- ‘ಮಹಿಳೆಯರಲ್ಲಿ ಕ್ಷಮೆಯಾಚಿಸದಿದ್ದರೆ, ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ’
- ನಿಮ್ಮ ಘೋಷಣೆಗಳನ್ನು ನಿಲ್ಲಿಸಿ ಮೊದಲು ಕೆಲಸ ಮಾಡಿ ಎಂದ ಬಹುಭಾಷಾ ನಟ
‘ಕೇವಲ ಮತ ಮತ್ತು ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ನಿಮ್ಮ ರಾಜಕೀಯ, ಇಂದು ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ ‘ ಹೀಗಂತ ಪ್ರಧಾನಿ ಮೋದಿಯವರಿಗೆ ಪರೋಕ್ಷ ಟಾಂಗ್ ನೀಡಿದ್ದು ಬಹುಭಾಷಾ ನಟ ಕಿಶೋರ್.
ಮಣಿಪುರದ ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿರುವ ಘಟನೆಯ ವಿಡಿಯೋ ಹೊರಬಂದ ಬಳಿಕ ಫೇಸ್ಬುಕ್ ಪೋಸ್ಟ್ ಹಂಚಿಕೊಂಡಿರುವ ನಟ ಕಿಶೋರ್, ದೇಶದಲ್ಲಾಗುತ್ತಿರುವ ಕೆಲ ಬೆಳವಣಿಗೆಗಳನ್ನು ಉಲ್ಲೇಖಿಸಿ, ಆಕ್ರೋಶ ಹೊರಹಾಕಿದ್ದಾರೆ.
‘ಕೇವಲ ಮತ ಮತ್ತು ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ನಿಮ್ಮ ರಾಜಕೀಯ, ಇಂದು ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ . ನೀವು ಈಗಲಾದರೂ ನಿಮ್ಮ ಬಾಯಿ ತೆರೆದು ಈ ಮಹಿಳೆಯರಲ್ಲಿ ಕ್ಷಮೆಯಾಚಿಸದಿದ್ದರೆ, ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ’ ಎಂದು ತೀಕ್ಷ್ಣವಾಗಿ ಹೇಳಿಕೆ ನೀಡಿದ್ದಾರೆ.
ಕೆಲವು ಪ್ರಕರಣಗಳನ್ನು ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿರುವ ನಟ ಕಿಶೋರ್, ‘ಹೌದು, ನಿಮ್ಮಿಂದ ನಾವು ಏನನ್ನಾದರೂ ನಿರೀಕ್ಷಿಸಲು ಹೇಗೆ ಸಾಧ್ಯ? ಮಹಿಳಾ ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬೆಂಬಲಿಸಿದವರು ನೀವೇ ಅಲ್ಲವೇ? ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬಿಡುಗಡೆ ಮಾಡಿ ಸಂಭ್ರಮಿಸಿದವರು ನೀವೇ ಅಲ್ಲವೇ? ಹಾತ್ರಸ್ ನ ದಲಿತ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ಮುಚ್ಚಿ ಮುಗಿಸಿದವರು ನೀವೇ ಅಲ್ಲವೇ???? ” ಎಂದು ಪ್ರಶ್ನಿಸಿದ್ದಾರೆ.
”ನಿಮ್ಮ ಘೋಷಣೆಗಳನ್ನು ನಿಲ್ಲಿಸಿ ಮೊದಲು ಕೆಲಸ ಮಾಡಿ..ನಿಮ್ಮ ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರವಿರಲಿ…. ” ಎಂದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.





