- ಸ್ವಾವಲಂಬಿ ಸಾರಥಿ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಹಿನ್ನೆಲೆ
- ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್
ಕರ್ನಾಟಕ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಲ್ಲದೇ, ದುರುದ್ದೇಶಪೂರ್ವಕವಾಗಿ ಕೋಮು ಪ್ರಚೋದನೆ ನೀಡಿದ್ದ ಹಿನ್ನೆಲೆಯಲ್ಲಿ ‘ಆಜ್ ತಕ್’ನ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಮತ್ತೆ ಮುಂದೂಡಿದೆ.
“ಅರ್ಜಿಗೆ ಸಂಬಂಧಿಸಿದಂತೆ ಅಕ್ಟೋಬರ್ 3 ರಂದು ಸಂಜೆ 4 ಗಂಟೆಗೆ ವಿಚಾರಣೆ ನಡೆಸುತ್ತೇವೆ. ಆರೋಪ ಸಂಬಂಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿ ಆಜ್ ತಕ್ ವಾಹಿನಿ ಮತ್ತು ಅದರ ಪ್ರಧಾನ ಸಂಪಾದಕ ಸುಧೀರ್ ಚೌಧರಿ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬೇಡಿ” ಎಂದು ಮತ್ತೊಮ್ಮೆ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಸರ್ಕಾರಕ್ಕೆ ಸೂಚನೆ ನೀಡಿದೆ. ಆ ಮೂಲಕ ಸುಧೀರ್ ಚೌಧರಿ ಅವರನ್ನು ಬಂಧಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
#SudhirChaudhary case: Karnataka HC adjourns hearing, extends interim protection till October 3 https://t.co/qutkOZ00ft
— Live Law (@LiveLawIndia) September 20, 2023
“ನಿಮ್ಮ ಆಕ್ಷೇಪಣೆಗಳನ್ನು ನೀವು ಸಲ್ಲಿಸಿದ್ದೀರಾ?” ಎಂದು ಸರ್ಕಾರದ ಪರ ವಕೀಲ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿಯವರನ್ನು ಪ್ರಶ್ನಿಸಿದ ಹೈಕೋರ್ಟ್, “ದೂರುದಾರರು ಸಲ್ಲಿಸಿಲ್ಲ. ಆದರೆ ತನಿಖಾಧಿಕಾರಿಯವರು ಇದಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ” ಎಂದು ತಿಳಿಸಿದರು. ಆ ಬಳಿಕ, ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದರು.
ಕಳೆದ ವಾರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ಏಕಸದಸ್ಯ ಪೀಠ, “ವಿಚಾರಣೆ ನಡೆಸಬೇಕಾದ ಪ್ರಾಥಮಿಕ ಪ್ರಕರಣವಿದು. ಸುಧೀರ್ ಚೌಧರಿ ಅವರ ವಿರುದ್ಧ ತನಿಖೆ ನಡೆಸುವ ಅಗತ್ಯತೆ ಹೊರನೋಟಕ್ಕೆ ಗೋಚರಿಸುತ್ತದೆ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಆಜ್ ತಕ್, ಸುಧೀರ್ ಚೌಧರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಎಫ್‌ಐಆರ್ ಅನ್ನು ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ದಾಖಲಿಸಲಾಗಿದೆ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಇತ್ಯಾದಿ). ಒಂದು ವೇಳೆ ಈ ಅಪರಾಧವು ಸಾಬೀತಾದರೆ ಮೂರು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ.
ಏನಿದು ಪ್ರಕರಣ?
ಕರ್ನಾಟಕ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಲ್ಲದೇ, ದುರುದ್ದೇಶಪೂರ್ವಕವಾಗಿ ಕೋಮು ಪ್ರಚೋದನೆ ನೀಡಿದ್ದ ಹಿನ್ನೆಲೆಯಲ್ಲಿ ‘ಆಜ್ ತಕ್’ ವಾಹಿನಿ ಮತ್ತು ಅದರ ಪ್ರಧಾನ ಸಂಪಾದಕ ಸುಧೀರ್ ಚೌಧರಿ ವಿರುದ್ಧ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್ ಶಿವಕುಮಾರ್ ಅವರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಎಫ್ಐಆರ್ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಿಂದ ವಿಡಿಯೋ ‘ಡಿಲೀಟ್’ ಮಾಡಿದ್ದರು.





