“ಮೀಸಲಾತಿ ಪರವಾಗಿರುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ . ಬಿಜೆಪಿಯವರು ಎಲ್ಲ ಕಾಲದಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿಯ ವಿರೋಧವಾಗಿ ಕೆಲಸ ಮಾಡಿದ್ದಾರೆ” ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಯಾದಗಿರಿಯಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ ನಾಯ್ಕ ಅವರ ಪರವಾಗಿ ಮತದಾರರಲ್ಲಿ ಮತ ಯಾಚಿಸಿ ಮಾತನಾಡಿದರು.
“ಗ್ರಾಮಪಂಚಾಯತಿ, ನಗರಸಭೆ ಸೇರಿದಂತೆ ವಿವಿಧ ಸ್ತರಗಳಲ್ಲಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡುವುದನ್ನು ಬಿಜೆಪಿಯವರು ವಿರೋಧಿಸಿದ್ದರು. ಬಿಜೆಪಿಯ ರಾಮ ಜೋಯಿಸ್ ಅವರು ಈ ಮೀಸಲಾತಿ ನೀಡಿಕೆಯನ್ನು ಸಂವಿಧಾನ ಬಾಹಿರ ಎಂದು ನ್ಯಾಯಾಲಯದಲ್ಲೇ ವಾದಿಸಿದ್ದರು. ಮುಸಲ್ಮಾನರಿಗೆ ಮೀಸಲಾತಿಯನ್ನು ಕಳೆದ 30 ವರ್ಷಗಳಿಂದ ನೀಡಲಾಗುತ್ತಿದೆ. ದಲಿತರಿಗೆ, ಹಿಂದುಳಿದವರಿಗೆ ನೀಡಲಾದ ಮೀಸಲಾತಿಯನ್ನು ರದ್ದುಪಡಿಸಿ ಮುಸಲ್ಮಾನರಿಗೆ ಕಾಂಗ್ರೆಸ್ ನೀಡಲಿದೆ ಎಂದು ಮೋದಿ ನಿರಂತರವಾಗಿ ಸುಳ್ಳು ಹೇಳುತ್ತಾ ಓಡಾಡುತ್ತಿದ್ದಾರೆ. ಈ ಸುಳ್ಳನ್ನು ಯಾರೂ ನಂಬಬಾರದು” ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
“ಕಳೆದ ಬಾರಿ ರಾಜ್ಯದಿಂದ ಆಯ್ಕೆಯಾದ 25 ಮಂದಿ ಬಿಜೆಪಿ ಸಂಸದರು ರಾಜ್ಯಕ್ಕಾದ ಅನ್ಯಾಯದ ವಿರುದ್ದ ಒಮ್ಮೆಯೂ ಧ್ವನಿ ಎತ್ತಲಿಲ್ಲ. ಇವರಿಗೆ ಈ ಬಾರಿ ತಕ್ಕ ಪಾಠ ಕಲಿಸಿ” ಎಂದು ಕರೆ ನೀಡಿದರು.
ಮೀಸಲಾತಿ ಪರವಾಗಿರುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ. ಬಿಜೆಪಿಯವರು ಎಲ್ಲ ಕಾಲದಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿಯ ವಿರೋಧವಾಗಿ ಕೆಲಸ ಮಾಡಿದ್ದಾರೆ. ಗ್ರಾಮ ಪಂಚಾಯತಿ, ನಗರಸಭೆ ಸೇರಿದಂತೆ ವಿವಿಧ ಸ್ತರಗಳಲ್ಲಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡುವುದನ್ನು @BJP4India ಅವರು ವಿರೋಧಿಸಿದ್ದರು. ಬಿಜೆಪಿಯ ರಾಮ ಜೋಯಿಸ್ ಅವರು… pic.twitter.com/JgsKQDFqhv
— Siddaramaiah (@siddaramaiah) May 1, 2024
“ನರೇಂದ್ರ ಮೋದಿಯವರ ಬಳಿ ಹಣ ಜಾಸ್ತಿ ಇದ್ದರೆ, ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಏಕೆ ತುಂಬಿಲ್ಲ” ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ತುಂಬಿದ್ದರೆ ಸುಮಾರು 50% ಹಿಂದುಳಿದವರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಕೆಲಸ ದೊರಕುತ್ತಿತ್ತು. ಇನ್ನುಳಿದ 50% ಇತರರಿಗೆ ದೊರಕುತ್ತಿತ್ತು. ಈ ಖಾಲಿ ಹುದ್ದೆಗಳನ್ನು ಏಕೆ ತುಂಬಿಲ್ಲ? ಎಂದು ಕೇಳಿದರು.
“ನರೇಂದ್ರ ಮೋದಿಯವರಿಗೆ ದೇಶದಲ್ಲಿ ನಡೆದಿರುವ 2 ಹಂತದ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ. ಎ ಗೆ ಕಡಿಮೆ ಸ್ಥಾನಗಳು ಬರಲಿದೆ ಎನ್ನುವುದು ನರೇಂದ್ರ ಮೋದಿಯವರಿಗೆ ಸ್ಪಷ್ಟವಾಗಿ ಗೊತ್ತಾಗಿ ಹತಾಶರಾಗಿದ್ದಾರೆ. ಅದಕ್ಕೇ ಕರ್ನಾಟಕಕ್ಕೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾ, ಕೇವಲ ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ. ಕರ್ನಾಟಕದ ಖಜಾನೆ ಖಾಲಿಯಾಗಿದ್ದು ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ ಎಂಬ ಹಸಿ ಹಸಿ ಸುಳ್ಳು ಹೇಳಿದ್ದಾರೆ” ಎಂದರು.
ಮೋದಿ ಆಡಳಿತದ ಹತ್ತು ವರ್ಷಗಳಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಜಾತಿ , ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆದಿದೆ. ಭಾರತೀಯರನ್ನು ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರ ಹೆಸರಿನಲ್ಲಿ ವಿಭಜಿಸಿ ಬೆಂಕಿ ಹಚ್ಚುವ ಬಿಜೆಪಿ ಕೃತ್ಯದ ವಿರುದ್ಧ, ಸಮಾಜವನ್ನು ಮಾನವೀಯವಾಗಿ ಬೆಸೆಯುವ ಕೆಲಸಕ್ಕೆ ರಾಹುಲ್ ಗಾಂಧಿ ಮುಂದಾದರು. ದೇಶದ ಐಕ್ಯತೆ ಮರು ಸ್ಥಾಪಿಸಲು, ಸಾರ್ವಭೌತ್ವವನ್ನು ಕಾಪಾಡಲು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಮಣಿಪುರದಿಂದ ಮುಂಬೈವರೆಗೆ ಪಾದಯಾತ್ರೆ ಮಾಡಿದರು. ಸಮಾಜ ಬೆಸೆಯುವ ಕೆಲಸ ಮಾಡಿದರು. ಭಾರತ್ ಜೋಡೋ ಹೆಸರಿನಲ್ಲಿ ದೇಶದ ಜನರನ್ನು ಪ್ರೀತಿ ವಿಶ್ವಾಸದಿಂದ ಒಗ್ಗೂಡಿಸುವ ಪ್ರಯತ್ನ ಮಾಡಿದರು ಎಂದು ಶ್ಲಾಘಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಶಾಸಕ ಚನ್ನಾರೆಡ್ಡಿ, ಸ್ಥಳೀಯ ಕಾಂಗ್ರೆಸ್ ಮುಖಂಡರು, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.





