ಲೋಕಾಯುಕ್ತ ವಿಚಾರಣೆಗೆ ವಿವಿಧ ಪ್ರಾಧಿಕಾರಗಳಿಂದ ಅನುಮತಿ ವಿಳಂಬವಾಗುತ್ತಿರುವ ಬಗ್ಗೆ ಕೂಡಲೇ ಕ್ರಮ ವಹಿಸಿ, ಎಲ್ಲ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಿ, ಲೋಕಾಯುಕ್ತಕ್ಕೆ ಕಳುಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕರ್ನಾಟಕ ಲೋಕಾಯುಕ್ತಕ್ಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಸಕ್ಷಮ ಪ್ರಾಧಿಕಾರಗಳಲ್ಲಿ ಅಭಿಯೋಜನಾ ಮಂಜೂರಾತಿಗಾಗಿ ಬಾಕಿ ಇರುವ ಪ್ರಕರಣಗಳ ಕುರಿತು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
“ವಿವಿಧ ಪ್ರಕರಣಗಳಲ್ಲಿ ಲೋಕಾಯುಕ್ತ ವಿಚಾರಣೆಗೆ ಅನುಮತಿ ನೀಡಲು ವಿಳಂಬ ಧೋರಣೆ ಸಲ್ಲದು. ಇದರಿಂದ ಜನತೆಗೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಬಾರದು. ಆದ್ದರಿಂದ ತ್ವರಿತ ತೀರ್ಮಾನ ಕೈಗೊಂಡು ಲೋಕಾಯುಕ್ತರಿಗೆ ಆದೇಶಗಳನ್ನು ಕಳುಹಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





