಟ್ ಕಾರ್ಪೊರೇಶನ್ ಆಗಿ ಅಸ್ತಿತ್ವಕ್ಕೆ ಬಂದಿತ್ತು. 1984ರಲ್ಲಿ ಕೆಎಂಎಫ್ ಎಂದು ಇದರ ಹೆಸರು ಬದಲಿಸಲಾಗಿತ್ತು. 1983ರಲ್ಲಿ ‘ನಂದಿನಿ’ ಬ್ರ್ಯಾಂಡ್ ಅನ್ನು ರಾಜ್ಯದಲ್ಲಿ ಪರಿಚಯಿಸಿದ್ದು, ಕಳೆದ 5 ದಶಕಗಳಿಂದ ಜನಮನ್ನಣೆ ಗಳಿಸಿಕೊಳ್ಳುತ್ತಾ ವಿಶ್ವದಾದ್ಯಂತ ಪಸರಿಸುತ್ತಿದೆ.
ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ ಟಿ-20 ವಿಶ್ವಕಪ್ನಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿತ್ತು. ಕರ್ನಾಟಕದ ಹಾಲಿನ ಸಂಸ್ಥೆಯೊಂದು ಈ ಹಂತಕ್ಕೆ ಬೆಳೆದಿರುವುದು ಶ್ಲಾಘನೀಯ. ಕೆಎಂಎಫ್ನ 50 ವರ್ಷದ ಮೈಲಿಗಲ್ಲಿನ ನಡುವೆ ಇದೀಗ ಹೊಸದಾಗಿ 500 ಮಳಿಗೆಗಳನ್ನು ಏಕಕಾಲದಲ್ಲಿ ಉದ್ಘಾಟಿಸಲು ಕೈಗೊಂಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಪ್ರಸ್ತುತ 2024-25ನೇ ಸಾಲಿನಲ್ಲಿ ರೂ. 24,928 ಕೋಟಿ ವಹಿವಾಟು ಹೊಂದಿರುವ ಕೆಎಂಎಫ್ನೊಂದಿಗೆ, ಸುಮಾರು 26.89 ಲಕ್ಷ ಹಾಲು ಉತ್ಪಾದಕರು ನೋಂದಾಯಿಸಿಕೊಂಡಿದ್ದಾರೆ.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.





