ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ವರದಿಯ ನಡುವೆಯೇ ದೇಶದಲ್ಲಿ ಮತ್ತೆ ಕೊರೋನಾ ಆತಂಕ ಆವರಿಸಿದೆ. ಈ ನಡುವೆ ಹೇಳಿಕೆ ನೀಡಿರುವ ಭಾರತೀಯ ಸಾರ್ಸ್-ಕೋವ್-2 ಜಿನೋಮ್ ಒಕ್ಕೂಟದ (ಐಎನ್‌ಎಎಸಿಒಜಿ) ಮುಖ್ಯಸ್ಥ ಡಾ. ಎನ್.ಕೆ. ಅರೋರಾ, “ಕೊರೋನಾ ರೂಪಾಂತರಿಯ ಬಗ್ಗೆ ಆತಂಕ ಬೇಡ” ಎಂದು ತಿಳಿಸಿದ್ದಾರೆ.
“ಕೊರೋನಾ ವೈರಸ್‌ನ ಉಪತಳಿ ಜೆಎನ್-1 ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ. ಕೇರಳದಲ್ಲಿ ಮೃತಪಟ್ಟ ವ್ಯಕ್ತಿ ಕೇವಲ ವೈರಸ್ ಸೋಂಕಿನಿಂದ ಮೃತಪಟ್ಟಿಲ್ಲ. ಆತನಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಕೂಡ ಇದ್ದವು” ಎಂದು ಅವರು ಹೇಳಿದ್ದಾರೆ.
“ಮೃತ ವ್ಯಕ್ತಿಯು ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಕಾರಣಗಳಿಂದ ಸಾವು ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಕೇವಲ ಜೆಎನ್.1 ಸೋಂಕಿನಿಂದ ಅಲ್ಲ” ಎಂದು ಡಾ. ಎನ್.ಕೆ. ಅರೋರಾ ಸ್ಪಷ್ಟಪಡಿಸಿದ್ದಾರೆ.
“ಕೊರೋನಾ ರೂಪಾಂತರಿ ಜೆಎನ್-1 ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಸೋಂಕಿತರ ಮಾದರಿಗಳ ಸಂಖ್ಯೆ ಬಹಳಷ್ಟು ಕಡಿಮೆ ಇದ್ದು, ಎಲ್ಲ ರಾಜ್ಯಗಳಿಂದ ಮಾದರಿ ಸಂಗ್ರಹಿಸಲಾಗುತ್ತಿದೆ. ಆದರೂ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ” ಎಂದು ಸಲಹೆ ನೀಡಿದ್ದಾರೆ.
ದೇಶದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ ಮತ್ತು ಕೊರೋನಾ ರೂಪಾಂತರಿ ಜೆಎನ್.1 ಉಪತಳಿಯ ಮೊದಲ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.
ಈ ಮಧ್ಯೆ ನಿನ್ನೆ ಕೊಡಗಿನ ಕುಶಾಲ ನಗರದಲ್ಲಿ ಹೇಳಿಕೆ ನೀಡಿದ್ದ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, “60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಕಾಯಿಲೆ ಹಾಗೂ ಕೋವಿಡ್ ಲಕ್ಷಣ ಹೊಂದಿರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಗುಂಪು ಸೇರಬಾರದು, ಈ ಬಗ್ಗೆ ಮಾರ್ಗಸೂಚಿಯನ್ನು ಇಲಾಖೆ ಹೊರಡಿಸಲಿದೆ” ಎಂದು ತಿಳಿಸಿದ್ದಾರೆ.





