“ವಿಜಯಪುರದ ಮುಸ್ಲಿಂ ಧಾರ್ಮಿಕ ಮುಖಂಡ ಸೈಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮಿಯವರನ್ನು ಭಯೋತ್ಪಾದಕರ ಬೆಂಬಲಿಗ, ಸಂಪರ್ಕವಿದೆ ಎಂದು ಆರೋಪಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲು ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಚರ್ಚೆ ನಡೆಸಿದ್ದಾರೆ” ಎಂದು ಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾಹಿತಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರುವ ಅವರು, “ಶಾಸಕ ಯತ್ನಾಳ್ಮೇ ಲೆ ಮಾನನಷ್ಟ ಮೊಕದ್ದಮೆ ಹಾಕಲು ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಚರ್ಚೆ ನಡೆಸಿದ್ದಾರೆ. ಚರ್ಚೆಯ ಬಳಿಕ ನಿರ್ಧಾರ ಹೇಳುತ್ತೇವೆ” ಎಂದು ಸಲೀಂ ಅಹ್ಮದ್ ತಿಳಿಸಿದ್ದಾರೆ.
“ಯತ್ನಾಳ್ ಅವರು ಪ್ರಚಾರಕ್ಕಾಗಿ ಗಾಳಿಯಲ್ಲಿ ಗುಂಡು ಹೊಡೆಯಬಾರದು. ಧರ್ಮಗುರುಗಳ ಮೇಲಿನ ಆಪಾದನೆ ಸಾಬೀತು ಮಾಡಲಿ. ಈ ಬಗ್ಗೆ ತನ್ವೀರ್ ಹಾಶ್ಮಿಯವರು ಕೂಡ ಯತ್ನಾಳ್ ಅವರಿಗೆ ಸವಾಲೆಸೆದಿದ್ದಾರೆ. ಸಿಎಂ ಅವರೊಂದಿಗೆ ವೇದಿಕೆಯಲ್ಲಿ ಯಾರೊಬ್ಬರೂ ಕೂಡ ಉಗ್ರರ ಸಂಪರ್ಕವಿರುವವರಲ್ಲ. ಯತ್ನಾಳ್ ಅವರು ಕೇವಲ ರಾಜಕೀಯಕ್ಕಾಗಿ, ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮುಸ್ಲಿಂ ಧರ್ಮಗುರುಗಳ ಬಗ್ಗೆ ಯತ್ನಾಳ ಹಗುರವಾಗಿ ಮಾತನಾಡಿದ್ದಾರೆ. ಐಸಿಸ್ ನಂಟಿದ್ದವರು ವೇದಿಕೆಯಲ್ಲಿದ್ದರು ಎಂದು ಯತ್ನಾಳ್ ಯಾವ ಸಭೆಯ ಬಗ್ಗೆ ಹೇಳಿದ್ದಾರೋ ಅದರಲ್ಲಿ ನಾನೂ ಇದ್ದೆ. ಅಂತಹ ಯಾವುದೇ ಘಟನೆ ನಡೆದಿಲ್ಲ. ಆ ವೇದಿಕೆಯಲ್ಲಿ ಅಂಥವರು ಯಾರೂ ಕುಳಿತಿರಲಿಲ್ಲ. ಕೀಳುಮಟ್ಟದ ಹೇಳಿಕೆ ಕೊಡುವುದನ್ನು ಯತ್ನಾಳ್ ಮೊದಲು ಬಿಡಬೇಕು” ಎಂದರು.
ಇದೇ ವಿಚಾರದ ಬಗ್ಗೆ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್, “ಯತ್ನಾಳ್ ಮೌಲ್ವಿ ಅವರ ಮೇಲೆ ಸಾಕ್ಷಿ ಸಮೇತ ಆರೋಪ ಮಾಡಬೇಕು. ಸಾಕ್ಷಿ ಇದ್ದರೆ ಮಾತ್ರ ಆರೋಪಕ್ಕೆ ಅರ್ಥ ಬರುತ್ತದೆ. ಕೇಂದ್ರ ಗೃಹ ಸಚಿವರು ಈ ವಿಚಾರದಲ್ಲಿ ಏನು ಕ್ರಮ ಕೈಗೊಳ್ಳುತ್ತಾರೋ ನೋಡೋಣ” ಎಂದರು.
ಹತಾಶೆಯಿಂದ ಯತ್ನಾಳ್‌ರಿಂದ ಸುಳ್ಳು ವಿವಾದ ಸೃಷ್ಟಿ: ಅಂಜುಮನ್ ಸಂಸ್ಥೆ
ಮೌಲವಿ ತನ್ವೀರ್ ಹಾಶ್ಮಿ ಅವರ ಮೇಲೆ ಯತ್ನಾಳ್ ಅವರ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ತಮಟಗಾರ, ಹತಾಶೆಯಿಂದ ಯತ್ನಾಳ್ ಅವರು ಈ ವಿವಾದ ಸೃಷ್ಟಿ ಮಾಡಿದ್ದಾರೆ. ಅವರ ವರ್ತನೆ ಖಂಡನೀಯ” ಎಂದು ತಿಳಿಸಿದ್ದಾರೆ.
“ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅಪಪ್ರಚಾರ ಮಾಡುವುದು, ಧಾರ್ಮಿಕ ವಿವಾದ ಸೃಷ್ಟಿಸುವುದು ಬಿಟ್ಟು ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಅವರು ಜನತಾ ದಳದಲ್ಲಿ ಇದ್ದಾಗ ಮುಸ್ಲಿಮರ ಜತೆ ಓಡಾಡಿಲ್ಲವೇ? ವಿಜಯಪುರದಲ್ಲಿ ನಿಮ್ಮ ಜೊತೆ ಯಾವ ಪೀರಾ ಇದ್ದಾರೆ ಎಲ್ಲವೂ ನಮಗೆ ಗೊತ್ತಿದೆ. ಅವರು ಹತಾಶರಾಗಿದ್ದು, ಧಾರವಾಡದ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಒಳ್ಳೆಯದು” ಎಂದು ಆಕ್ರೋಶ ಹೊರಹಾಕಿದ್ದಾರೆ.





