ಸೆಪ್ಟೆಂಬರ್ ಮತ್ತು ಅಕ್ಟೋಬರ್ 2025ರಲ್ಲಿ ಸರ್ಕಾರ ಸಮೀಕ್ಷೆ ನಡೆಸಲು ತಯಾರಿ ನಡೆಸಿದೆ. ಆ ನಿಟ್ಟಿನಲ್ಲಿ ಮುಸ್ಲಿಮರಲ್ಲಿರುವ ಜಾತಿಗಳು ಮತ್ತು ವೃತ್ತಿಗಳ ಕುರಿತಂತೆ ಸರಳವಾಗಿ ಮಾಹಿತಿ ಕೊಡುವ ಪ್ರಯತ್ನ ಇಲ್ಲಿದೆ…
ಮುಸ್ಲಿಂ ಸಮುದಾಯದಲ್ಲಿರುವ ಜಾತಿ-ಉಪಜಾತಿ ವೃತ್ತಿ ಗುಂಪುಗಳ ಚರ್ಚೆಗಳು ಇಂದು ನಿನ್ನೆಯ ಘಟನಾವಳಿಗಳಲ್ಲ. ಸ್ವಾತಂತ್ರ್ಯ ಪೂರ್ವದಿಂದ ಮೊದಲುಗೊಂಡು ಈಗಲೂ ಚಾಲ್ತಿಯಲ್ಲಿರುವ ವಿಷಯಗಳೇ ಆಗಿವೆ. ಕಾಕಾ ಕಾಲೇಲ್ಕರ್ ಆಯೋಗ, ಮಂಡಲ್ ಆಯೋಗ, ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ವರದಿ, ದಿವಂಗತ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿಯ ವರದಿ, ನಮ್ಮ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವರದಿಗಳು, ಸ್ವಾತಂತ್ರ್ಯ ಪೂರ್ವದ ಜನಗಣತಿ ವರದಿಗಳು, ಮಾನವ ಶಾಸ್ತ್ರೀಯ ಅಥವಾ ಕುಲಶಾಸ್ತ್ರೀಯ ಅಧ್ಯಯನಗಳು, ಕೆ.ಎಸ್. ಸಿಂಗ್‌ರವರ ಮಹತ್ವಪೂರ್ಣ ಬರವಣಿಗೆಗಳು, ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿಯ ಪಟ್ಟಿಗಳು, ಮುಸ್ಲಿಮರಲ್ಲಿರುವ ಜಾತಿ/ಉಪಜಾತಿಗಳ ಬಗ್ಗೆ ಬೆಳಕು ಚೆಲ್ಲಿವೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರವಣಿಗೆಗಳು, ಉತ್ತರ ಭಾರತದ ಅಲಿ ಅನ್ವರ್‌ರವರ ಪಾಸಮಂದಾ ಮುಸ್ಲಿಮರ ಕುರಿತ ಬರಹಗಳು, ಕಾರ್ಯಚಟುವಟಿಕೆಗಳು, ರಾಷ್ಟ್ರೀಯ ವಿಮುಕ್ತ ಜಾತಿ ಮತ್ತು ಬುಡಕಟ್ಟುಗಳ ಆಯೋಗದ ವರದಿಗಳು ಇವೆಲ್ಲವೂ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ವಿವಿಧ ಆಯಾಮಗಳಲ್ಲಿ ಮುಸ್ಲಿಮರಲ್ಲಿರುವ ವಿವಿಧ ಜಾತಿಗಳನ್ನು ದಾಖಲಿಸಿವೆ.
ಜಾತಿ-ಉಪಜಾತಿಗಳ ಸಮೀಕ್ಷೆ ಯಾಕೆ ಬೇಕಾಗಿದೆ?
ಕಾಂತರಾಜ ಅವರ ನೇತೃತ್ವದಲ್ಲಿ ನಡೆದ ಜಾತಿ ಸಮೀಕ್ಷೆಯ ಪ್ರಕ್ರಿಯೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಲು ಆಗಲಿಲ್ಲ. ಮಧುಸೂದನ್ ಆರ್.ನಾಯ್ಕ್ ಅವರ ನೇತೃತ್ವದಲ್ಲಿ ಈಗ ಆರಂಭವಾಗಿರುವ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಹಿಂದೆಂದಿಗಿಂತಲೂ ಉತ್ತಮವಾಗಿ ಮತ್ತು ಕ್ರಿಯಾಶೀಲವಾಗಿ ಮುಸ್ಲಿಮರ ವಿವಿಧ ಸಂಘಟನೆಗಳು ಸ್ಪಂದಿಸುತ್ತಿವೆ. ಮುಸ್ಲಿಮರಲ್ಲಿರುವ ಧಾರ್ಮಿಕ ಗುಂಪುಗಳು, ಜಾತಿ, ಪಂಗಡ ಮತ್ತು ವಿವಿಧ ಸಮುದಾಯಗಳ ಸಾಂಪ್ರದಾಯಿಕ ಕಸುಬು/ವೃತ್ತಿಗಳ ಕುರಿತಂತೆ ಗೊತ್ತಿಲ್ಲದೇ, ಸಾಮಾಜಿಕ ಸಂರಚನೆಗಳ ಪರಿಚಯವಿಲ್ಲದೇ ಇರುವ ಕೆಲವರು ‘ಅದೇ ರಾಗ-ಅದೇ ಹಾಡು’ ಎಂಬಂತೆ ಇಲ್ಲಸಲ್ಲದ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಹಾಗಾಗಿ ಪ್ರಸ್ತುತ ಲೇಖನದಲ್ಲಿ ಮುಸ್ಲಿಮರಲ್ಲಿರುವ ಜಾತಿಗಳು ಮತ್ತು ವೃತ್ತಿಗಳ ಕುರಿತಂತೆ ಸರಳವಾಗಿ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಿದ್ದೇನೆ.

ನಮ್ಮ ದೇಶದ ಸಂವಿಧಾನದ ಮೂಲ ಆಶಯ ಮತ್ತು ಧ್ಯೇಯೋದ್ದೇಶವೇ ಸರ್ವರಿಗೂ ಸಮಪಾಲು ಸಮಬಾಳು. ಇದನ್ನು ಅನುಷ್ಠಾನ ಮಾಡುವ ಹೊಣೆಗಾರಿಕೆ ಅಥವಾ ಉತ್ತರದಾಯಿತ್ವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳದ್ದು. ಈ ನೀತಿ ಜಾರಿಯಾಗಬೇಕಾದರೆ, ಸರ್ಕಾರಗಳಿಗೆ ಜನ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿವಿಕೆ ಮತ್ತು ಅದಕ್ಕೆ ಪರಿಹಾರ ಹುಡುಕಲು ಸ್ಪಷ್ಟವಾದ, ನಿಖರವಾದ ಮತ್ತು ನಿರ್ದಿಷ್ಟವಾದ ಅಂಕಿ-ಸಂಖ್ಯೆಗಳು ಬೇಕು. ಮೀಸಲಾತಿ, ಶಿಕ್ಷಣದಲ್ಲಿ ಆದ್ಯತೆ, ಉದ್ಯೋಗ ಮುಂತಾದ ನೀತಿ ಮತ್ತು ಯೋಜನೆಗಳಿಗೆ ಪ್ರಮುಖ ಸಾಕ್ಷ್ಯಾಧಾರವೇ ಅಂಕಿ ಸಂಖ್ಯೆಗಳು. ಇದೆಲ್ಲಕ್ಕಿಂತ ಹೆಚ್ಚಾಗಿ ಆಯಾ ಸಮುದಾಯಗಳಿಗೆ ತಮ್ಮ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಈ ವಿವರಗಳ ಅಗತ್ಯವಿದೆ ಮತ್ತು ಹೆಚ್ಚಿನ ಸೌಲಭ್ಯಗಳನ್ನು ಪಡೆಯಲು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ನೆರವಾಗುತ್ತವೆ.
ನಮ್ಮ ರಾಜ್ಯವೂ ಸೇರಿದಂತೆ ದೇಶಾದ್ಯಂತ ಪ್ರಬಲ ಮತ್ತು ಬಲಿಷ್ಠ ಸಮುದಾಯಗಳು ಹಾಗೂ ಜಾತಿಗಳು ಮತ್ತಷ್ಟು ಮೀಸಲಾತಿ ಹಾಗೂ ಯೋಜನೆಗಳು ಬೇಕೆಂದು ಹಠ ಹಿಡಿದು ಕೂತಿವೆ. ಹಾಗಿದ್ದರೆ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ವಿವಿಧ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಬರುವ ಹಿಂದುಳಿದ, ಅತ್ಯಂತ ಹಿಂದುಳಿದ, ಅಲೆಮಾರಿ ಮತ್ತು ಅರೆ ಅಲೆಮಾರಿಗಳ ಜಾತಿಗಳಿಗೆ ಸೇರಿದ ಮುಸ್ಲಿಂ ಜಾತಿ/ಸಮುದಾಯಗಳ ಪಾಡೇನು? ಇದಕ್ಕೆ ಪರಿಹಾರವೇನು? ರಾಜ್ಯ ಸರ್ಕಾರ ಈಗ ನಡೆಸಲು ಹೊರಟಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯ ಆಧಾರದ ಮೇಲೆ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಉತ್ತರಗಳು ಸಿಗಬಹುದು.

ನಮ್ಮ ರಾಜ್ಯದಲ್ಲಿರುವ ಎಲ್ಲಾ ಜಾತಿಗಳ-ಹಿಂದುಳಿದ ವರ್ಗಗಳು, ಇತರೆ ಜಾತಿಗಳು, ಅನುಸೂಚಿತ ಜಾತಿ/ಪಂಗಡಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2025ರಲ್ಲಿ ನಡೆಸಲು ಉದ್ದೇಶಿಸಿರುವ ಸಮೀಕ್ಷೆಯಲ್ಲಿ ಮುಸ್ಲಿಮರಲ್ಲಿನ 81 ಜಾತಿ/ಉಪಜಾತಿ ಸಮುದಾಯಗಳ ಪಟ್ಟಿಮಾಡಲಾಗಿದೆ. ಈ ಹಿಂದೆ ಜಯಪ್ರಕಾಶ್ ಹೆಗ್ಡೆಯವರು ಸಲ್ಲಿಸಿದ ವರದಿಯಲ್ಲಿ ಸುಮಾರು 99 ಜಾತಿ/ ಉಪಜಾತಿಗಳು ಮುಸ್ಲಿಮರಲ್ಲಿವೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದರಲ್ಲಿ ಸುಮಾರು 56 ಜಾತಿ ಸಮುದಾಯಗಳ ಜನಸಂಖ್ಯೆಯ ವಿವರಗಳನ್ನು ಕೆಲವು ಪತ್ರಿಕೆಗಳು ಪ್ರಕಟಿಸಿದ್ದವು. ಈ ಹಿನ್ನೆಲೆಯಲ್ಲಿ ಮುಸ್ಲಿಮರಲ್ಲಿರುವ ಜಾತಿ/ಉಪಜಾತಿ ಸಮುದಾಯಗಳ ಕುರಿತ ಗೊಂದಲಗಳ ಬಗ್ಗೆ ಚರ್ಚಿಸುವುದಕ್ಕಿಂತ ಮುಂಚಿತವಾಗಿ ಮುಸ್ಲಿಮರಲ್ಲಿರುವ ಸಾಮಾಜಿಕ ಸಂರಚನೆಗಳನ್ನು, ಸಾಂಪ್ರದಾಯಿಕ ಕಸುಬು/ವೃತ್ತಿಗಳನ್ನು ಸಾಮಾಜಿಕ ಸನ್ನಿವೇಶದಲ್ಲಿ ಮತ್ತು ದೃಷ್ಟಿಕೋನದಲ್ಲಿ ಸರಳವಾಗಿ ಅರ್ಥೈಸುವ ಅಗತ್ಯವಿದೆ.
ಮುಸ್ಲಿಮರ ಸಾಮಾಜಿಕ ಸಂರಚನೆ
ಭಾರತದ ಸಾಮಾಜಿಕ ಸಂದರ್ಭದಲ್ಲಿ ದಿವಂಗತ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಅವರು ಗಮನಿಸಿದಂತೆ; ಮುಸ್ಲಿಮರಲ್ಲಿರುವ ಸಾಮಾಜಿಕ ಸಂರಚನೆಯನ್ನು ಅಥವಾ ಸ್ವರೂಪವನ್ನು ಕುರಿತು ನಡೆದ ಸಾಮಾಜಿಕ ಅಧ್ಯಯನಗಳು ಮುಸ್ಲಿಮರಲ್ಲಿ ಅವರೋಹಣ ಆಧಾರಿತ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯೊಂದು ಇದ್ದು, ಹಿಂದೂ ಜಾತಿ ವ್ಯವಸ್ಥೆಯ ರೀತಿಯಲ್ಲಿಯೇ ಸಾಮಾಜಿಕ ಗುಂಪುಗಳಿವೆ. ಸ್ವಜಾತಿ ವಿವಾಹ, ವಂಶ ಪಾರಂಪರ್ಯ ವೃತ್ತಿಗಳು ಭಾರತದ ಮುಸ್ಲಿಮರಲ್ಲಿ ಕಂಡುಬರುತ್ತವೆ. 1901ರ ಭಾರತದ ಜನಗಣತಿಯಲ್ಲಿ 133 ಸಾಮಾಜಿಕ ಗುಂಪುಗಳು ಸಂಪೂರ್ಣವಾಗಿ ಅಥವಾ ಭಾಗಶಃ ಮುಸ್ಲಿಮರದ್ದಾಗಿವೆ. ಭಾರತದ ಮುಸ್ಲಿಮರನ್ನು ನಾಲ್ಕು ಪ್ರಧಾನ ಗುಂಪುಗಳನ್ನಾಗಿ ವಿಂಗಡಿಸಬಹುದಾಗಿದ್ದು:
- ಅಶ್ರಾಫ್-ಅರೇಬಿಯಾ, ಪರ್ಶಿಯ, ಟರ್ಕಿಸ್ಥಾನ ಅಥವಾ ಆಫ್ಘಾನಿಸ್ಥಾನಗಳೊಂದಿಗೆ ತಮ್ಮ ಮೂಲಗಳನ್ನು ಗುರುತಿಸಿಕೊಳ್ಳುವವರು.
- ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಮತಾಂತರವಾದ ಮೇಲ್ಜಾತಿ ಹಿಂದೂಗಳು.
- ರೂಢಿಗತವಾಗಿ ಉತ್ತಮ ವೃತ್ತಿಗಳೆಂದು ಪರಿಗಣಿಸಲಾದ ಮಧ್ಯಮ ಜಾತಿಗಳಿಂದ ಮತಾಂತರವಾದವರು.
- ಅಸ್ಪೃಶ್ಯ ಜಾತಿಗಳಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾದವರು
ಈ ಮೇಲ್ಕಂಡ ವಿಶ್ಲೇಷಣೆಯಲ್ಲಿ ಕಂಡು ಬಂದಂತೆ ಮುಸ್ಲಿಮರಲ್ಲಿಯೂ ಸಹ ಹಿಂದುಳಿದ ಮತ್ತು ದಲಿತ ಜಾತಿಗಳಿವೆಯೆಂದು ಹೇಳಬಹುದು. ಇನ್ನು ಪ್ರಸ್ತುತ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಮುಸ್ಲಿಂ ಸಮುದಾಯದ ವಿವಿಧ ಜಾತಿ ಸಮುದಾಯಗಳಿಗೆ ಗೊಂದಲಗಳಾಗುವ ಸಾಧ್ಯತೆ ಇದ್ದು, ಬಹುಮುಖ್ಯ ಕಾರಣ, ಮಾಹಿತಿಗಳ ಕೊರತೆ. ನಮ್ಮ ದೇಶದ ಮತ್ತು ರಾಜ್ಯದ ವಿವಿಧ ಜಾತಿಗಳಿಗೆ ಸಂಬಂಧಿಸಿದಂತೆ ಗಂಭೀರವಾದ ಮಾನವ ಶಾಸ್ತ್ರೀಯ ಅಧ್ಯಯನಗಳಾಗಿವೆ. ಆದರೆ ಇದೇ ರೀತಿಯ ಅಧ್ಯಯನಗಳು ಮುಸ್ಲಿಮರಲ್ಲಿರುವ ಜಾತಿಗಳ ಬಗ್ಗೆ ಆಗಿಲ್ಲ.
ಇದನ್ನು ಓದಿದ್ದೀರಾ?: ಬಿಹಾರ | ‘ಮತ ಕಳ್ಳತನ’ವನ್ನು ಸೋಲಿಸಿ ಗೆಲ್ಲುವುದೇ ‘ಇಂಡಿಯಾ’?
ಸ್ವಾತಂತ್ರ ಪೂರ್ವದಲ್ಲಿ ಜೇಮ್ಸ್ ಕ್ಯಾಂಪ್ಬೆಲ್, ಎಡ್ಗರ್ ಥರ್ಸ್ಟನ್, ರೈಸ್ ಮುಂತಾದ ಕುಲಶಾಸ್ತ್ರೀಯ ಅಧ್ಯಯನಕಾರರು ಜನಾಂಗೀಯ ಮತ್ತು ಹಿಂದೂ ಜಾತಿ-ಲಕ್ಷಣಗಳ ದುರ್ಬೀನಿನಲ್ಲಿಟ್ಟು ಮುಸ್ಲಿಮರಲ್ಲಿರುವ ಜಾತಿಗಳನ್ನು ಗುರುತಿಸಿರುವ ಅಧ್ಯಯನಗಳಾಗಿವೆ. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಕೆ.ಎಸ್.ಸಿಂಗ್‌ರವರು ಸಮಗ್ರ ಸ್ವರೂಪದಲ್ಲಿ ಅಂದರೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳಲ್ಲಿ ಅಧ್ಯಯನ ಮಾಡಿದ್ದಾರೆ.
ಆಯೋಗಗಳು ಮತ್ತು ಸಮೀಕ್ಷೆ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಲಕಾಲಕ್ಕೆ ಮಾಡಿದ ಅಧ್ಯಯನಗಳಲ್ಲಿ ಮುಸ್ಲಿಮರನ್ನು ಬೇರೆ ಬೇರೆ ಜಾತಿ-ಉಪಜಾತಿ ಹೆಸರುಗಳಿಂದ ಕರೆಯುವುದರಿಂದ ಹಿಡಿದು ಅದರಲ್ಲಿರುವ ವಿವಿಧ ಸಾಂಪ್ರದಾಯಿಕ ಕಸುಬು-ವೃತ್ತಿ ಪಂಗಡಗಳನ್ನು ಸಹ ಗುರುತಿಸಿದೆ.
ಸಾಮಾಜಿಕವಾಗಿ ಹಿಂದುಳಿದಿರುವ, ಅಲೆಮಾರಿ ಮತ್ತು ಅರೆಅಲೆಮಾರಿ ಪಂಗಡಗಳಿಗೆ ಬೇರೆ ಬೇರೆ ಪ್ರವರ್ಗಗಳಲ್ಲಿ ಮೀಸಲಾತಿಯನ್ನು ಸಹ ನೀಡಲಾಗಿದೆ. ಮೊದಲನೆಯ ಹಿಂದುಳಿದ ವರ್ಗಗಳ ಆಯೋಗ ಸುಮಾರು 8, ಎರಡನೆಯ ಹಿಂದುಳಿದ ವರ್ಗಗಳ ಆಯೋಗ ಸುಮಾರು 25 ಹಾಗೂ ಕಾಂತರಾಜ ಅವರ ವರದಿಯಲ್ಲಿ 80 ವಿವಿಧ ಜಾತಿ ಮತ್ತು ಗುಂಪುಗಳನ್ನು ಗುರುತಿಸಿದೆ.

ಮಧುಸೂದನ್ ಆರ್. ನಾಯ್ಕ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಸ್ತುತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮುಸ್ಲಿಂ ಜಾತಿ/ಉಪಜಾತಿ, ಪಂಗಡ ಮತ್ತು ಗುಂಪುಗಳಿಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಕ್ರೋಡೀಕರಿಸಿ ಇಲ್ಲಿ ಕೊಡಲಾಗಿದೆ. ಕಾರಣ ಮುಸ್ಲಿಮರು ಅನುಸರಿಸುವ ವಿವಿಧ ವೃತ್ತಿ ಮತ್ತು ಸಾಮಾಜಿಕ ಸಂರಚನೆಗಳಾದ ಜಾತಿ ಉಪಜಾತಿಗಳಿಗೆ ನೇರಾನೇರ ನಂಟಿದೆ. ಹಾಗೆಯೇ ಜಾತಿ ಇದೆ ಎನ್ನುವ ಸಾಕ್ಷ್ಯಾಧಾರಗಳು ಹೆಸರುಗಳೊಂದಿಗೆ ಕಾಣಸಿಗುತ್ತವೆ.
ಸೇಠ್, ಪಟೇಲ್, ಚೌಧರಿ, ವಾಲಿಕಾರ್, ನದಾಫ್, ಬಿರಾದಾರ್, ನಾಡಗೌಡ, ಬಳೆಗಾರ್, ಅನ್ಸಾರಿ, ರಾವುತರ್ ಮುಂತಾದ ಜಾತಿಗಳ ಹೆಸರುಗಳಿರುವ ಮುಸ್ಲಿಮರು ಕರ್ನಾಟಕದಲ್ಲಿದ್ದಾರೆ. ಮತ್ತೊಂದು ಪ್ರಮುಖ ಅಂಶವೆಂದರೆ: ಇಸ್ಲಾಂ ಧರ್ಮಕ್ಕೆ ಮತಾಂತರವಾದ ಇಲ್ಲಿನ ವಿವಿಧ ಜಾತಿಗಳು, ಧಾರ್ಮಿಕ ಮತಾಂತರ ಆಗಿದ್ದಾರೆಯೇ ಹೊರತು ತಮ್ಮ ಹಳೆಯ ಚಹರೆಯಾದ ಜಾತಿಗಳನ್ನು ಮತ್ತು ಅವುಗಳ ಕೆಲವು ಲಕ್ಷಣಗಳನ್ನು ಜೊತೆ ಜೊತೆಯಲ್ಲಿಯೇ ತಾವು ಮತಾಂತರವಾದ ಧರ್ಮಗಳಿಗೂ ಹೊತ್ತು ಸಾಗಿದ್ದಾರೆ. ಇದಕ್ಕೆ ಹೆಸರುಗಳೊಂದಿಗೆ ಕಾಣುವ ಜಾತಿ ಹೆಸರುಗಳೇ ಸಾಕ್ಷಿ.
ಪ್ರಸ್ತುತ ಸಮೀಕ್ಷೆಯಲ್ಲಿ ಸುಮಾರು 81 ಜಾತಿ/ಉಪಜಾತಿ ಸಮುದಾಯಗಳ ಹೆಸರುಗಳನ್ನು ಅವಲೋಕಿಸಿದಾಗ ಕಂಡುಬರುವ ವಿಶೇಷ ಲಕ್ಷಣಗಳನ್ನು ಗಮನಿಸಬೇಕಾಗಿದೆ. ಈ ಪಟ್ಟಿಗೂ ಮೀರಿ ಕೆಲವು ಸಮುದಾಯಗಳ ವಿವರಗಳನ್ನು ಕಲೆಹಾಕಿ ಈಗಾಗಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿಗಳನ್ನು ಸಲ್ಲಿಸಲಾಗಿದೆ. ನಮ್ಮ ದೇಶದ ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆಯಲ್ಲಿ ವೃತ್ತಿಗೂ ಜಾತಿಗೂ ನಂಟಿದ್ದು, ಮುಸ್ಲಿಮರಲ್ಲಿರುವ ಸಾಂಪ್ರದಾಯಿಕ ಕಸಬು/ವೃತ್ತಿ ಮಾಡುವವರಿಗೂ ಅನ್ವಯಿಸುತ್ತದೆ. ವೃತ್ತಿಗಳು ಕಾಲದಿಂದ ಕಾಲಕ್ಕೆ ತ್ವರಿತಗತಿಯಲ್ಲಿ ಬದಲಾಗಿವೆ. ಇಲ್ಲಿ ಕೊಟ್ಟಿರುವ ವೃತ್ತಿಗಳಿಗೂ ಈಗ ಅನುಸರಿಸುತ್ತಿರುವ ವೃತ್ತಿಗಳಿಗೂ ಅಜಗಜಾಂತರ ವ್ಯತ್ಯಾಸಗಳಾಗಿವೆ. ಹಿಂದಿನ ತಲೆಮಾರಿನ ಹಿರಿಯರನ್ನು ಕೇಳಿ ಆಯಾ ಜಾತಿಯ ವೃತ್ತಿಗಳನ್ನು ಅರ್ಥಮಾಡಿಕೊಳ್ಳುವ ಅಥವಾ ತಮ್ಮ ಮತ್ತು ಇತರ ಸಮುದಾಯದ ಹಿರಿಯರನ್ನು ಕೇಳುವ ತುರ್ತು ಈಗ ಎದುರಾಗಿದೆ. ಕಳೆದು ಹೋಗಿರುವ ನಮ್ಮ ಐಡೆಂಟಿಟಿಗಳನ್ನು, ಜಾತಿಗಳನ್ನು ಮರು ನಿರೂಪಿಸುವ ಸವಾಲನ್ನು ಪ್ರಸ್ತುತ ಸಮೀಕ್ಷೆ ನಮ್ಮೆಲ್ಲರ ಮುಂದಿಟ್ಟಿದೆ.
ಇದನ್ನು ಓದಿದ್ದೀರಾ?: ಧರ್ಮಸ್ಥಳಕ್ಕೆ ಈ ಪರಿಯ ದೌಡು ಏಕೆ?
ಆಯೋಗ ಪಟ್ಟಿ ಮಾಡಿರುವ ವಿಭಾಗೀಕರಣ
ಮುಸ್ಲಿಮರಲ್ಲಿ ಬಹಳಷ್ಟು ವಿಶೇಷವಾದ ಮತ್ತು ವಿಶಿಷ್ಟವಾದ ವೃತ್ತಿ ಗುಂಪುಗಳಿದ್ದು ಅವುಗಳನ್ನು ವಿವಿಧ ರೀತಿಯಲ್ಲಿ ಅರ್ಥೈಸಬಹುದು. ಧಾರ್ಮಿಕ ಗುಂಪುಗಳು, ಧಾರ್ಮಿಕ ವೃತ್ತಿ ಅಥವಾ ಕ್ರಿಯಾ ವಿಧಿಗಳನ್ನು ನಡೆಸುವವರು, ಕುಶಲಕರ್ಮಿ ವೃತ್ತಿ ಮತ್ತು ಜಾತಿಗಳು. ನೇಕಾರಿಕೆ ಮತ್ತು ಜವಳಿ, ವ್ಯಾಪಾರ ಮತ್ತು ಸೇವೆಗಳು, ತೋಟಗಾರಿಕೆ ಮತ್ತು ಪುಷ್ಪೋದ್ಯಮದಲ್ಲಿ ತೊಡಗಿರುವ ಸಮುದಾಯಗಳು, ಅಲೆಮಾರಿ ಮತ್ತು ಅರೆ ಅಲೆಮಾರಿ, ಬುಡಕಟ್ಟು ಹಾಗೂ ಪಶುಪಾಲಕ ಸಮುದಾಯಗಳು ಇವುಗಳನ್ನು ಬಹಳ ವಿಶಾಲಾರ್ಥದಲ್ಲಿ ಅವಲೋಕಿಸಲಾಗಿದೆ. ಇವೆಲ್ಲವುಗಳನ್ನು ಅರ್ಥೈಸಿಕೊಳ್ಳಲು ಕುಲಶಾಸ್ತ್ರೀಯ ಹಿನ್ನೆಲೆಯ ತಜ್ಞರ ಮತ್ತು ಸಮಾಜ ಶಾಸ್ತ್ರಜ್ಞರ ಹಲವಾರು ಲೇಖನಗಳನ್ನು ಪರಾಮರ್ಶಿಸಿದ್ದೇನೆ. ಹಾಗೆಯೇ, ಮುಸ್ಲಿಮರ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳನ್ನು ಸರಿಯಾಗಿ ಗ್ರಹಿಸಿರುವ ಕಾರ್ಯಕರ್ತರ ಸಹಕಾರವನ್ನೂ ಪಡೆದಿದ್ದೇನೆ.
ಧಾರ್ಮಿಕ ಗುಂಪುಗಳು ಮತ್ತು ಒಳಪಂಗಡಗಳು
ಮೆಹದವಿಯ ಸಮುದಾಯ ಸುನ್ನಿ ಮುಸ್ಲಿಮರಾಗಿದ್ದು, ಕೆಲವು ಕ್ರಿಯಾ ವಿಧಿಗಳಲ್ಲಿ ವ್ಯತ್ಯಾಸಗಳಿವೆ ಅಷ್ಟೇ. ಇನ್ನು ಸಲಫಿಗಳು. ಸಲಫಿಗಳು ಎಂದರೆ ಅದು ಜಾತಿಯಲ್ಲ, ಸುನ್ನಿ ಮುಸ್ಲಿಮರಲ್ಲಿರುವ ಸುಧಾರಣಾವಾದಿ ಗುಂಪು. ಪ್ರಸ್ತುತ ಪಟ್ಟಿಯಲ್ಲಿ ಸುನ್ನಿ ಮತ್ತು ಶಿಯಾ ಮುಂತಾದ ಪಂಥಗಳನ್ನು ಒಳಗೊಂಡಂತೆ ಶೇಖ್, ಸೈಯದ್, ಮೊಘಲ್ ಮತ್ತು ಪಠಾಣ್ ಎಂಬ ಉಪ ಪಂಗಡ ಅಥವಾ ಒಳ ಪಂಗಡಗಳನ್ನು ಸೇರಿಸಲಾಗಿದೆ. ಇವುಗಳು ಆಚರಿಸುವ ಧಾರ್ಮಿಕ ಮತ್ತು ಸಾಮಾಜಿಕ ಕ್ರಿಯಾವಿಧಿಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳು ಕಂಡು ಬರಬಹುದು. ಆದರೆ ಇಸ್ಲಾಂನ ಮೂಲ ತತ್ವಗಳನ್ನು ಎಲ್ಲರೂ ಅನುಸರಿಸುತ್ತಾರೆ. ಎರಡನೆಯ ಹಿಂದುಳಿದ ವರ್ಗಗಳ ವರದಿಯಲ್ಲಿ ಹನಫಿ ಎಂಬ ಹೆಸರಿದೆ. ಇದು ಸುನ್ನಿಗಳ ಮಾರ್ಗದರ್ಶಕ ಮತ್ತು ಸೈದ್ದಾಂತಿಕ ಶಾಖೆಯಾಗಿದೆ. ಭಾರತದ ಶೇ. 90ಕ್ಕಿಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಸುನ್ನಿಗಳಾಗಿದ್ದು, ಹನಫಿ ಸೈದ್ಧಾಂತಿಕತೆಯನ್ನು ಅನುಸರಿಸುತ್ತಾರೆ.
ಧಾರ್ಮಿಕ ಕ್ರಿಯಾವಿಧಿಗಳ ವೃತ್ತಿಗಳು
ಖದೀಂ, ಖಲೀಫ, ಖಾಝಿ, ಪೇಶ್ ಇಮಾಮ್, ಮುಅದ್ದಿನ್, ಮುಲ್ಲಾ, ಮುತವಲ್ಲಿ ಮುಂತಾದವರನ್ನು ಪಟ್ಟಿ ಮಾಡಲಾಗಿದೆ. ಮುಲ್ಲಾ ಹೆಸರು ಅನುವಂಶಿಕವಾಗಿ ಮುಂದಿನ ತಲೆಮಾರುಗಳು ಬಳಸುತ್ತಿದ್ದು ಅವರೆಲ್ಲರೂ ಧಾರ್ಮಿಕ ವೃತ್ತಿಯಲ್ಲಿ ತೊಡಗಿರುವುದಿಲ್ಲ ಎಂಬ ವಾಸ್ತವವೂ ಇದೆ. ದರ್ಗಾಗಳ ಉಸ್ತುವಾರಿ ನೋಡಿಕೊಳ್ಳುವ ಮುಜಾವರ್, ಹಾಗೆಯೇ ಸೂಫಿಗಳ ವಂಶಸ್ಥರನ್ನು ಸಜ್ಜದಾಸ್ ಎಂದು ಕರೆಯಲಾಗುತ್ತದೆ. ಇದರ ಜೊತೆಯಲ್ಲಿ ದರ್ಗಾಗಳನ್ನು ನೋಡಿಕೊಂಡು ಹಾಡುಗಾರಿಕೆ ಮತ್ತು ಸಂಗೀತ ವಾದ್ಯಗಳನ್ನು ನುಡಿಸುವ ಸಾತಾನಿ ಮುಸ್ಲಿಮರು, ಪೀರ್ ಅಂದರೆ ಸೂಫಿ ತತ್ವ ಬೋಧಿಸುವವರು, ದೇವರು, ಪ್ರವಾದಿ ಮತ್ತು ಸೂಫಿಗಳ ಕುರಿತು ಹಾಡುತ್ತಾ ಧಾರ್ಮಿಕ ಭಿಕ್ಷಾಟನೆ ಮಾಡುವ ಫಕೀರ್, ದರವೇಸು, ದರವೇಶಿ ಮುಂತಾದ ಅತ್ಯಂತ ಹಿಂದುಳಿದ ಜಾತಿ ಸಮುದಾಯಗಳು ಇವೆ.
ಕುಶಲಕರ್ಮಿ ವೃತ್ತಿ ಜಾತಿಗಳು
ಎತ್ತುಗಳಿಗೆ ಮತ್ತು ಕುದುರೆಗಳಿಗೆ ಲಾಳ ಹೊಡೆಯುವ ನಾಲಬಂದ್, ಕತ್ತಿ, ಕತ್ತರಿಗಳನ್ನು ತಯಾರಿಸುವ ಮತ್ತು ಸಾಣೆ ಹಿಡಿಯುವ ಶಿಕ್ಕಲಿಗರು, ಕಮ್ಮಾರಿಕೆ ಮಾಡುವ ಲುಹಾರ್, ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳನ್ನು ತಯಾರಿಸುವ ಮತ್ತು ರಿಪೇರಿ ಮಾಡುವ ಕಲೈಗಾರ್, ಬಳೆಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಬಂಗಡಿವಾಲ ಅಥವಾ ಮಣಿಯಾರ್, ಸಾಂಪ್ರದಾಯಿಕವಾಗಿ ಮನೆಗಳ ಛಾವಣಿಗಳನ್ನು (ಹುಲ್ಲು ಮತ್ತು ಬಿದಿರು) ಮಾಡುವ ಛಪ್ಪರ್ ಬಂದ್, ಬಟ್ಟೆ ಹೊಲೆಯುವ ದರ್ಜಿ, ಕ್ಷೌರಿಕ ವೃತ್ತಿ ಮತ್ತು ಸುನ್ನತಿ ಮಾಡುವ ಹಜ್ಜಾಮ್, ಬಟ್ಟೆ ಒಗೆಯುವ ಮತ್ತು ಇಸ್ತ್ರಿ ಮಾಡುವ ಧೋಬಿ, ಗಾರೆ ಕೆಲಸಮಾಡುವ ಗೌಂಡಿ ಮುಸ್ಲಿಂ, ಮಣಿ ಮತ್ತು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ತಯಾರಿಸುವ ಜೋಹರಿ ಮತ್ತು ಸೋನಾರ್, ಜಾತಗಾರರಲ್ಲಿರುವ ಒಂದು ಉಪ ಗುಂಪು ಹಳೆಯ ತಾಮ್ರ ಮತ್ತು ಹಿತ್ತಾಳೆ ಮುಂತಾದ ಲೋಹಗಳನ್ನು ಬಳಸಿ ದೇವರುಗಳ ವಿಗ್ರಹಗಳನ್ನು ತಯಾರಿಸುತ್ತಾರೆ. ಮುಂತಾದವುಗಳನ್ನು ಈ ಗುಂಪಿಗೆ ಸೇರಿಸಬಹುದು. ಇನ್ನು ಸಮೀಕ್ಷೆಗಾಗಿ ತಯಾರಿಸಿದ ಜಾತಿ ಪಟ್ಟಿಯಲ್ಲಿ ಸೇರಿಸದೇ ಇರುವ ಮುಸ್ಲಿಂ ಕಲಾಲರು, ಈ ಹಿಂದೆ ಸಾಂಪ್ರದಾಯಿಕವಾಗಿ ಮದ್ಯ ತಯಾರಿಕೆ ಮತ್ತು ಮಾರಾಟ ಮಾಡುತ್ತಿದ್ದವರು.

ನೇಕಾರಿಕೆ, ಜವಳಿ, ವ್ಯಾಪಾರ ಮತ್ತು ಸೇವೆಗಳು
ಅನ್ಸರ್, ಮೋಮಿನ್, ಜುಲಾಹ, ಜುಲೋಹಿ ಮುಂತಾದ ಜಾತಿಗಳು ನೇಕಾರಿಕೆಯಲ್ಲಿ ತೊಡಗಿವೆ. ಬಟ್ಟೆಗೆ ಬಣ್ಣ ಹಾಕುವ ರಂಗ್ರೇಜ್ ಕೂಡ ಇದ್ದಾರೆ. ಹತ್ತಿ ಕೆಲಸ ಮತ್ತು ಹಾಸಿಗೆ ಹೊಲಿಯುವ ನದಾಫ್, ಪಿಂಜಾರ ಜಾತಿಗಳಿವೆ. ಪಟವೆಕಾರ್, ಪಟ್ಟೆಗಾರ್ ಸಾಂಪ್ರದಾಯಿಕವಾಗಿ ರೇಷ್ಮೆಯ ನೇಯ್ಗೆ ಬಟ್ಟೆಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದರು. ಜಟಕಾ ಕುದುರೆಯ ಪಿಂಡಾರಿಗಳು, ಸುಗಂಧ ದ್ರವ್ಯ ತಯಾರಿಸುವ ಮತ್ತು ಮಾರುವ ಅತ್ತರ್ ಮುಸ್ಲಿಮರು, ಮಾಂಸ ಮಾರಾಟ ಮಾಡುವ ಖುರೈಶಿ, ಕಸಾಬ್, ಸಾಂಪ್ರದಾಯಿಕವಾಗಿ ಕೋಟೆಗಳನ್ನು, ರಾಜರ ಅರಮನೆಗಳನ್ನು, ಶ್ರೀಮಂತರ ಮನೆಗಳನ್ನು ಕಾಯುತ್ತಿದ್ದ ಸಿಪಾಯಿ ಮುಸ್ಲಿಂ ಮತ್ತು ದವೇರವಾಲೆ, ಎಣ್ಣೆ ತಯಾರಿಸುವ ತೇಲಿ ಮುಸ್ಲಿಂ, ಎತ್ತುಗಳು ಮತ್ತು ದನಗಳ ಕೊಂಬುಗಳನ್ನು ಚೂಪುಗೊಳಿಸಿ ಅಲಂಕರಿಸುವ ಮತ್ತು ಎಮ್ಮೆಗಳಿಗೆ ಕ್ಷೌರ ಮಾಡುವ ಜಾತಗಾರ, ಕಲ್ಲಿನ ಕೆಲಸ ಮಾಡುವ ಟಕಟನಕರ, ಟಕಾರಿ, ಕಡಲ ವ್ಯಾಪಾರಿಗಳಾದ ನವಾಯತ್ ಮತ್ತು ವ್ಯಾಪಾರಿಗಳಾದ ಬ್ಯಾರಿ, ತಮಿಳು ಭಾಷಿಕ ವ್ಯಾಪಾರಿಗಳಾದ ಲಬ್ಬೆ, ಕೇರಳ ಮೂಲದ ಮಾಪಿಳ್ಳೈ, ರಾಜರ ಮತ್ತು ಶ್ರೀಮಂತರ ಆಸ್ಥಾನಗಳಲ್ಲಿ ಸಂಗೀತ, ನೃತ್ಯಗಳಲ್ಲಿ ತೊಡಗಿದ್ದ ಕಸ್ಬಿನ್, ಗುಜರಾತ್ ಮೂಲದ ವ್ಯಾಪಾರಿಗಳಾದ ಮೆಮೊನ್ ಮತ್ತು ಬೊಹ್ರಾ, ಸಮೀಕ್ಷೆಗಾಗಿ ತಯಾರಿಸಿದ ಜಾತಿ ಪಟ್ಟಿಯಲ್ಲಿ ಸೇರಿಸದೇ ಇರುವ ರಾಜರ ಸಿಂಹಾಸನ ಮತ್ತು ಆಸ್ಥಾನಗಳನ್ನು ಸ್ವಚ್ಛಗೊಳಿಸುತ್ತಿದ್ದ ಗದ್ದಿ ಮುಸ್ಲಿಂ ಹಾಗೂ ಗಣಿ ಕೆಲಸ ಮಾಡುತ್ತಿದ್ದ ಬೇಲ್ದಾರ್ ಮುಸ್ಲಿಂ, ತಮಿಳು ಭಾಷಿಕ ವ್ಯಾಪಾರಿಗಳಾದ ರಾವುತರ್ ಇವುಗಳನ್ನು ಈ ಗುಂಪಿಗೆ ಸೇರಿಸಬಹುದು.
ತೋಟಗಾರಿಕೆಯಲ್ಲಿ ತೊಡಗಿರುವ ಸಮುದಾಯಗಳು
ತರಕಾರಿ ಬೆಳೆಯುವ ಮತ್ತು ಮಾರಾಟ ಮಾರಾಟ ಮಾಡುವ ಬಾಗವಾನ್, ಸಾಂಪ್ರದಾಯಿಕವಾಗಿ ಹೂವಿನ ಕೆಲಸ ಮಾಡುವ ಫುಲಾರಿ, ತೋಟಗಾರಿಕೆ ಮತ್ತು ಪುಷ್ಪೋದ್ಯಮದಲ್ಲಿ ತೊಡಗಿರುವ ಫುಲ್ಮಾಲಿಗಳನ್ನು ಈ ಗುಂಪಿಗೆ ಸೇರಿಸಬಹುದು.
ಅಲೆಮಾರಿ ಸಮುದಾಯಗಳು
ಪ್ರದೇಶದಿಂದ ಪ್ರದೇಶಕ್ಕೆ ಸಂಚರಿಸುತ್ತಾ ಸರ್ಕಸ್ ಮತ್ತು ದೈಹಿಕ ಕಸರತ್ತುಗಳನ್ನು ಮಾಡುವ ಅರೆ-ಅಲೆಮಾರಿ ಸಮುದಾಯವಾದ, ಬಾಜಿಗರ್, ಪಶುಪಾಲನೆ ಮಾಡುವ ಗೌಳಿ ಮುಸ್ಲಿಂ, ಕೃಷಿ ಹಾಗೂ ಪಶುಪಾಲನೆ ಮಾಡುವ ಒಟರಿ ಮುಸ್ಲಿಂ ತನ್ನದೇ ಆದ ಕನ್ನಡ ಮತ್ತು ಮರಾಠಿ ಮಿಶ್ರಿತ ಉರ್ದು ಮಾತನಾಡುತ್ತಾರೆ. ಮೂಲತಃ ಕುರಿಗಾಹಿಗಳಾದ ಹಟಗಾರ ಮುಸ್ಲಿಂ, ಈ ಹಿಂದೆ ಕೋತಿಗಳನ್ನು ಆಡಿಸುತ್ತಿದ್ದ ಮದಾರಿ. ಹಾಗೆಯೇ ಸಮೀಕ್ಷೆಗಾಗಿ ತಯಾರಿಸಿದ ಜಾತಿ ಪಟ್ಟಿಯಲ್ಲಿ ಸೇರಿಸದೇ ಇರುವ ಹಾವಾಡಿಸುವ ಗಾರುಡಿ ಮುಸ್ಲಿಂ, ರಾಜರ ಆಸ್ಥಾನಗಳಲ್ಲಿ ಒಂಟೆಗಳನ್ನು ಸಲಹುತ್ತಿದ್ದ ಸಾರವಾನ್/ಸಾರಬಾನ, ಕರಡಿಯಾಡಿಸುವ ಕಲಂದರ್, ಆನೆ ಪಳಗಿಸುವ ಮುಸ್ಲಿಂ ಮಾವುತರು, ಆಫ್ರಿಕಾ ಮೂಲದ ಸಿದ್ದಿ ಮುಸ್ಲಿಮರು ಈ ಗುಂಪಿಗೆ ಸೇರುತ್ತಾರೆ.

ಬಿರುದಾವಳಿಗಳು
ಬೇಗ್ ಎನ್ನುವುದು ಬಿರುದು ಅಥವಾ ಗೌರವ ಪದವಿ. ಹಿಂದಿನ ರಾಜನ ಕಾಲದಲ್ಲಿ ವ್ಯಕ್ತಿ ಮಾಡಿದ ಉತ್ತಮ ಕೆಲಸಕ್ಕೆ ಮತ್ತು ಮಿಲಿಟರಿಯಲ್ಲಿ ಉನ್ನತ ಸ್ಥಾನಮಾನ ಪಡೆದವರಿಗೆ, ಆಡಳಿತಗಾರರಿಗೆ ಕೊಟ್ಟಿರುವ ಗೌರವ ಪದವಿ, ಇದು ಮುಂದಿನ ತಲೆಮಾರುಗಳಲ್ಲೂ ಮರುಕಳಿಸಿದೆ.
ಒಂದು ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳುವ ಸಲುವಾಗಿ ಇವುಗಳನ್ನು ವಿವಿಧ ಗುಂಪುಗಳನ್ನಾಗಿ ವಿಂಗಡಿಸಿದ್ದೇನೆ ಹೊರತೂ ಇದೂ ಹೀಗೆಯೇ ಇರಬೇಕೆಂದೇನೂ ಇಲ್ಲ. ಒಂದೆರಡು ಸಮುದಾಯಗಳ ವೃತ್ತಿಗಳ ಬಗ್ಗೆ ಹೆಚ್ಚಿನ ಕುಲಶಾಸ್ತ್ರೀಯ ಆಕರಗಳ ಅಲಭ್ಯತೆಯಿಂದಾಗಿ ಹಾಗೆಯೇ ಬಿಟ್ಟಿದ್ದೇನೆ. ಪ್ರಸ್ತುತ ಒಟ್ಟು 1400 ಜಾತಿಗಳ ಪಟ್ಟಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿದ್ದು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2025ರಲ್ಲಿ ಸಮೀಕ್ಷೆ ನಡೆಸಲು ತಯಾರಿ ನಡೆಸಿದೆ. ಈ ಪಟ್ಟಿಯಲ್ಲಿ ಬರುವ ಜಾತಿ ಮತ್ತು ಉಪಜಾತಿಗಳನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಒಂದು ಮಾರ್ಗಸೂಚಿಯಾಗಿ ಬಳಸಲಾಗಿದೆ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು.

ಎಸ್ ಬಾಬು ಖಾನ್
ಲೇಖಕರು. ಸುಮಾರು ಮೂರು ದಶಕಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತ ಮತ್ತು ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು. ಅಲೆಮಾರಿ ಹಾಗೂ ಅರೆಮಾರಿ ಸಮುದಾಯಗಳ ಕುರಿತಂತೆ ಅನೇಕ ಅಧ್ಯಯನಗಳನ್ನು ಮಾಡಿದ್ದಾರೆ. ಇವರ ಬರಹಗಳು ಕರ್ನಾಟಕ ಸಾಹಿತ್ಯ ಆಕಾಡೆಮಿ, ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ ಪುಸ್ತಕಗಳಲ್ಲಿ ಪ್ರಕಟವಾಗಿವೆ. ಮುಸ್ಲಿಂ ಸಮುದಾಯದ ಜಾತಿಗಳ ಬಗ್ಗೆ ಮತ್ತು ಅಲೆಮಾರಿ ಸಮುದಾಯಗಳ ಬಗ್ಗೆ ಅಪಾರ ಒಳನೋಟಗಳನ್ನು ಹೊಂದಿರುವ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.




