ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಬಳಿಕ ಆಕ್ರೋಶಗೊಂಡ ಪ್ರತಿಭಟನಾಕಾರರ ಗುಂಪು, ಶನಿವಾರ ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ.
ಜಲ್ನಾದಲ್ಲಿ ಮರಾಠ ಮೀಸಲಾತಿಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ಸಂಭವಿಸಿದ್ದು, ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಪೊಲೀಸರು ಲಾಠಿ ಚಾರ್ಜ್ ನಡೆಸಿ, ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಹಿಂಸಾಚಾರದ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಮರಾಠ ಮೀಸಲಾತಿಗೆ ಒತ್ತಾಯಿಸಿ ಶುಕ್ರವಾರ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಇದರ ಪರಿಣಾಮವಾಗಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಶೆಲ್ಗಳನ್ನು ಬಳಸಿದ್ದಾರೆ. ಗಾಯಗೊಂಡ ಜನರನ್ನು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಜಯಂತ್ ಪಾಟೀಲ್ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ.
ಕಳೆದ ಮಂಗಳವಾರದಿಂದ ಮನೋಜ್ ಜಾರಂಗೆ ನೇತೃತ್ವದ ಪ್ರತಿಭಟನಾಕಾರರ ಗುಂಪು, ಮರಾಠ ಸಮುದಾಯದ ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.
360 ಮಂದಿಯ ವಿರುದ್ಧ ಪ್ರಕರಣ
ಶುಕ್ರವಾರದ ಘಟನೆಗೆ ಸಂಬಂಧಿಸಿ ಪೊಲೀಸರು 360ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ 16 ಮಂದಿಯನ್ನು ಗುರುತಿಸಲಾಗಿದ್ದು, ಇವರೆಲ್ಲರೂ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





