ಹಾಸನದಲ್ಲಿ ವೈರಲ್ ಆದ ಅಶ್ಲೀಲ ವಿಡಿಯೋ ಪ್ರಕರಣ ದಾಖಲಾದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ, ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ, “ಹಾಸನ ವಿಡಿಯೋ ಪ್ರಕರಣ ನಾಲ್ಕೈದು ವರ್ಷ ಹಳೆಯದ್ದು” ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಮನೆಗೆ ದಿಢೀರ್ ಭೇಟಿ ಕೊಟ್ಟ ರೇವಣ್ಣ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಮೂರು ದಿನಗಳ ಹಿಂದೆ ಜೆಡಿಎಸ್ ಮುಖಂಡರು ಹಾಸನದ ಸೈಬರ್ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ, ಪ್ರಜ್ವಲ್ ರೇವಣ್ಣ ಅವರದ್ದು ಎಂದು ಮಾರ್ಫ್ ಮಾಡಿದ ವಿಡಿಯೋ ಹರಿಯಬಿಡಲಾಗುತ್ತಿದೆ. ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು. ಆದರೆ, ಇಂದು ರೇವಣ್ಣ, ‘ವಿಡಿಯೋ ನಾಲ್ಕೈದು ವರ್ಷ ಹಳೆಯದ್ದು’ ಎಂದು ವ್ಯತಿರಿಕ್ತವಾದ ಹೇಳಿಕೆ ನೀಡುವ ಮೂಲಕ ‘ವಿಡಿಯೋ ಫೇಕ್ ಅಲ್ಲ’ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
“ದೇವೇಗೌಡರ ಬಳಿ ಈ ವಿಷಯವನ್ನು ಮಾತನಾಡಿಲ್ಲ. ಇದೆಲ್ಲಾ ರಾಜಕೀಯ. ನಾನು ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ” ಎಂದರು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ರೀ.. ಇದೆಲ್ಲ 4-5 ವರ್ಷ ಹಳೆದು.. ತನಿಖೆಗೆ ಕರೆದಾಗ ಪ್ರಜ್ವಲ್ ರೇವಣ್ಣ ಬರ್ತಾನೆ ಎಂದು ಹೇಳಿದ್ದಾರೆ.@iPrajwalRevanna #HDRevanna #PrajwalRevanna #FIR #HassanCase #SIT #newsfirstkannada pic.twitter.com/NLAM3Mq66P
— NewsFirst Kannada (@NewsFirstKan) April 29, 2024
“ಇದಕ್ಕೆಲ್ಲ ಹೆದರಿ ಓಡಿ ಹೋಗುವವನಲ್ಲ ನಾನು. ಇಲ್ಲೇ ಇದ್ದೀನಲ್ಲ. ಕಾನೂನು ರೀತಿಯಲ್ಲಿ ಏನು ಎದುರಿಸಬೇಕೋ ಅದನ್ನು ಎದುರಿಸುತ್ತೇವೆ. ನಾಲ್ಕೈದು ವರ್ಷ ಹಳೆಯದ್ದನ್ನೆಲ್ಲ ತಗೊಂದು ಬಂದು ಏನೋ ಮಾಡ್ತಿದ್ದಾರೆ. ಅದರ ಬಗ್ಗೆ ನಾನೂ ಏನೂ ಪ್ರತಿಕ್ರಿಯಿಸಲ್ಲ. ಸದ್ಯ ಎಸ್ಐಟಿಗೆ ತನಿಖೆಗೆ ಕೊಟ್ಟಿರುವುದರಿಂದ ಅವರ ತನಿಖೆಗೆ ಮುಜುಗರವಾಗದಿರಲು ಏನೂ ಹೇಳಿಕೆ ನೀಡುವುದಿಲ್ಲ” ಎಂದು ತಿಳಿಸಿದ್ದಾರೆ.
“ನಿಮ್ಮ ವಿರುದ್ಧವೂ ಪ್ರಕರಣ ದಾಖಲಾಗಿದೆಯಲ್ಲವೇ?” ಎಂದು ಕೇಳಿದ್ದಕ್ಕೆ, “ಇದೆಲ್ಲ ರಾಜಕೀಯ. ಈಗ ಚುನಾವಣೆಯ ಸಂದರ್ಭದಲ್ಲಿ ಹೊರಗೆ ತಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ. ಸರ್ಕಾರ ಇದೆಯಲ್ವಾ? ಏನು ಬೇಕಾದರೂ ಕ್ರಮ ತೆಗೆದುಕೊಳ್ಳಲಿ. ಅತಿದೊಡ್ಡ ಲೈಂಗಿಕ ಅಂತಿದ್ದರೆ ಅವರು ತನಿಖೆ ಮಾಡಲಿ. ಎಸ್ಐಟಿ ಮಾಡಿದ್ದಾರಲ್ವಾ” ಎಂದು ರೇವಣ್ಣ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ನಿಮ್ಮ ಸಂಪರ್ಕದಲ್ಲಿದ್ದಾರಾ? ಎಲ್ಲಿದ್ದಾರೆ? ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, “ವಿದೇಶಕ್ಕೆ ಮಾಮೂಲಿಯಂತೆ ಹೋಗಿದ್ದಾನೆ. ಅವನಿಗೇನು ಗೊತ್ತು ಇಲ್ಲಿ ಎಫ್ಐಆರ್ ಆಗುತ್ತೆ, ಎಸ್ಐಟಿ ಆಗುತ್ತದೆ ಅನ್ನುವುದು. ತನಿಖೆಗೆ ಕರೆದಾಗ ಪ್ರಜ್ವಲ್ ರೇವಣ್ಣ ಬರ್ತಾನೆ. ” ಎಂದು ಹೆಚ್ ಡಿ ರೇವಣ್ಣ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹಾಸನ ಪೆನ್ಡ್ರೈವ್ ಪ್ರಕರಣ | ‘ಸ್ವಂತ’ ಮೊಬೈಲ್ನಲ್ಲಿದ್ದ ಅಶ್ಲೀಲ ವಿಡಿಯೋ ಹೊರಗೆ ಬಂದಿದ್ದು ಹೇಗೆ?
“ದೇವೇಗೌಡರ ಬಳಿ ನಾನು ಈ ವಿಷಯ ಮಾತನಾಡಿಲ್ಲ. ಕಾನೂನು ರೀತಿ ಏನಿದೆ ಅದು ನಡೆಯಲಿ. ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರ ಹೊಸದಲ್ಲ. ಇಂತಹ ಹಲವು ತನಿಖೆ ನಾವು ಎದುರಿಸಿದ್ದೇವೆ. ದೇವೇಗೌಡರ ಮೇಲೆ ಸಿಒಡಿ ತನಿಖೆ ನಡೆಸಿದ್ದರು. ದೇವೇಗೌಡರ ಕುಟುಂಬ ಲೋಕಾಯುಕ್ತ, ಸಿಐಡಿ ಎಲ್ಲ ತನಿಖೆ ಎದುರಿಸಿದ್ದೇವೆ” ಎಂದು ಹೇಳಿದ್ದಾರೆ.





