ಇಂದು ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆ ನಡೆಸಲಾಗಿದ್ದು, ಅಕ್ಟೋಬರ್ 16ರಿಂದ 31ರವರೆಗೆ ಪ್ರತಿದಿನ ಮೂರು ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶಿಸಿದೆ.
ಕರ್ನಾಟಕದ ತೀವ್ರ ಪ್ರತಿರೋಧದ ನಡುವೆಯೂ ತಮಿಳುನಾಡಿಗೆ ಈಗಾಗಲೇ ಕಾವೇರಿ ನೀರು ಹರಿಯುತ್ತಿದೆ. ಈ ಬೆನ್ನಲ್ಲೇ ಇಂದು (ಬುಧವಾರ) ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಸಿದೆ. ಈ ಸಭೆಯಲ್ಲಿ ಮುಂದಿನ ಅ.31ರವರೆಗೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದೆ.
ಬೆಂಗಳೂರು ಬಂದ್ ಹಾಗೂ ಆ ಬಳಿಕ ಕರ್ನಾಟಕ ಬಂದ್ನ ನಡುವೆಯೇ ನಡೆದಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯೂಎಂಎ)ದ ಈ ಹಿಂದಿನ ಸಭೆಯಲ್ಲಿ ತಮಿಳುನಾಡಿಗೆ 18 ದಿನ ಪ್ರತಿದಿನ ಮೂರು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿತ್ತು.
ರಾಜ್ಯದ ಅಧಿಕಾರಿಗಳು ಬರ ಪರಿಸ್ಥಿತಿ ಇದೆ ಎಂದು ವಾದಿಸಿದ್ದರೂ, ನೀರು ಬಿಡಲು ಆದೇಶ ನೀಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇಂದಿನ ಸಭೆಯಲ್ಲಿ ತಮಿಳುನಾಡು, ದಿನಕ್ಕೆ 13,000 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಲು ಮನವಿ ಮಾಡಿತ್ತು.
ಆದರೆ ತಮಿಳುನಾಡಿನ ಮನವಿಯನ್ನು ಪುರಸ್ಕರಿಸದ ಸಿಡಬ್ಲ್ಯೂಆರ್ಸಿ, ಅಕ್ಟೋಬರ್ 16ರಿಂದ 31ರವರೆಗೆ ಪ್ರತಿದಿನ ಮೂರು ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶಿಸಿದೆ. ಈ ಆದೇಶದ ವಿರುದ್ಧ ಕರ್ನಾಟಕವು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಕಾವೇರಿ ನದಿ ಪಾತ್ರದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಿದೆ. ಈ ಮಧ್ಯೆಯೇ ಈ ಆದೇಶ ಬಂದಿದೆ. ತಮಿಳುನಾಡಿಗೆ ನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಈ ಹಿಂದೆ ನೀಡಿದ್ದ ಆದೇಶವು ಅ. 15ಕ್ಕೆ ಮುಗಿಯಲಿದೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.





