ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದ ಖಾಸಗಿ ಸಾರಿಗೆ ಒಕ್ಕೂಟದವರು ಕರೆ ನೀಡಿರುವ ‘ಬೆಂಗಳೂರು ಬಂದ್’ ವಾಪಸ್ ಪಡೆದಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, 32 ಬೇಡಿಕೆಗಳ ಪೈಕಿ 27 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ‘ಬೆಂಗಳೂರು ಬಂದ್’ ವಾಪಸ್ ಪಡೆದಿರುವುದಾಗಿ ಖಾಸಗಿ ಸಾರಿಗೆ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸ್ವಾತಂತ್ರ್ಯ ಉದ್ಯಾನಕ್ಕೆ ಭೇಟಿ ನೀಡಿದ ಸಚಿವರು, ‘ನಾನು ನಿಮ್ಮ ಪರ ಇದ್ದೇನೆ. ನನ್ನನ್ನೂ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ. ತೆರಿಗೆ ಮತ್ತು ಶಕ್ತಿ ಯೋಜನೆಗೆ ಸಂಬಂಧಿಸಿದ ಬೇಡಿಕೆಯನ್ನು ಈಡೇರಿಸುವುದು ನನ್ನ ವ್ಯಾಪ್ತಿಯಲ್ಲಿ ಕಷ್ಟ. ಉಳಿದ ಬೇಡಿಕೆಗಳನ್ನು ಈಡೇರಿಸುತ್ತೇನೆ’ ಎಂದು ಭರವಸೆ ನೀಡಿದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ, ವಕೀಲ ನಟರಾಜ್ ಶರ್ಮಾ, ‘ಆರ್ಥಿಕ ಇಲಾಖೆಗೆ ಸಂಬಂಧಿಸಿದ ಮೂರು ಬೇಡಿಕೆಗಳನ್ನು ಹೊರತುಪಡಿಸಿ ಉಳಿದ 27 ಬೇಡಿಕೆಗಳನ್ನು ಈಡೇರಿಸಲು ಮಂಗಳವಾರವೇ ಕ್ರಮ ಕೈಗೊಳ್ಳಬೇಕು ಎಂಬ ಷರತ್ತು ವಿಧಿಸಿ ಮುಷ್ಕರ ಹಿಂಪಡೆಯಲಾಯಿತು. ನಮ್ಮ ಬಂದ್ನಿಂದ ಇಡೀ ಬೆಂಗಳೂರು ಸ್ತಬ್ಧವಾಗಿತ್ತು. ಇದು ನಮ್ಮ ಸಾರಿಗೆ ಒಕ್ಕೂಟದ ಶಕ್ತಿ’ ಎಂದು ತಿಳಿಸಿದ್ದಾರೆ.





