ಕೇರಳದ 1,199 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶವು ಶನಿವಾರ ಪ್ರಕಟವಾಗಿದ್ದು, ವಿಪಕ್ಷ ಯುಡಿಎಫ್ ಕ್ಲೀನ್ ಸ್ವೀಪ್ ಸಾಧಿಸಿದ್ದು, ಆಡಳಿತಾರೂಢ ಎಲ್ಡಿಎಫ್ಗೆ ಹಿನ್ನಡೆಯಾಗಿದೆ. ಈ ನಡುವೆ ಎನ್ಡಿಎ ಕೂಟವು ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೇರುವ ಮೂಲಕ ಇತಿಹಾಸ ಸೃಷ್ಟಿಸಿದೆ.
2026ರ ವಿಧಾನಸಭಾ ಚುನಾವಣೆಗೂ ಮುನ್ನ ನಡೆದಿದ್ದ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸೆಮಿಫೈನಲ್ ಎಂದೇ ಪರಿಗಣಿಸಲಾಗಿತ್ತು. ಈ ‘ಸೆಮಿಫೈನಲ್’ನಲ್ಲಿ ಆಡಳಿತಾರೂಢ ಎಲ್ಡಿಎಫ್ಗೆ ಹಿನ್ನಡೆ ಆಗಿರುವುದು ಆತಂಕಕ್ಕೆ ದೂಡಿದರೆ, ಭರ್ಜರಿ ಜಯ ಗಳಿಸಿರುವ ಯುಡಿಎಫ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ.
ಕೇರಳದಲ್ಲಿ ಆರು ಪಾಲಿಕೆಗಳು, 14 ಜಿಲ್ಲಾ ಪಂಚಾಯತ್ಗಳು, 86 ಪುರಸಭೆಗಳು, 152 ಬ್ಲಾಕ್ ಪಂಚಾಯತ್ಗಳು ಮತ್ತು 941 ಗ್ರಾಮ ಪಂಚಾಯತ್ಗಳಿಗೆ ಡಿಸೆಂಬರ್ 9 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದವು. ಡಿಸೆಂಬರ್ 9 ರಂದು ಮೊದಲ ಹಂತದ ಚುನಾವಣೆಯಲ್ಲಿ ಶೇ. 70.9 ರಷ್ಟು ಮತದಾನವಾಗಿದ್ದರೆ, ಡಿಸೆಂಬರ್ 11 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ. 76.08 ರಷ್ಟು ಮತದಾನ ದಾಖಲಾಗಿದ್ದವು.
ಯುಡಿಎಫ್ (United Democratic Front – UDF) ಕೇರಳದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನೇತೃತ್ವದ ಪ್ರಮುಖ ರಾಜಕೀಯ ಮೈತ್ರಿಕೂಟವಾಗಿದೆ. ಈ ಮೈತ್ರಿಕೂಟದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), ಕೇರಳ ಕಾಂಗ್ರೆಸ್ (ಜೋಸೆಫ್), ಕೇರಳ ಕಾಂಗ್ರೆಸ್ (ಜೇಕಬ್) ಹಾಗೂ ರೆವಲ್ಯೂಷನರಿ ಸೋಷಲಿಸ್ಟ್ ಪಾರ್ಟಿ, ಡೆಮಾಕ್ರಟಿಕ್ ಪಕ್ಷ, ವೆಲ್ಫೇರ್ ಪಾರ್ಟಿ ಜೊತೆಗೆ ಕೆಲವು ಸಣ್ಣಪುಟ್ಟ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಕೈಜೋಡಿಸಿಕೊಂಡಿದ್ದಾರೆ.

ಇನ್ನು ಎಲ್ಡಿಎಫ್(Left Democratic Front – LDF)ನಲ್ಲಿ ಆಡಳಿತಾರೂಢ ಪಕ್ಷವಾಗಿರುವ ಸಿಪಿಐ(ಎಂ) ಪ್ರಮುಖ ಪಕ್ಷವಾಗಿದ್ದು, ಸಿಪಿಐ, ಕೇರಳ ಕಾಂಗ್ರೆಸ್ (ಎಂ), ಇಂಡಿಯನ್ ನ್ಯಾಷನಲ್ ಲೀಗ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಜೊತೆಗೆ ಕೆಲವು ಸಣ್ಣ ಪಕ್ಷಗಳು ಮತ್ತು ಸ್ವತಂತ್ರರು ಕೈಜೋಡಿಸಿಕೊಂಡಿರುವ ಮೈತ್ರಿಕೂಟವಾಗಿದೆ.
ತಿರುವನಂತಪುರಂ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ
ತಿರುವನಂತಪುರಂ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಎನ್ಡಿಎ)ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸದ್ಯ ಕಾಂಗ್ರೆಸ್ ನಾಯಕರ ವಿರೋಧಕ್ಕೆ ಕಾರಣವಾಗಿರುವ ಸಂಸದ ಶಶಿ ತರೂರ್ ತಿರುವನಂತಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
101 ವಾರ್ಡ್ಗಳಲ್ಲಿ 50 ರಲ್ಲಿ ಬಿಜೆಪಿ ಜಯಗಳಿಸಿದೆ. ಈ ಮೂಲಕ ಎಲ್ಡಿಎಫ್ನ 45 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ. ಆಡಳಿತದಲ್ಲಿರುವ ಎಲ್ಡಿಎಫ್ 29 ವಾರ್ಡ್ಗಳಲ್ಲಿ ಜಯಗಳಿಸಿದರೆ ಯುಡಿಎಫ್ ಮೈತ್ರಿಕೂಟ 19 ವಾರ್ಡ್ಗಳಲ್ಲಿ ಮಾತ್ರ ಜಯ ಸಾಧಿಸಿದೆ. ಎರಡು ಕ್ಷೇತ್ರವನ್ನು ಇತರರು ಗೆದ್ದಿದ್ದಾರೆ.
ಆರು ಮಹಾನಗರ ಪಾಲಿಕೆಗಳ ಪೈಕಿ ನಾಲ್ಕರಲ್ಲಿ ಯುಡಿಎಫ್ಗೆ ಜಯ
ಆರು ಮಹಾನಗರ ಪಾಲಿಕೆಗಳ ಪೈಕಿ ನಾಲ್ಕರಲ್ಲಿ ಯುಡಿಎಫ್ ವಿಜೇತರಾಗಿ ಹೊರಹೊಮ್ಮಿದರೆ, ಒಂದು ಎಲ್ಡಿಎಫ್ ಹಾಗೂ ಒಂದು ಎನ್ಡಿಎ ಕೂಟ ಅಧಿಕಾರಕ್ಕೆ ಬಂದಿದೆ. ಕೊಲ್ಲಂ, ಕೊಚ್ಚಿ, ತ್ರಿಶೂರ್ ಮತ್ತು ಕಣ್ಣೂರಿನಲ್ಲಿ ಯುಡಿಎಫ್ ನಿರ್ಣಾಯಕ ಗೆಲುವು ಪಡೆದಿದೆ. ಕೋಝಿಕ್ಕೋಡ್ನಲ್ಲಿ ಮಾತ್ರ ಎಲ್ಡಿಎಫ್ ಜಯಗಳಿಸಿದರೆ, ತಿರುವನಂತಪುರಂ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಬಿದ್ದಿದೆ.
14 ಜಿಲ್ಲಾ ಪಂಚಾಯತ್ಗಳ ಪೈಕಿ 7 ಯುಡಿಎಫ್ಗೆ; 7 ಎಲ್ಡಿಎಫ್ ತೆಕ್ಕೆಗೆ
ಇನ್ನು 14 ಜಿಲ್ಲಾ ಪಂಚಾಯತ್ಗಳಿಗೆ ನಡೆದ ಚುನಾವಣೆಗಳಲ್ಲಿ 7 ಜಿಲ್ಲಾ ಪಂಚಾಯತ್ಗಳಲ್ಲಿ ಯುಡಿಎಫ್ ಅಧಿಕಾರಕ್ಕೇರಿದರೆ, ಆಡಳಿತಾರೂಢ ಎಲ್ಡಿಎಫ್ ತೆಕ್ಕೆಗೆ ಬಿದ್ದಿದೆ.
ಇನ್ನು ರಾಜ್ಯದ 86 ಪುರಸಭೆಗಳ ಪೈಕಿ 54ರಲ್ಲಿ ಯುಡಿಎಫ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದರೆ, 28ರಲ್ಲಿ ಎಲ್ಡಿಎಫ್ ಹಾಗೂ 2 ರಲ್ಲಿ ಎನ್ಡಿಎ ಜಯಗಳಿಸಿದೆ.
152 ಬ್ಲಾಕ್ ಪಂಚಾಯತ್ಗಳ ಪೈಕಿ 78ರಲ್ಲಿ ಯುಡಿಎಫ್, 64ರಲ್ಲಿ ಎಲ್ಡಿಎಫ್ ಜಯಗಳಿಸಿದೆ. ಇನ್ನೂ 10 ಬ್ಲಾಕ್ ಪಂಚಾಯತ್ಗಳ ಅಧಿಕೃತ ಫಲಿತಾಂಶ ಪ್ರಕಟವಾಗಬೇಕಿದೆ. ಇನ್ನುಳಿದಂತೆ 941 ಗ್ರಾಮ ಪಂಚಾಯತ್ಗಳ ಪೈಕಿ ಯುಡಿಎಫ್ 505ರಲ್ಲಿ ಜಯಗಳಿಸಿದರೆ, 341 ಸ್ಥಾನಗಳಲ್ಲಿ ಎಲ್ಡಿಎಫ್ ಜಯಗಳಿಸಿದೆ. 26ರಲ್ಲಿ ಎನ್ಡಿಎ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಉಳಿದಿರುವ ಸ್ಥಾನಗಳ ಅಧಿಕೃತ ಫಲಿತಾಂಶ ಶನಿವಾರ ಸಂಜೆಯೊಳಗೆ ಪ್ರಕಟವಾಗಲಿದೆ.
ತಿರುವನಂತಪುರಂನಲ್ಲಿ ಎನ್ಡಿಎಗೆ ಗೆಲುವು: ಪ್ರಧಾನಿ ಮೋದಿ ಟ್ವೀಟ್
ಎನ್ಡಿಎ ಕೂಟವು ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೇರುವ ಮೂಲಕ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಎನ್ಡಿಎ ಕೂಟಕ್ಕೆ ಮತ ಹಾಕಿದ ಮತದಾರರಿಗೆ ಮಲಯಾಳಂನಲ್ಲೇ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ತಮ್ಮ ಟ್ವೀಟ್ನಲ್ಲಿ, “ತಿರುವನಂತಪುರಂಗೆ ಧನ್ಯವಾದಗಳು. ತಿರುವನಂತಪುರಂ ಕಾರ್ಪೊರೇಷನ್ನಲ್ಲಿ ಬಿಜೆಪಿ-ಎನ್ಡಿಎ ಪಡೆದ ಬಹುಮತವು ಕೇರಳ ರಾಜಕೀಯದಲ್ಲಿ ಒಂದು ಮಹತ್ವದ ಕ್ಷಣವಾಗಿದೆ. ರಾಜ್ಯದ ಅಭಿವೃದ್ಧಿಯ ಆಕಾಂಕ್ಷೆಗಳನ್ನು ನಮ್ಮ ಪಕ್ಷದಿಂದ ಮಾತ್ರ ಪೂರೈಸಲು ಸಾಧ್ಯ ಎಂದು ಜನರಿಗೆ ಖಚಿತವಾಗಿದೆ. ನಮ್ಮ ಪಕ್ಷವು ಈ ನಗರದ ಬೆಳವಣಿಗೆಗೆ ಕೆಲಸ ಮಾಡುತ್ತದೆ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.





