ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಬಹು ನಿರೀಕ್ಷಿತ ಐತಿಹಾಸಿಕ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆ.26ರ ಶನಿವಾರದಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಸದ್ಯ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ, ವಿಕ್ರಮ್ ಲ್ಯಾಂಡರ್ ಚಂದ್ರನ ನೆಲ ತಲುಪುವ ದೃಶ್ಯವನ್ನು ವರ್ಚುವಲ್ ಮೂಲಕ ವೀಕ್ಷಿಸಿ, ಬಳಿಕ ಅಭಿನಂದನೆ ಸಲ್ಲಿಸಿ, ಮಾತನಾಡಿದ್ದರು.
ಆ.26ರಂದು ಬೆಂಗಳೂರಿಗೆ ದಕ್ಷಿಣ ಆಫ್ರಿಕಾದಿಂದಲೇ ಬರಲಿದ್ದಾರೆ ಎಂದು ತಿಳಿದುಬಂದಿದ್ದು, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ಭೇಟಿ ನೀಡಲಿದ್ದಾರೆ.
ಶನಿವಾರ ಸಂಜೆ 5.55ಕ್ಕೆ ಎಚ್ಎಎಲ್ ಏರ್ಪೋರ್ಟ್ಗೆ ಆಗಮಿಸಲಿರುವ ಪ್ರಧಾನಿ, ಸಂಜೆ 6.30ರವರೆಗೆ ಏರ್ಪೋರ್ಟ್ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
ಬಳಿಕ ರಾತ್ರಿ 7 ಗಂಟೆಗೆ ರಸ್ತೆಯ ಮೂಲಕ ಆಗಮಿಸಿ, ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆ. ರಾತ್ರಿ 8 ಗಂಟೆಯವರೆಗೆ ಇಸ್ರೋ ಕಚೇರಿಯಲ್ಲಿ ಪ್ರಧಾನಿ ಮೋದಿ ಸಭೆ ನಡೆಸಲಿದ್ದು, ಆ ಬಳಿಕ ರಾತ್ರಿ 8.35ಕ್ಕೆ ಬೆಂಗಳೂರಿನಿಂದ ಎಚ್ಎಎಲ್ ಮೂಲಕ ದೆಹಲಿಗೆ ನಿರ್ಗಮಿಸಲಿದ್ದಾರೆ.
ಈ ಮಧ್ಯೆ, ಮೋದಿ ಅವರ ಈ ಬೆಂಗಳೂರು ಭೇಟಿಯನ್ನು ಬಿಜೆಪಿಯ ರಾಜ್ಯ ಘಟಕವು ಪಕ್ಷದ ದೃಷ್ಟಿಯಿಂದ ಪೂರಕವಾಗಿ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬೆಂಗಳೂರಿನಲ್ಲಿ ನಡೆಸಿದ್ದ ರೋಡ್ ಶೋದಂತೆಯೇ ಪೀಣ್ಯದಲ್ಲಿಯೂ ಕೂಡ ಸುಮಾರು ಒಂದು ಕಿಲೋಮೀಟರ್ ರೋಡ್ಶೋ ನಡೆಸಲು ಯೋಜನೆ ಹಾಕಿಕೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತವಾಗಿ ಪಕ್ಷ ಯಾವುದೇ ಹೇಳಿಕೆ ನೀಡಿಲ್ಲ.





