ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಮನೆ ಮನೆ ಸಮೀಕ್ಷೆಯನ್ನು ಸೆ.22 ರಿಂದ ಅ.7ರ ವರೆಗೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಲಿಂಗಾಯತ ಮಠಾಧೀಶರ ಒಕ್ಕೂಟವು, ಲಿಂಗಾಯತ ಸಮುದಾಯವರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಸಬಾರದು. ‘ಲಿಂಗಾಯತ’ ಎಂದು ಬರೆಸಿಕೊಳ್ಳಬೇಕು ಎಂದು ಒತ್ತಾಯಿಸಿದೆ.
ಬುಧವಾರ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು, “ಸೆ.22ರಿಂದ ಅ.7ರ ವರೆಗೆ ಹಿಂದುಳಿದ ವರ್ಗಗಳ ಆಯೋಗವು ನಡೆಸಲು ಉದ್ದೇಶಿಸಿರುವ ಸಮೀಕ್ಷೆಯ ವೇಳೆ ಲಿಂಗಾಯತ ಸಮುದಾಯವರು ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದು ಉಪಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿಯನ್ನು ಬರೆಸಬೇಕು ಎಂದು ತಿಳಿಸಿದ್ದಾರೆ.
ಲಿಂಗಾಯತವು ಪ್ರತ್ಯೇಕ ಸ್ವತಂತ್ರ ಧರ್ಮವಾದರು, ಅದರೊಳಗೆ 97 ಬೇರೆ ಬೇರೆ ಹೆಸರಿನ ಜಾತಿ(ಒಳಪಂಗಡ)ಗಳಿವೆ. ಈವರೆಗೆ ನಡೆದ ಜನಗಣತಿಗಳಲ್ಲಿ ಬಹುತೇಕ ಲಿಂಗಾಯತರು ತಮ್ಮ ಧರ್ಮವನ್ನು ‘ಹಿಂದೂ’ ಎಂದು ಬರೆಸಿದ್ದು ಕಂಡು ಬರುತ್ತದೆ. ಅದು ತಮ್ಮ ಧರ್ಮದ ಬಗ್ಗೆ ಲಿಂಗಾಯತರಲ್ಲಿದ್ದ ಅರಿವಿನ ಕೊರತೆಯ ಸಂಕೇತವಾಗಿದೆ ಎಂದರು.
ಜನಗಣತಿಯಲ್ಲಿ ಕೆಲವು ಲಿಂಗಾಯತ ವಿರೋಧಿ ಸಂಸ್ಥೆಗಳು, ಎಲ್ಲ ಲಿಂಗಾಯತರು ಹಿಂದೂ ಎಂದು ಬರೆಸಬೇಕೆಂದು ಹೇಳುತ್ತಾ, ಲಿಂಗಾಯತರನ್ನು ದಾರಿ ತಪ್ಪಿಸುತ್ತಿವೆ. 2023ರ ಡಿಸೆಂಬರ್‌ನಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯು ಲಿಂಗಾಯತರು ಹಿಂದೂಗಳಲ್ಲವೆಂದು ಸ್ಪಷ್ಟವಾಗಿ ನಿರ್ಣಯ ಮಾಡಿದೆ. ಜಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ 2002ರಲ್ಲಿ ಹೊರಡಿಸಿದ ಆದೇಶದಲ್ಲಿ ಅನ್ಯಾಯವಾಗಿ ಸತ್ಯಕ್ಕೆ ವಿರುದ್ಧವಾಗಿ ಕೆಲವು ಗುಂಪುಗಳ ಒತ್ತಡಕ್ಕೆ ಮಣಿದು ಲಿಂಗಾಯತರನ್ನು ‘ವೀರಶೈವ ಲಿಂಗಾಯತ’ರೆಂದು ಅಧಿಸೂಚನೆ ಹೊರಡಿಸಿದ್ದು ತಪ್ಪಾಗಿದೆ ಎಂದು ಅವರು ತಿಳಿಸಿದರು.

ಲಿಂಗಾಯತದಲ್ಲಿರುವ 97 ಉಪಜಾತಿಗಳಲ್ಲಿ ವೀರಶೈವ ಒಂದು ಜಾತಿ ಮಾತ್ರ ಲಿಂಗಾಯತದಲ್ಲಿ ವೀರಶೈವವಿದೆ. ಆದರೆ ವೀರಶೈವದಲ್ಲಿ ಲಿಂಗಾಯತವಿಲ್ಲ. ಆದುದರಿಂದ ‘ವೀರಶೈವ ಲಿಂಗಾಯತ’ ಎನ್ನುವುದು ಸಂಪೂರ್ಣವಾಗಿ ತಪ್ಪು. ಇದೇ ತಪ್ಪನ್ನು ಅಖಿಲ ಭಾರತ ವೀರಶೈವ ಮಹಾಸಭೆಯು ಮುಂದುವರೆಸುತ್ತಿದೆ. ಇದರಲ್ಲಿ ಆ ಸಂಘಟನೆಗಳ ಪದಾಧಿಕಾರಿಗಳ ರಾಜಕೀಯ ಹಿತಾಸಕ್ತಿ ಅಡಗಿದೆ. ಇಂತಹ ರಾಜಕಾರಣಿಗಳ ಮಾತನ್ನು ಲಿಂಗಾಯತರು ಕೇಳಬಾರದು ಎಂದು ಡಾ.ಬಸವಲಿಂಗ ಪಟ್ಟದೇವರು ಸೂಚನೆ ನೀಡಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ಸೆ.20ರಂದು ಸಾಮಾಜಿಕ ಮುಖಂಡ ಜಾವೀದ್ ಖಾನ್‌ಗೆ ಗೌರವ ಡಾಕ್ಟರೇಟ್
ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮಿಗಳಾದ ತೋಂಟದ ಸಿದ್ಧರಾಮ ಸ್ವಾಮಿ, ಮಹಾಂತ ದೇವರು, ಬೆಳ್ಳಿ ಮಠ ಶಿವರುದ್ರ ಸ್ವಾಮಿ ಬೇಲಿ ಮಠ, ಸಿದ್ದಲಿಂಗ ಮಹಾಸ್ವಾಮಿ, ಅಲ್ಲಮಪ್ರಭು ಮಹಾಸ್ವಾಮಿ, ಗಂಗಾಮಾತಾಜಿ, ಬಸವಲಿಂಗ ಸ್ವಾಮಿ, ಚನ್ನಬಸವ ಸ್ವಾಮಿ, ನಂಜುಂಡಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





