ನಿನ್ನೆ(ಫೆ.25) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ (67) ಅವರ ಅಂತಿಮ ಸಂಸ್ಕಾರವು ಸಕಲ ಸರ್ಕಾರಿ ಗೌರವದೊಂದಿಗೆ ಸುರಪುರ ರಾಜ ಮನೆತನದ ಪ್ರಕಾರ ಯಾದಗಿರಿಯಲ್ಲಿ ನೆರವೇರಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ ರಾಜಾ ವೆಂಕಟಪ್ಪನಾಯಕ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಪುಷ್ಪ ಗುಚ್ಛವಿರಿಸಿ ಗೌರವ ಅರ್ಪಿಸಿದರು. ಬಳಿಕ ಕುಟುಂಬಸ್ಥರನ್ನು ಸಂತೈಸಿದರು.
ಮುಖ್ಯಮಂತ್ರಿ @siddaramaiah ಅವರು ರಾಜಾ ವೆಂಕಟಪ್ಪನಾಯಕ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಪುಷ್ಪನಮನ ಸಲ್ಲಿಸಿದರು.
ಸಕಲ ಸರ್ಕಾರಿ ಗೌರವಗಳೊಂದಿಗೆ ರಾಜಾ ವೆಂಕಟಪ್ಪ ನಾಯಕ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. pic.twitter.com/wp8vG4mr7H— CM of Karnataka (@CMofKarnataka) February 26, 2024
ಇದೇ ಸಂದರ್ಭದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪೊಲೀಸ್ ಇಲಾಖೆಯ ವಾದ್ಯ ಮೇಳದಿಂದ ರಾಷ್ಟ್ರ ಗೀತೆ ನುಡಿಸಿ, ಮೂರು ಸುತ್ತು ಕುಶಾಲತೋಪು ಹಾರಿಸುವ ಮೂಲಕ ಹಾಗೂ ಎರಡು ನಿಮಿಷ ಮೌನ ಆಚರಿಸಿ ಅಗಲಿದ ಶಾಸಕನಿಗೆ ಅವರಿಗೆ ಗೌರವ ಅರ್ಪಿಸಲಾಯಿತು.
ಇದನ್ನು ಓದಿದ್ದೀರಾ? ಬದುಕಿನ ಹಾಡು ಮುಗಿಸಿದ ದೇಶದ ಖ್ಯಾತ ಗಝಲ್ ಗಾಯಕ ಪಂಕಜ್ ಉದಾಸ್
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಯುವಸಬಲೀಕರಣ, ಕ್ರೀಡಾ ಸಚಿವ ನಾಗೇಂದ್ರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ರಾಯಚೂರು ಸಂಸದ ರಾಜಾ ಅಮರೇಶ್ವರ್ ನಾಯಕ, ಅಮರೇಶ ಬಯ್ಯಾಪುರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಾ ಕೃಷ್ಣಪ್ಪ ನಾಯಕ, ವಾಲ್ಮೀಕಿ ಶ್ರೀಗಳು, ಐಜಿ ಅಜಯ್ ಹಿಲೋರಿ, ಡಿ.ಸಿ.ಸುಶೀಲಾ.ಬಿ, ಸಿಇಓ ಗರಿಮಾ ಪನ್ವಾರ್, ಎಸ್.ಪಿ.ಸಂಗೀತಾ.ಜಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು, ಗೌರವ ಅರ್ಪಿಸಿದರು.





