2024ರ ಲೋಕಸಭಾ ಚುನಾವಣೆಯ ಫಲಿತಾಂಶವು ನಿಜಕ್ಕೂ ಬಿಜೆಪಿಗೆ ಭಾರೀ ಆಘಾತ ನೀಡಿದೆ. ಮೂರನೇ ಬಾರಿಗೆ ಸ್ವತಂತ್ರವಾಗಿ ಗೆಲ್ಲುವುದಲ್ಲದೇ, ಚಾರ್ ಸೌ ಪಾರ್(400) ಎಂಬ ಘೋಷವಾಕ್ಯವೇ ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ದೊಡ್ಡ ಮುಳುವಾಗಿ ಪರಿಣಮಿಸಿದೆ.
ಬಿಜೆಪಿ ಬಹುಮತ ಪಡೆಯಲು ಸದ್ಯ ಹೆಣಗಾಡುತ್ತಿರುವುದು ಒಂದೆಡೆಯಾದರೆ, ರಾಮಮಂದಿರವಿರುವ ಫೈಝಾಬಾದ್ ಲೋಕಸಭಾ ಕ್ಷೇತ್ರದಲ್ಲಿನ ಸೋಲು ಅಲ್ಲಿನ ಸ್ಥಳೀಯ ಬಿಜೆಪಿ ಮುಖಂಡರಿಗೆ ಮಾತ್ರವಲ್ಲದೇ, ಸ್ವತಃ ನರೇಂದ್ರ ಮೋದಿ, ಅಮಿತ್ ಶಾ, ಸಂಘಪರಿವಾರ ಹಾಗೂ ಮೋದಿಯ ಭಕ್ತರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎನ್ನುವುದು ವಾಸ್ತವ. ರಾಮನ ಊರಿನಲ್ಲಿ ಮೋದಿಯ ಹಿನ್ನಡೆಗೆ ಕಾರಣವೇನು? ಎಂಬುದು ಈಗ ದೇಶದೆಲ್ಲೆಡೆ ಚರ್ಚೆಗೆ ವಸ್ತುವಾಗಿರುವುದಂತೂ ಮಾತ್ರ ಸತ್ಯ.
ಕಳೆದ ಬಾರಿ ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 303 ಸೀಟುಗಳು ಮತ್ತು NDA ಒಕ್ಕೂಟಕ್ಕೆ 353 ಸೀಟುಗಳು ಬಂದಿದ್ದವು. ಹೀಗಾಗಿ ಬಿಜೆಪಿ ಮತ್ತು NDA ಒಕ್ಕೂಟ 2019 ಕ್ಕೆ ಹೋಲಿಸಿದರೆ 2024 ರಲ್ಲಿ 50 ಕ್ಕೂ ಹೆಚ್ಚು ಸೀಟುಗಳನ್ನು ಕಳೆದುಕೊಂಡಿದೆ. 2019 ರಲ್ಲಿ ಶೇ. 37.36 ರಷ್ಟು ಮತಗಳನ್ನು ಪಡೆದುಕೊಂಡಿದ್ದರೆ ಈ ಬಾರಿ ಅದಕ್ಕಿಂತ ಹೆಚ್ಚು ಮತಗಳನ್ನು ಪಡೆದುಕೊಂಡಿಲ್ಲ. ಈ ಮೂಲಕ ಭಾರತದ ಜನತೆ, ಮೋದಿ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ತಮಗಿರುವ ಅಸಮಾಧಾನವನ್ನು ಮತ್ತು ಅಸಮ್ಮತಿಯನ್ನು, ಬಡಜನರ ಬಗ್ಗೆ ತೋರಿದ ದುರಹಂಕಾರಕ್ಕೆ ಬಲವಾದ ಎಚ್ಚರಿಕೆಯನ್ನು ಹಾಗೂ ಗುದ್ದನ್ನು ಕೊಟ್ಟಿದ್ದಾರೆ ಎಂಬುದಂತೂ ಸತ್ಯ.
ಇತ್ತೀಚೆಗೆ ʼದಿ ಕ್ವಿಂಟ್ʼ ಅನ್ನುವ ಮಾಧ್ಯಮ ಸಂಸ್ಥೆಯೊಂದು ನರೇಂದ್ರ ಮೋದಿ 206 ಸಭೆಗಳು, 81 ಸಂದರ್ಶನಗಳಲ್ಲಿ ಬಳಸಿದ್ದ ಶಬ್ದಗಳನ್ನು ಲೆಕ್ಕ ಹಾಕಿತ್ತು. ಇದರಲ್ಲಿ ‘ರಾಮಮಂದಿರ’ ಎಂಬ ಪದದ ಬಳಕೆ ಮಾಡಿರುವುದು ಕೇವಲ 244 ಸಾರಿ ಮಾತ್ರ ಎಂದು ಉಲ್ಲೇಖಿಸಿತ್ತು. ಈ ಅಧ್ಯಯನದ ಪ್ರಕಾರ ಮೋದಿಯವರು ಅತಿ ಹೆಚ್ಚು ಬಳಸಿರುವ ಪದ “ಮೋದಿ”ಯೇ. ಮೋದಿ ಪದವನ್ನು 3104 ಬಾರಿ ಬಳಸಿದ್ದರು ಪ್ರಧಾನಮಂತ್ರಿ.
ಮೋದಿಯ ಹಿನ್ನಡೆಗೆ ಕಾರಣವೇನು?
ಉತ್ತರ ಪ್ರದೇಶದ ಲೋಕಸಭಾ ಚುನಾವಣೆಯ ಫಲಿತಾಂಶ ಬೆಚ್ಚಿಬೀಳಿಸುವಂತಿದ್ದು, ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲದೆ ರಾಜಕೀಯ ಪಂಡಿತರಲ್ಲೂ ಅಚ್ಚರಿ ಮೂಡಿಸಿದೆ. ಫೈಝಾಬಾದ್ (ಅಯೋಧ್ಯೆ) ಲೋಕಸಭಾ ಕ್ಷೇತ್ರದಿಂದ ಅತ್ಯಂತ ವಿಭಿನ್ನ ಫಲಿತಾಂಶಗಳು ಬಂದಿವೆ. ಅಲ್ಲಿ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ 50 ಸಾವಿರ ಮತಗಳಿಂದ ಸೋತಿದ್ದಾರೆ. ಬಿಜೆಪಿಯವರು ರಾಮಮಂದಿರ ಕಟ್ಟಿಸಿ, ಅದ್ಧೂರಿಯಾಗಿ ಉದ್ಘಾಟನೆ ಮಾಡಿದ ಸ್ಥಾನವನ್ನು ಬಿಜೆಪಿ ಕಳೆದುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬಿಜೆಪಿಯ ಮತ ಎಣಿಕೆ ಏಜೆಂಟ್ ತಿವಾರಿ ಮಾತನಾಡಿ, “ನಾವು ನಿಜವಾಗಿಯೂ ಶ್ರಮಿಸಿದ್ದೇವೆ. ಅದಕ್ಕಾಗಿ ನಾವು ಹೋರಾಡಿದ್ದೇವೆ. ಆದರೆ ರಾಮಮಂದಿರ ನಿರ್ಮಾಣವು ಮತಗಳಾಗಿ ಪರಿವರ್ತನೆಯಾಗಲಿಲ್ಲ” ಎಂದು ತಿಳಿಸಿದ್ದಾರೆ.
ಮತ ಎಣಿಕೆ ಕೇಂದ್ರದಿಂದ ಚಿತ್ರ ಸ್ಪಷ್ಟವಾಗುತ್ತಿದ್ದಂತೆ ನಿಶ್ಶಬ್ದವಾಗಿತ್ತು. ಫೈಝಾಬಾದ್ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವಾಗಿರುವ ಅಯೋಧ್ಯೆಯ ಸರ್ಕಾರಿ ಇಂಟರ್ ಕಾಲೇಜಿನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಲಕ್ಷ್ಮೀಕಾಂತ್ ತಿವಾರಿ ಅವರು ಅಯೋಧ್ಯೆಯ ಬಹುತೇಕ ನಿರ್ಜನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಕುಳಿತಿದ್ದರು.
ರಾಮಮಂದಿರದ ಪ್ರತಿಷ್ಠಾಪನೆಯ ಕೇವಲ ನಾಲ್ಕು ತಿಂಗಳ ನಂತರ, ಫೈಝಾಬಾದ್‌ನಲ್ಲಿ ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ಸೋತಿದೆ. ಅದರಲ್ಲಿ ಅಯೋಧ್ಯೆಯೂ ಒಂದು ಭಾಗವಾಗಿದೆ. ಚುನಾವಣಾ ಪ್ರಚಾರದುದ್ದಕ್ಕೂ ರಾಮಮಂದಿರದ ಪ್ರಸ್ತಾಪ. ಯುಪಿಯ ಫಲಿತಾಂಶಗಳು ಎನ್‌ಡಿಎ 71-73 ಸ್ಥಾನಗಳನ್ನು ಪಡೆಯುವ ಎಲ್ಲಾ ಎಕ್ಸಿಟ್ ಪೋಲ್‌ಗಳನ್ನು ಸುಳ್ಳಾಗಿಸಿದೆ. ಈ ಬಾರಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 370 ಸ್ಥಾನಗಳ ಗುರಿಗಿಂತ ಬಹಳ ಹಿಂದೆ ಬಿದ್ದಿದೆ.
ಭೂಸ್ವಾಧೀನಕ್ಕೆ ಬುದ್ಧಿ ಕಲಿಸಿದ ಅಯೋಧ್ಯೆಯ ಮತದಾರರು
ರಾಮಮಂದಿರಕ್ಕಾಗಿ ದೇವಸ್ಥಾನ ಮತ್ತು ಅಯೋಧ್ಯೆಯ ವಿಮಾನ ನಿಲ್ದಾಣದ ಸುತ್ತಮುತ್ತ ನಡೆಯುತ್ತಿರುವ ಭೂಸ್ವಾಧೀನದಿಂದ ಅಯೋಧ್ಯೆಯ ಹಲವು ಗ್ರಾಮಗಳ ಜನರು ಆಕ್ರೋಶಗೊಂಡಿದ್ದರು. ಇದರಿಂದಾಗಿ ಬಿಎಸ್‌ಪಿ ಹಾಗೂ ಬಿಜೆಪಿಯ ಮತಗಳು ಸಮಾಜವಾದಿ ಪಕ್ಷಕ್ಕೆ ತಿರುಗಿದೆ.
अयोध्या का रामपथ बनाने में 2200 दुकाने, 800 घर, 30 मन्दिर, 9 मस्जिद और 6 मजार तोड़े गए
Other Side of AYODHYA..
Must Watch for those Abusing HINDUS..
Jai Shri Ram 🙏🙏 pic.twitter.com/Xh3ASWhqBU— Aarti (@aartic02) June 5, 2024
“ರಾಮಮಂದಿರ ಮತ್ತು ರಾಮಪಥ (ಅಯೋಧ್ಯೆಗೆ ಹೋಗುವ ನಾಲ್ಕು ರಸ್ತೆಗಳಲ್ಲಿ ಒಂದು) ತನ್ನ ವೈಫಲ್ಯಗಳನ್ನು ಮರೆಮಾಚುವುದನ್ನು ಹೊರತುಪಡಿಸಿ ನಮ್ಮ ಸಂಸದರು ಇಲ್ಲಿ ಯಾವುದೇ ಕೆಲಸ ಮಾಡದ ಕಾರಣ ಜನರು ಇಲ್ಲಿ ಬದಲಾವಣೆಗೆ ಮತ ಹಾಕಿದ್ದಾರೆ” ಎನ್ನುತ್ತಿದ್ದಾರೆ ಇಲ್ಲಿನ ಯುವಕರು.
ಬಿಜೆಪಿಯ ಸೋಲಿನ ಬಗ್ಗೆ ಮಾತನಾಡಿರುವ ಅಯೋಧ್ಯೆಯ ಬಿಜೆಪಿ ಕಾರ್ಯಕರ್ತ ಅರವಿಂದ್ ತಿವಾರಿ, “ರಾಮ ಮಂದಿರದ ವೈಭವವು ಹೊರಗಿನವರನ್ನು ಮೆಚ್ಚಿರಬಹುದು. ಆದರೆ ನಗರದ ನಿವಾಸಿಗಳು ಅನಾನುಕೂಲತೆ ಅನುಭವಿಸಿದ್ದಾರೆ. ಇದರಿಂದ ಅತೃಪ್ತರಾಗಿದ್ದಾರೆ. ವಾಸ್ತವ ಏನೆಂದರೆ, ಅಯೋಧ್ಯೆಯ ನಿವಾಸಿಗಳು ರಾಮಮಂದಿರಕ್ಕೆ ಹೋಗುವುದು ಬಹಳ ಕಡಿಮೆ. ಇಲ್ಲಿ ಬರುವ ಹೆಚ್ಚಿನ ಭಕ್ತರು ಹೊರಗಿನವರು. ರಾಮ ನಮ್ಮ ಆರಾಧ್ಯ ದೈವ. ನಾವು ರಾಮನನ್ನು ಆರಾಧಿಸುತ್ತೇವೆ. ಆದರೆ ನೀವು ನಮ್ಮ ಜೀವನೋಪಾಯವನ್ನು ಕಸಿದುಕೊಂಡರೆ ನಾವು ಹೇಗೆ ಬದುಕುತ್ತೇವೆ? ರಾಮಪಥ ನಿರ್ಮಾಣದ ವೇಳೆ ಸ್ಥಳೀಯರಿಗೆ ಮಳಿಗೆಗಳನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆಗಲಿಲ್ಲ. ಇದರಿಂದಾಗಿ ನಮ್ಮ ಪಕ್ಷದ ಮುಖಂಡರ ವಿರುದ್ಧದ ಆಕ್ರೋಶವನ್ನು ಬಿಜೆಪಿಗೆ ವಿರುದ್ಧವಾಗಿ ಮತ ಹಾಕುವ ಮೂಲಕ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಪಕ್ಷದ ಮುಖಂಡರು ಎಲ್ಲಿ ಎಡವಿದ್ದೇವೆ ಎಂಬುದನ್ನು ಯೋಚಿಸಲಿ” ಎಂದಿದ್ದಾರೆ.
“how can they lose in Ayodhya?” pic.twitter.com/xOxkIPz5fo
— lead singer (@neofairyfam) June 4, 2024
ಅಯೋಧ್ಯೆಯ ತನ್ನ ಯೋಜನೆಗಳ ಕುರಿತು ಮಾತನಾಡಿರುವ ವಿಜೇತ ಅಭ್ಯರ್ಥಿ, ಒಂಬತ್ತು ಬಾರಿ ಶಾಸಕರಾಗಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್, “ಬಿಜೆಪಿ ಸರ್ಕಾರವು ದೇವಾಲಯಕ್ಕೆ ಹೋಗುವ ರಸ್ತೆಗಳನ್ನು ಅಗಲಗೊಳಿಸುವ ಕೆಲಸದ ಸಮಯದಲ್ಲಿ ಬಹಳಷ್ಟು ಜನರ ಮನೆಯನ್ನು ಬುಲ್ಢೋಝರ್ ಮೂಲಕ ಕಿತ್ತುಹಾಕಿದೆ. ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಬಿಜೆಪಿ ಮಾಡಿಲ್ಲ. ಅದನ್ನು ನಾನು ಮಾಡುತ್ತೇನೆ. ಯಾರಿಂದ ಸ್ಥಳ ಕಿತ್ತುಕೊಳ್ಳಲಾಗಿದೆಯೋ ಅವರಿಗೆ ಸೂಕ್ತ ಪರಿಹಾರ ನೀಡುವ ಕೆಲಸ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
1980ರ ದಶಕದಿಂದ ಇಲ್ಲಿಯವರೆಗೆ ರಾಮಮಂದಿರದ ಪ್ರಸ್ತಾಪವನ್ನೇ ಮಾಡಿಕೊಂಡು ಒಂದು ರೀತಿಯ ಜನಾಂದೋಲನವನ್ನು ರೂಪಿಸಿ ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿತ್ತು. ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು, ಪ್ರಧಾನಿ ಹುದ್ದೆ ಅಲಂಕರಿಸಲು ಅದೂ ಕೂಡ ಒಂದು ಕಾರಣವಾಗಿತ್ತು. 2024ರಲ್ಲಿ ಅದೇ ರಾಮಮಂದಿರದ ಕ್ಷೇತ್ರದಲ್ಲಿ ಬಿಜೆಪಿ ತನಗೆ ಇಂಥದ್ದೊಂದು ಹಿನ್ನಡೆಯಾಗುತ್ತದೆ ಎಂದು ಯಾವತ್ತಿಗೂ ಕನಸು ಮನಸಲ್ಲಿ ಅಂದುಕೊಂಡಿರಲಿಲ್ಲ ಎಂಬುದು ಮಾತ್ರ ಸತ್ಯ.





