2021-22ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನ್ಯಾಯಾಲಯವು ಜುಲೈ 12ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕಳೆದ ಮೂರು ದಿನಗಳ ಕಾಲ ಸಿಬಿಐ ಕಸ್ಟಡಿ ಕೊನೆಗೊಂಡ ಹಿನ್ನೆಲೆಯಲ್ಲಿ ದೆಹಲಿಯ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಲಾಯಿತು. ಕೇಜ್ರಿವಾಲ್ ಅವರ ಕಸ್ಟಡಿಯನ್ನು ವಿಸ್ತರಿಸಲು ಸಿಬಿಐ ಕೋರದ ಹಿನ್ನೆಲೆಯಲ್ಲಿ ರೌಸ್ ಅವೆನ್ಯೂ ಕೋರ್ಟ್ನ ರಜಾಕಾಲದ ನ್ಯಾಯಾಧೀಶ ಸುನೇನಾ ಶರ್ಮಾ, ಜುಲೈ 12ರವರೆಗೆ ನ್ಯಾಯಾಂಗ ಬಂಧನ ವಿಧಿಸಿ, ಆದೇಶ ಹೊರಡಿಸಿದ್ದಾರೆ.
Delhi Excise Policy: Delhi Court sends Arvind Kejriwal to judicial custody till July 12 in CBI case#ArvindKejriwal #DelhiExcisePolicy #CBI
Read more: https://t.co/akqEW39EgN pic.twitter.com/cFIAFUSkCa
— Bar and Bench (@barandbench) June 29, 2024
ಕೇಜ್ರಿವಾಲ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ಸಿಬಿಐ ನ್ಯಾಯಾಲಯವನ್ನು ಒತ್ತಾಯಿಸಿ, “ಅವರು ಕಸ್ಟಡಿಯಲ್ಲಿ ಉಳಿಯದಿದ್ದರೆ ಸಾಕ್ಷಿಗಳನ್ನು ನಾಶ ಮಾಡುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಭಾವಿ ರಾಜಕಾರಣಿ. ಸದ್ಯಕ್ಕೆ ಅವರ ಹೆಚ್ಚಿನ ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ” ಎಂದು ಸಿಬಿಐ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ದಾಖಲಿಸಿಕೊಂಡಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ಸಿಬಿಐ, ತಿಹಾರ್ ಜೈಲಿನಿಂದಲೇ ಬಂಧಿಸಿತ್ತು. ಇಡಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಇತ್ತೀಚೆಗೆ ಜೂನ್ 20 ರಂದು ವಿಚಾರಣಾ ನ್ಯಾಯಾಲಯ ಜಾಮೀನು ನೀಡಿತ್ತು. ಆದಾಗ್ಯೂ, ಇಡಿ ತುರ್ತು ಮನವಿ ಸಲ್ಲಿಸಿದ ಮರುದಿನ, ಜಾಮೀನು ಮಂಜೂರಾತಿಗೆ ದೆಹಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.





