ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಐದು ಚುನಾವಣಾ ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಗ್ಯಾರಂಟಿ ಕೂಡ ಘೋಷಿಸಿತ್ತು. ಪ್ರತಿಯೊಬ್ಬರಿಗೆ ತಲಾ 10 ಕೆಜಿ ಅಕ್ಕಿ ಕೊಡುವುದಾಗಿ ತಿಳಿಸಿತ್ತು. ಬಿಪಿಎಲ್, ಅಂತ್ಯೋದಯ ಕಾರ್ಡ್ನವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ತಿಳಿಸಿತ್ತು.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಗ್ಯಾರಂಟಿಗಾಗಿ ಅಕ್ಕಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿತ್ತು. ಮೊದಲು ಇದೆ ಎಂದಿದ್ದ ಆಹಾರ ನಿಗಮವು, ಆ ಬಳಿಕ ಅಕ್ಕಿ ಸ್ಟಾಕ್ ಇಲ್ಲ ಎಂದು ತಿಳಿಸಿತ್ತು. ಆ ಬಳಿಕ ಇದು ರಾಜಕೀಯ ಪರ ವಿರೋಧ ಚರ್ಚೆಗೂ ವೇದಿಕೆಯಾಗಿತ್ತು. ಈ ಎಲ್ಲ ಬೆಳವಣಿಗೆಯ ನಡುವೆಯೇ ಕೇಂದ್ರ ಸರ್ಕಾರವು ‘ಭಾರತ್ ರೈಸ್’ ಎಂಬ ಹೆಸರಿನಲ್ಲಿ ಅಕ್ಕಿಯೊಂದನ್ನು ಬಿಡುಗಡೆ ಮಾಡಿತ್ತು.
ಈಗ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಕೇಂದ್ರ ಆಹಾರ ನಿಗಮದ ಗೋದಾಮಿನಲ್ಲಿ 18 ಮಿಲಿಯನ್ ಟನ್ ಅಕ್ಕಿ ಕೊಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿಲೇವಾರಿ ಮಾಡಲು ಯೋಜನೆ ಹಾಕಿಕೊಂಡಿರುವ ಬಗ್ಗೆ ‘ದಿ ಮಿಂಟ್’ ಪತ್ರಿಕೆಯು ವರದಿ ಮಾಡಿದೆ.
ಈ ವರದಿಯನ್ನು ಅಸ್ತ್ರವನ್ನಾಗಿಸಿಕೊಂಡಿರುವ ಕಾಂಗ್ರೆಸ್ ಪಕ್ಷವು, ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಸರಣಿ ಪ್ರಶ್ನೆಗಳಿಗೆ ಕೇಳಿದೆ.
ಬಡವರ ಹೊಟ್ಟೆಗೆ ವಂಚಿಸುವುದಕ್ಕಿಂತ ದೊಡ್ಡ ಕ್ರೌರ್ಯ ಇನ್ನೊಂದಿಲ್ಲ.
18 ಮಿಲಿಯನ್ ಟನ್ ಅಕ್ಕಿ ಹುಳು ಹಿಡಿದರೂ ಪರವಾಗಿಲ್ಲ, ಬಡವರ ಹೊಟ್ಟೆಗೆ ಅನ್ನವಾಗಬಾರದು ಎನ್ನುವ ಕೇಂದ್ರ ಸರ್ಕಾರದ ಧೂರ್ತತನಕ್ಕೆ ಜನತೆ ಪಾಠ ಕಲಿಸಲಿದ್ದಾರೆ.
ಅನ್ನಭಾಗ್ಯ ಯೋಜನೆಗಾಗಿ ರಾಜ್ಯ ಸರ್ಕಾರ ಕೆಜಿಗೆ 34 ರೂಪಾಯಿಯಂತೆ ಖರೀದಿಗೆ ಕೇಳಿದರೂ ಕೊಡಲೊಪ್ಪದ ಕೇಂದ್ರ… pic.twitter.com/N15Cc4FaDb
— Karnataka Congress (@INCKarnataka) May 14, 2024
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಐಟಿ ಸೆಲ್, “ಬಡವರ ಹೊಟ್ಟೆಗೆ ವಂಚಿಸುವುದಕ್ಕಿಂತ ದೊಡ್ಡ ಕ್ರೌರ್ಯ ಇನ್ನೊಂದಿಲ್ಲ” ಎಂದು ಕಿಡಿಕಾರಿದೆ.
“18 ಮಿಲಿಯನ್ ಟನ್ ಅಕ್ಕಿ ಹುಳು ಹಿಡಿದರೂ ಪರವಾಗಿಲ್ಲ, ಬಡವರ ಹೊಟ್ಟೆಗೆ ಅನ್ನವಾಗಬಾರದು ಎನ್ನುವ ಕೇಂದ್ರ ಸರ್ಕಾರದ ಧೂರ್ತತನಕ್ಕೆ ಜನತೆ ಪಾಠ ಕಲಿಸಲಿದ್ದಾರೆ. ಅನ್ನಭಾಗ್ಯ ಯೋಜನೆಗಾಗಿ ರಾಜ್ಯ ಸರ್ಕಾರ ಕೆಜಿಗೆ 34 ರೂಪಾಯಿಯಂತೆ ಖರೀದಿಗೆ ಕೇಳಿದರೂ ಕೊಡಲೊಪ್ಪದ ಕೇಂದ್ರ ಸರ್ಕಾರ ಈಗ ಗೋದಾಮುಗಳಲ್ಲಿ ದಾಸ್ತಾನಿರುವ ಅಕ್ಕಿಯನ್ನು ಖಾಲಿ ಮಾಡಲು ಪರದಾಡುತ್ತಿದೆ” ಎಂದು ವರದಿಯನ್ನು ಉಲ್ಲೇಖಿಸಿ ಹೇಳಿದೆ.
ಅಕ್ಕಿ ರಾಜಕೀಯ ಮಾಡಿದ ಕೇಂದ್ರ ಸರ್ಕಾರಕ್ಕೆ ಕೆಲವು ಪ್ರಶ್ನೆಗಳು ಎಂದು ಸರಣಿ ಪ್ರಶ್ನೆಗಳನ್ನು ಕೇಳಿರುವ ಕಾಂಗ್ರೆಸ್, ಉತ್ತರಿಸುವಂತೆ ಆಗ್ರಹಿಸಿದೆ.
“24 ರೂಪಾಯಿಯ ಭಾರತ್ ಅಕ್ಕಿ ಕೇವಲ ಚುನಾವಣಾ ಗಿಮಿಕ್ ಆಗಿ ಉಳಿಯಿತೇ? ಖಾಸಗಿ ಕಂಪೆನಿಗಳೂ ಸಹ ಕೇಂದ್ರ ಆಹಾರ ನಿಗಮದ ಅಕ್ಕಿಯನ್ನು ಖರೀದಿಸಲು ಮುಂದಾಗಲಿಲ್ಲವೇ?” ಎಂದು ಕೇಳಿದೆ.
“ಖಾಲಿ ಮಾಡಲಾಗದಷ್ಟು ಅಕ್ಕಿ ಇದ್ದರೂ ಕನ್ನಡಿಗರಿಗೆ ವಂಚಿಸಿದ್ದೇಕೆ? ನಮ್ಮ ಸರ್ಕಾರ ಕೆಜಿಗೆ ₹34 ಕೊಟ್ಟು ಖರೀದಿಸಿದ್ದಿದ್ದರೆ ಆಹಾರ ನಿಗಮಕ್ಕೆ ಲಾಭವಾಗುತ್ತಿತ್ತು, ಆ ಲಾಭವನ್ನು ತಪ್ಪಿಸಿ ನಷ್ಟಕ್ಕೆ ತಳ್ಳಿದ್ದೇಕೆ? ಕನ್ನಡಿಗರಿಗೆ ಅಕ್ಕಿ ನೀಡದೆ ದ್ರೋಹ ಮಾಡಿದಿರಲ್ಲ,
ಕನ್ನಡಿಗರು ನಿಮಗೆ ಯಾವ ಜನ್ಮದ ಶತ್ರುಗಳು?” ಎಂದು ಕಾಂಗ್ರೆಸ್ ಕೇಳಿದೆ.





