“ನೂತನ ಸಂಸದರು ಜನರ ಧ್ವನಿಯಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಮಲತಾಯಿ ಧೋರಣೆ ವಿರುದ್ಧ ಧ್ವನಿ ಎತ್ತಬೇಕು. ಯಾರೆಲ್ಲ ಕಾಂಗ್ರೆಸ್‌ಗೆ ಮತ ಹಾಕಿಲ್ಲವೋ, ಅವರ ಮನ ಗೆಲ್ಲುವಂತೆ ರಾಹುಲ್ ಗಾಂಧಿ ಅವರು ಸಲಹೆ ನೀಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರ ಭೇಟಿ ಬಳಿಕ ಶಾಂಗ್ರಿಲಾ ಹೊಟೇಲ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ರಾಹುಲ್ ಗಾಂಧಿ ಅವರು ಕರ್ನಾಟಕದ 28 ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಜತೆ ಚರ್ಚೆ ಮಾಡಿದ್ದಾರೆ. ಲೋಕಸಭೆಗೆ ಆಯ್ಕೆಯಾದ 9 ಸಂಸದರಿಗೆ ಅಭಿನಂದನೆ ಸಲ್ಲಿಸಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಮೊದಲ ಬಾರಿಗೆ ಗೆದ್ದವರು ಕ್ಷೇತ್ರದಿಂದ ದೂರ ಉಳಿಯಬಾರದು. ಬೆಂಗಳೂರು ಹಾಗೂ ದೆಹಲಿಗಿಂತ ಹೆಚ್ಚಾಗಿ ಕ್ಷೇತ್ರದ ಜನರ ಸಂಪರ್ಕದಲ್ಲಿ ಇರಬೇಕು. ನಮ್ಮದೇ ಸರ್ಕಾರ ರಾಜ್ಯದಲ್ಲಿದ್ದು, ಅದರ ನೆರವು ಪಡೆದು ಜನರ ಪರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ” ಎಂದು ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ನೂತನ ಸಂಸದರು ಹಾಗೂ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳನ್ನು ಶ್ರೀ @RahulGandhi ಅವರು ಭೇಟಿಯಾಗಿ ಸಭೆ ನಡೆಸಿದರು. ರಾಜ್ಯ ಹಾಗೂ ದೇಶದ ಅಭಿವೃದ್ಧಿ ದೃಷ್ಟಿಕೋನದಿಂದ ಮುಂದೆ ಕೈಗೊಳ್ಳಬೇಕಿರುವ ಕಾರ್ಯಗಳ ಕುರಿತು ಈ ವೇಳೆ ಚರ್ಚಿಸಲಾಯಿತು. pic.twitter.com/IG5W2kcSkh
— DK Shivakumar (@DKShivakumar) June 7, 2024
“ಈ ಹಿಂದೆ ಇದ್ದ ಸಂಸದರ ಪೈಕಿ ಒಬ್ಬರ ಹೊರತಾಗಿ ಉಳಿದವರು ರಾಜ್ಯದ ಪರವಾಗಿ ಧ್ವನಿ ಎತ್ತಲಿಲ್ಲ. ತೆರಿಗೆ ಅನ್ಯಾಯ, ಕಳಸಾ ಬಂಡೂರಿ, ಮೇಕೆದಾಟು, ಭದ್ರ ಮೇಲ್ದಂಡೆ ಯೋಜನೆ ಅನುದಾನ, ಹಣಕಾಸು ಆಯೋಗದ ಅನುದಾನ, ಫೆರಿಫೆರಲ್ ರಿಂಗ್ ರಸ್ತೆ ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಅನುದಾನ ಹಾಗೂ ಯೋಜನೆಗಳು ಹಾಗೂ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಧ್ವನಿ ಎತ್ತಬೇಕು. ರಾಜ್ಯಕ್ಕೆ ಹಾಗೂ ಮತದಾರರಿಗೆ ನ್ಯಾಯ ಒದಗಿಸಬೇಕು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ” ಎಂದು ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಪರಾಭವಗೊಂಡ ಅಭ್ಯರ್ಥಿಗಳಿಗೂ ಧೈರ್ಯ ತುಂಬಿದ ರಾಹುಲ್ ಗಾಂಧಿ ಅವರು, ನೀವು ಸೋತರೂ ಜನರ ಮಧ್ಯೆ ಇರಬೇಕು ಹಾಗೂ ನಮಗೆ ಮತ ನೀಡದವರ ಹೃದಯ ಗೆಲ್ಲಬೇಕು ಎಂದು ರಾಹುಲ್ ಗಾಂಧಿ ಅವರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ನಂತರ ಕೆಲ ಸಚಿವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಅವರು, ಸಚಿವರ ಕ್ಷೇತ್ರದಲ್ಲಿ ಚುನಾವಣೆ ಫಲಿತಾಂಶ ಏನಾಯಿತು ಎಂದು ಚರ್ಚೆ ಮಾಡಿದರು. ರಾಜ್ಯದಲ್ಲಿ ಇನ್ನು 5-6 ಸೀಟುಗಳ ನಿರೀಕ್ಷೆ ಇತ್ತು. ಎಲ್ಲರ ಮೇಲೂ ಹೊಣೆಗಾರಿಕೆ ಇರಬೇಕು. ಎಲ್ಲೆಲ್ಲಿ ಹಿನ್ನಡೆಯಾಗಿದೆ ಅಲ್ಲಿ ಸರಿಪಡಿಸಿಕೊಳ್ಳಬೇಕು. ಮತ್ತೆ ಜನರ ಬಳಿಗೆ ಹೋಗಬೇಕು ಎಂದು ಜವಾಬ್ದಾರಿ ನೀಡಿದ್ದಾರೆ ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಿಮ್ಮ ತಂತ್ರಗಾರಿಕೆ ವಿಫಲವಾಗಿದ್ದೇಕೆ ಎಂಬ ವಿಚಾರವಾಗಿ ಕೇಳಿದಾಗ, “ನಾನು ಅತಿಯಾದ ಆತ್ಮವಿಶ್ವಾಸದಲ್ಲಿದ್ದೆ. ನಾನು ರಾಜ್ಯ ಸುತ್ತಬೇಕಾದ ಕಾರಣ ಹೆಚ್ಚು ಸಮಯ ಮೀಸಲಿಡಲು ಆಗಿಲ್ಲ. ಇದು ನನ್ನ ವೈಯಕ್ತಿಕ ಸೋಲು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಅವರು ಕೂಡ ವಿವಾದರಹಿತ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಉತ್ತಮ ತಂತ್ರಗಾರಿಕೆ ಮಾಡಿದ್ದಾರೆ. ದಳದಲ್ಲಿ ನಿಂತರೆ ಮತ ಬರುವುದಿಲ್ಲ ಎಂದು ಬಿಜೆಪಿಯಿಂದ ಟಿಕೆಟ್ ನೀಡಲಾಯಿತು. ನಮ್ಮ ಅಭ್ಯರ್ಥಿ ವಿರುದ್ಧ ಆಡಳಿತ ವಿರೋಧಿ ಅಲೆ ಇರಲಿಲ್ಲ. ಸೋಲು ಸೋಲೇ. ಅದನ್ನು ಒಪ್ಪಿಕೊಳ್ಳುತ್ತೇವೆ. ಕನಕಪುರದಲ್ಲಿ 50-60 ಸಾವಿರ ಮುನ್ನಡೆ ಪಡೆಯುವ ನಿರೀಕ್ಷೆಯಿತ್ತು. ಮಾಗಡಿ, ಕುಣಿಗಲ್, ರಾಮನಗರದಲ್ಲಿ ನಮಗೆ ಮತ ಬಂದಿವೆ. ನಮಗೆ ಪೆಟ್ಟು ಬಿದ್ದಿದ್ದು ನಗರ ಪ್ರದೇಶದಲ್ಲಿ” ಎಂದರು.
ಎನ್ ಡಿಎ ಮೈತ್ರಿ ಪಕ್ಷಗಳು ಬೇಡಿಕೆ ಹೆಚ್ಚುತ್ತಿದ್ದು, ಮೋದಿ ಅವರು ಪ್ರಧಾನಮಂತ್ರಿಗಳಾಗಿ ಎಷ್ಟು ವರ್ಷ ಇರುತ್ತಾರೆ ಎಂದು ಕೇಳಿದಾಗ, “ಒಂದು ಸಂಸದ ಸ್ಥಾನ ಗೆದ್ದವರೇ ನಮ್ಮ ಕ್ಷೇತ್ರಕ್ಕೆ ಇಂತಹ ಸೌಲಭ್ಯಬೇಕು ಎಂದು ಕೇಳುತ್ತಾರೆ. ಸರ್ಕಾರ ರಚಿಸಲು ಬೆಂಬಲಿಸುವವರು ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲರೂ ಸಿಂಹಪಾಲು ಬೇಕು ಎಂದು ಕೇಳುತ್ತಾರೆ. ರಾಜಕೀಯದಲ್ಲಿ ಅವರು ತಮ್ಮ ಸಂಖ್ಯೆ ಅನುಸಾರ ಬೇಡಿಕೆ ಇಡುತ್ತಾರೆ” ಎಂದರು.
ಇದನ್ನು ಓದಿದ್ದೀರಾ? ಮೋದಿಯ ಕೈಬಿಟ್ಟ ಶ್ರೀರಾಮ-ಹನುಮ; ಕೈ ಹಿಡಿದದ್ದು ಸಂವಿಧಾನ
ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರಾಗುತ್ತಾರಾ ಎಂದು ಕೇಳಿದಾಗ, “ಇಡೀ ದೇಶ ರಾಹುಲ್ ಗಾಂಧಿ ಅವರನ್ನು ಕೇವಲ ವಿರೋಧ ಪಕ್ಷದ ನಾಯಕ ಮಾತ್ರವಲ್ಲ ಪ್ರಧಾನಮಂತ್ರಿಯಾಗಿ ನೋಡಲು ಬಯಸುತ್ತಿದೆ. ಸಧ್ಯಕ್ಕೆ ಅವರು ವಿರೋಧ ಪಕ್ಷದ ನಾಯಕರಾಗಲಿ ಎಂದು ಬಯಸುತ್ತಿದ್ದೇವೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.





