ಮಹಾರಾಷ್ಟ್ರದ ‘ಅಜಿತ್ ಪವಾರ್ ಬಣವೇ ನಿಜವಾದ ಎನ್ಸಿಪಿ’ ಎಂದು ನಿನ್ನೆ ಚುನಾವಣಾ ಆಯೋಗವು ತಿಳಿಸಿದ ಬಳಿಕ ಶರದ್ ಪವಾರ್ ಬಣಕ್ಕೆ ಚುನಾವಣಾ ಆಯೋಗವು ಹೊಸ ಹೆಸರು ನೀಡಿರುವುದಾಗಿ ವರದಿಯಾಗಿದೆ.
ನೂತನ ಹೆಸರಾಗಿ ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶರದ್ ಚಂದ್ರ ಪವಾರ್’ ಎಂದು ಶರದ್ ಪವಾರ್ ಅವರ ಬಣಕ್ಕೆ ನೀಡಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ತಾವೇ ಕಟ್ಟಿ ಬೆಳೆಸಿದ್ದ ಎನ್ಸಿಪಿ ಪಕ್ಷದ ಚಿಹ್ನೆಯಾದ ಗಡಿಯಾರ ಹಾಗೂ ಎನ್ಸಿಪಿ ಹೆಸರನ್ನು ಕಳೆದುಕೊಂಡಿದ್ದ ಹಿರಿಯ ರಾಜಕಾರಣಿ ಶರದ್ ಪವಾರ್, ಈಗ ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶರತ್ಚಂದ್ರ ಪವಾರ್’ ಎಂಬ ಹೆಸರಿನ ಪಕ್ಷಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಹೊಸ ಪಕ್ಷ ರಚನೆಗೆ ಮೂರು ಹೆಸರುಗಳನ್ನು ನೀಡುವಂತೆ ಚುನಾವಣಾ ಆಯೋಗವು ನಿನ್ನೆ ಶರದ್ ಪವಾರ್ ಅವರನ್ನು ಕೇಳಿದ್ದು, ಆ ಹೆಸರುಗಳನ್ನು ಬುಧವಾರ ಮಧ್ಯಾಹ್ನ 3 ಗಂಟೆಯೊಳಗೆ ಆಯೋಗಕ್ಕೆ ತಿಳಿಸಬೇಕು ಎಂದು ಸೂಚಿಸಿತ್ತು.
ಚುನಾವಣಾ ಆಯೋಗವು, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶರದ್ ಚಂದ್ರ ಪವಾರ್, ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶರದ್ ರಾವ್ ಪವಾರ್, ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶರದ್ ಪವಾರ್’ ಎಂಬ ಮೂರು ಹೆಸರಲ್ಲಿ ಒಂದನ್ನು ಆಯ್ಕೆ ಮಾಡುವಂತೆ ತಿಳಿಸಿತ್ತು. ಈ ಮೂರು ಹೆಸರುಗಳ ಪೈಕಿ ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶರದ್ ಚಂದ್ರ ಪವಾರ್’ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಎಂದು ವರದಿಯಾಗಿದೆ.
ಮತ್ತೊಂದೆಡೆ, ಶರದ್ ಪವಾರ್ ಉದಯ ಸೂರ್ಯನ ಚಿಹ್ನೆಯನ್ನು ಚುನಾವಣಾ ಚಿಹ್ನೆಯಾಗಿ ಪರಿಗಣಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತವೆ. ಆದರೆ ಅದು ಇನ್ನೂ ಅಧಿಕೃತವಾಗಿಲ್ಲ ಎಂದು ತಿಳಿದುಬಂದಿದೆ.
ಎನ್ಸಿಪಿಯ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಬಳಸಲು ಅಜಿತ್ ಪವಾರ್ ಬಣಕ್ಕೆ ಹಕ್ಕಿದೆ ಎಂದು ಚುನಾವಣಾ ಆಯೋಗ ಹೇಳಿತ್ತು. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ಅವರು ತಾವೇ ಕಟ್ಟಿ ಬೆಳೆಸಿದ್ದ ಎನ್ಸಿಪಿ ಪಕ್ಷದ ಚಿಹ್ನೆಯಾದ ಗಡಿಯಾರ ಹಾಗೂ ಎನ್ಸಿಪಿ ಹೆಸರನ್ನು ಕಳೆದುಕೊಂಡಿದ್ದರು.
ಇದನ್ನು ಓದಿದ್ದೀರಾ? ‘ಅಜಿತ್ ಪವಾರ್ ಬಣವೇ ನಿಜವಾದ ಎನ್ಸಿಪಿ’ ಎಂದ ಚುನಾವಣಾ ಆಯೋಗ: ‘ಗಡಿಯಾರ’ ಕಳಕೊಂಡ ಶರದ್ ಪವಾರ್
2023ರ ಜುಲೈನಲ್ಲಿ ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ನೇತೃತ್ವದ ಒಂದು ವಿಭಾಗವು ಆಗಿನ ಪಕ್ಷದ ವರಿಷ್ಠ ಶರದ್ ಪವಾರ್ ಜೊತೆಗಿನ ಸಂಬಂಧ ಮುರಿದು ಬಿಜೆಪಿ-ಶಿವಸೇನಾ (ಏಕನಾಥ್ ಶಿಂಧೆ) ಮೈತ್ರಿಯೊಂದಿಗೆ ಕೈಜೋಡಿಸಿದ ನಂತರ ಎನ್ಸಿಪಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ದಿಡೀರ್ ಬೆಳವಣಿಗೆಯಲ್ಲಿ, ಅಜಿತ್ ಪವಾರ್ ಅವರು ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.





