“ನವೆಂಬರ್ 18 ರಿಂದ 20ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 28ನೇ ಬೆಂಗಳೂರು ಟೆಕ್ ಸಮ್ಮಿಟ್ ನಡೆಯಲಿದೆ. ಈ ವೇಳೆ ಕರ್ನಾಟಕದವರು, ಕರ್ನಾಟಕದಲ್ಲೇ ಅಭಿವೃದ್ಧಿಪಡಿಸಿರುವ ‘ಕಿಯೋ ಎಐ ಕಂಪ್ಯೂಟರ್’ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾರ್ಪಣೆ ಮಾಡಲಿದ್ದಾರೆ” ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಿಯೋ ಎಂಬುದು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಕೈಗೆಟುಕುವ ಕಂಪ್ಯೂಟಿಂಗ್ ಸೌಲಭ್ಯವು ತಳಮಟ್ಟದಲ್ಲಿ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವ, ರಾಜ್ಯದಾದ್ಯಂತ ನಾಗರಿಕರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿರುವ ವಿಶಿಷ್ಟ ಉತ್ಪನ್ನ ಇದು. ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ (ಕಿಯೋನಿಕ್ಸ್) ಸಹಯೋಗದಲ್ಲಿ ವಿನ್ಯಾಸ ರೂಪಿಸಿ ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ ಒಳಗೊಂಡ ಪುಟ್ಟ ಗಾತ್ರದ ಮತ್ತು ಅಗ್ಗದ ವೈಯಕ್ತಿಕ ಕಂಪ್ಯೂಟರ್ (ಪಿಸಿ) ಅನ್ನು ಪರಿಚಯಿಸಿದೆ. ಇದು ರಾಜ್ಯದಲ್ಲಿನ ಡಿಜಿಟಲ್ ಲಭ್ಯತೆಯ ಅಂತರವನ್ನು ನಿವಾರಿಸುವ ಗುರಿ ಹೊಂದಿದೆ. 28ನೇ ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಲೋಕಾರ್ಪಣೆಗೊಳ್ಳಲಿದೆ” ಎಂದು ತಿಳಿಸಿದರು.
“ದೇಶದ ಜನರ 90 ಶೇ. ಜನರ ಕೈಯ್ಯಲ್ಲಿ ಮೊಬೈಲ್ ಇದೆ. ಆದರೆ, ಕಂಪ್ಯೂಟರ್ ವಿಚಾರಕ್ಕೆ ಬಂದರೆ 10 ಶೇಕಡಾಕ್ಕಿಂತಲೂ ಇದೆ. ಕರ್ನಾಟಕದಲ್ಲಿ ಶೇ.15ರಷ್ಟಿದೆ. ಕೆಲವೊಂದು ಅಧ್ಯಯನದ ಪ್ರಕಾರ ಹಲವಾರು ವಿದ್ಯಾರ್ಥಿಗಳು ಇನ್ನೂ ಕೂಡ ಕಂಪ್ಯೂಟರ್ ಸಾಕ್ಷರತೆಯ ವಿಚಾರದಲ್ಲಿ ಹಿಂದೆ ಬಿದ್ದಿದ್ದಾರೆ. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ (ಕಿಯೋನಿಕ್ಸ್)ವು ಜನರಿಗೆ ಕೈಗೆಟಕುವ ದರದಲ್ಲಿ ಸಿಗುವಂತಾಗಲು ಎಐ ಕಂಪ್ಯೂಟರ್ ‘ಕಿಯೋ’ ಅನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ಈ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಖಾಸಗಿ ಸಂಸ್ಥೆಯೊಂದು 500ರಷ್ಟು ಕಿಯೋ ಕಂಪ್ಯೂಟರ್ ಅನ್ನು ಬುಕ್ಕಿಂಗ್ ಮಾಡಿಕೊಂಡಿದೆ. ನಾಳೆಯಿಂದ ನಡೆಯಲಿರುವ ಟೆಕ್ ಸಮ್ಮಿಟ್ನಲ್ಲಿ ಕಿಯೋನಿಕ್ಸ್ನ ಸ್ಟಾಲ್ನಲ್ಲಿ ಕೂಡ ಸಾರ್ವಜನಿಕರು ಕಿಯೋ ಎಐ ಕಂಪ್ಯೂಟರ್ ಅನ್ನು ಬುಕ್ಕಿಂಗ್ ಮಾಡಿಕೊಂಡಲ್ಲಿ ಮುಂದಿನ ಎರಡು ತಿಂಗಳ ಒಳಗೆ ಅವರ ಕೈ ಸೇರಲಿದೆ” ಎಂದು ತಿಳಿಸಿದರು.
ಕಿಯೋ ಎಐ ಕಂಪ್ಯೂಟರ್ನ ಬೆಲೆ ಎಷ್ಟು ಎಂಬುದನ್ನು ನಾಳೆ ಬಿಡುಗಡೆಗೊಳಿಸಿದ ನಂತರ ತಿಳಿಸುತ್ತೇವೆ. ಇದರ ಬೆಲೆ ಕೇಳಿದರೆ ಎಲ್ಲರಿಗೂ ಅಚ್ಚರಿಯಾಗುವುದಂತೂ ಸತ್ಯ. ನಮ್ಮಲ್ಲಿ ಸ್ಮಾರ್ಟ್ಫೋನ್ಗಳ ಬಳಕೆ ವ್ಯಾಪಕವಾಗಿದ್ದರೂ, ಶೈಕ್ಷಣಿಕ ಉದ್ದೇಶ, ಕೋಡಿಂಗ್, ಆನ್ಲೈನ್ ತರಗತಿಗಳು ಮತ್ತು ಹೈಬ್ರಿಡ್ ಕಲಿಕೆಗೆ ಕಂಪ್ಯೂಟರ್ಗಳು ಅಗತ್ಯ ಎಂಬುದನ್ನು ಅಧ್ಯಯನಗಳು ತಿಳಿಸಿವೆ. ಸೂಕ್ತ ಸಾಧನಗಳ ಲಭ್ಯತೆಯ ಕೊರತೆಯಿಂದಾಗಿ ಶೇಕಡ 60 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆನ್ಲೈನ್ ಕಲಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಶಾಲೆ – ಕಾಲೇಜು ತೊರೆಯಲು ಇದು ಕೂಡ ನೇರವಾಗಿ ಕೊಡುಗೆ ನೀಡುತ್ತಿದೆ. ಜ್ಞಾನ ಆಧಾರಿತ (ಕೆ), ಮಿತವ್ಯಯ (ಇ) ಮತ್ತು ಮುಕ್ತ-ಕಂಪ್ಯೂಟಿಂಗ್ (ಓಪನ್ ಸೋರ್ಸ್) ಕೆಇಒ – ಈ ಸವಾಲಿಗೆ ಕರ್ನಾಟಕದ ಉತ್ತರವಾಗಿದೆ. ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್ (ಒಎಸ್) ಹೊಂದಿರುವ ಓಪನ್-ಸೋರ್ಸ್ ಆರ್ಐಎಸ್ಸಿ-ವಿ ಪ್ರೊಸೆಸರ್ನಲ್ಲಿ ನಿರ್ಮಿಸಿರುವ ʼಕೆಇಒʼ ಕೈಗೆಟುಕುವ ಬೆಲೆಯಲ್ಲಿ ಸಂಪೂರ್ಣ ಕಂಪ್ಯೂಟಿಂಗ್ ಬಳಕೆಯ ಅನುಭವ ನೀಡಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದು 4ಜಿ, ವೈ-ಫೈ, ಈಥರ್ನೆಟ್, ಯುಎಸ್ಬಿ- ಎ ಮತ್ತು ಯುಎಸ್ಬಿ – ಸಿ ಪೋರ್ಟ್ಗಳು, ಎಚ್ಡಿಎಂಐ ಮತ್ತು ಆಡಿಯೊ ಜ್ಯಾಕ್ ಸೌಲಭ್ಯ ಹೊಂದಿದೆ. ಕಲಿಕೆ, ಪ್ರೋಗ್ರಾಮಿಂಗ್ ಮತ್ತು ಉತ್ಪಾದಕತೆ ಪರಿಕರಗಳೊಂದಿಗೆ ಸಂಪೂರ್ಣ ಸಜ್ಜಾಗಿದೆ. ಆನ್-ಡಿವೈಸ್ ಎಐ ಕೋರ್ ಒಳಗೊಂಡಿದೆ. ಇದು ಇಂಟರ್ನೆಟ್ ಲಭ್ಯ ಇರದಿದ್ದರೂ ಸ್ಥಳೀಯವಾಗಿ ಕಾರ್ಯನಿರ್ವಹಿಸಲು ಎಐ ಅನುವು ಮಾಡಿಕೊಡುತ್ತದೆ. ಇದು ಕಡಿಮೆ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕರ್ನಾಟಕ ಡಿಎಸ್ಇಆರ್ಟಿ ಪಠ್ಯಕ್ರಮದಲ್ಲಿ ತರಬೇತಿ ಪಡೆದ ಎಐ ಏಜೆಂಟ್ ಬುದ್ಧ (BUDDH) ಜೊತೆಗೆ ಬರುತ್ತದೆ. ಬೆಂಗಳೂರು ಟೆಕ್ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ‘ಕೆಇಒ’ವನ್ನು ಔಪಚಾರಿಕವಾಗಿ ಅನಾವರಣಗೊಳಿಸಲಿದ್ದಾರೆ. ಬಿಡುಗಡೆಯ ನಂತರ, ಇದನ್ನು ಶೃಂಗಸಭೆಯ ಉದ್ದಕ್ಕೂ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು, ನವೋದ್ಯಮಿಗಳು, ಉದ್ಯಮ ಮುಖಂಡರು ಮತ್ತು ಸಂದರ್ಶಕರು ಇದನ್ನು ಬಳಸಲು ಮತ್ತು ರಾಜ್ಯದಾದ್ಯಂತ ಸಾಮೂಹಿಕ ಬಳಕೆಗೆ ಕೈಗೆಟುಕುವ ಕೃತಕ ಬುದ್ಧಿಮತ್ತೆಯ ಕಾಂಪ್ಯಾಕ್ಟ್ ಕಂಪ್ಯೂಟರ್ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ. “ಕೆಇಒ ಡಿಜಿಟಲ್ ಅಂತರ ಕಡಿಮೆ ಮಾಡುವುದಕ್ಕೆ ಕರ್ನಾಟಕದ ಪ್ರಾಯೋಗಿಕ ಉತ್ತರವಾಗಿದೆ. ಇದು ಐಷಾರಾಮಿ ಸಾಧನವಲ್ಲ; ಇದು ಎಲ್ಲರಿಗೂ ಲಭ್ಯವಾಗುವ ಅಗ್ಗದ ಸಾಧನವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ, ಸಣ್ಣ ವ್ಯಾಪಾರಿ ಮತ್ತು ಪ್ರತಿ ಮನೆಯು ಡಿಜಿಟಲ್ ಆರ್ಥಿಕತೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ” ಎಂದು ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
“ಕಳೆದ ಒಂದು ವರ್ಷದ ನಿರಂತರ ಅಧ್ಯಯನದಿಂದಾಗಿ ‘ಕಿಯೋ ಎಐ ಕಂಪ್ಯೂಟರ್’ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಮುಂದಿನ ಹತ್ತು ವರ್ಷಗಳ ಗುರಿಯನ್ನಿಟ್ಟುಕೊಂಡು ಅಭಿವೃದ್ಧಿ ಮಾಡಿದ್ದೇವೆ. ಹಲವಾರು ಅಧ್ಯಯನಗಳ ಬಳಿಕ ಇದನ್ನು ಸಾರ್ವಜನಿಕರಿಗೆ ಪರಿಚಯಿಸುತ್ತಿದ್ದೇವೆ” ಎಂದು ಸಚಿವರು ತಿಳಿಸಿದರು.

ಕಿಯೊನಿಕ್ಸ್ ಅಧ್ಯಕ್ಷ ಶರತ್ ಕುಮಾರ್ ಬಚ್ಚೇಗೌಡ ಅವರು, ಮಾತನಾಡಿ, “ಕಿಯೋನಿಕ್ಸ್ ಎಲೆಕ್ಟ್ರಾನಿಕ್ಸ್ ನಾವೀನ್ಯತೆಯ ಧ್ಯೇಯವನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ಒಲವು ತೋರುತ್ತಿದೆ. ಓಪನ್-ಸೋರ್ಸ್ ಆರ್ಐಎಸ್ಸಿ-ವಿ ಸ್ಟ್ಯಾಕ್ ಅನ್ನು ಅಳವಡಿಸಿಕೊಳ್ಳುವ ಮೂಲಕ, ‘ಕಿಯೋ’ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ, ಸ್ಥಳೀಯವಾಗಿ ಅಳವಡಿಸಿಕೊಳ್ಳುವ, ರಾಜ್ಯದಲ್ಲಿಯೇ ಅಭಿವೃದ್ಧಿಪಡಿಸುವ ಕಂಪ್ಯೂಟಿಂಗ್ ಪರಿಹಾರಗಳಿಗೆ ಕರ್ನಾಟಕದ ಬದ್ಧತೆಯನ್ನು ಬಲಪಡಿಸುತ್ತದೆ” ಎಂದು ಹೇಳಿದರು.
ಶಾಲೆಗಳು, ವಿಶ್ವವಿದ್ಯಾಲಯಗಳು, ಸಣ್ಣ ಉದ್ದಿಮೆಗಳು, ಸರ್ಕಾರಿ ಕಚೇರಿಗಳು ಮತ್ತು ಮನೆಗಳಲ್ಲಿ ಕೆಇಒ ಬಳಕೆಯಾಗಲಿದೆ. ಡಿಜಿಟಲ್ ಕಲಿಕೆ, ಕೌಶಲ ಮತ್ತು ಉದ್ಯಮಶೀಲತೆಗೆ ಇದು ಹೊಸ ಮಾರ್ಗಗಳನ್ನು ಸೃಷ್ಟಿಸಲಿದೆ. ಎಲ್ಲಾ ಜಿಲ್ಲೆಗಳಲ್ಲಿ ವಿಕೇಂದ್ರೀಕೃತ ತಂತ್ರಜ್ಞಾನದ ಬೆಳವಣಿಗೆ ಸಾಧಿಸುವ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಡಿಜಿಟಲ್ ಅವಕಾಶವನ್ನು ಖಚಿತಪಡಿಸಿಕೊಳ್ಳುವ ರಾಜ್ಯ ಸರ್ಕಾರದ ಧ್ಯೇಯವನ್ನು ಸಾಕಾರಗೊಳಿಸಲು ನೆರವಾಗಲಿದೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಐಟಿ ಬಿಟಿ ಇಲಾಖೆಯ ಕಾರ್ಯದರ್ಶಿ ಎನ್ ಮಂಜುಳಾ, KITS ನಿರ್ದೇಶಕರಾದ ರಾಹುಲ್ ಸಂಕನೂರು ಉಪಸ್ಥಿತರಿದ್ದರು.





