“ನಾವು ಗ್ಯಾರಂಟಿಗಳಿಗೆ 60,000 ಕೋಟಿ ಈ ವರ್ಷಕ್ಕೆ ಒದಗಿಸಬೇಕು. ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕೋ ಬೇಡವೋ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಇಂದು ತೋರಣಗಲ್ಲಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಜೆಪಿಯವರು ಗ್ಯಾರಂಟಿಗಳನ್ನು ರದ್ದು ಮಾಡಲು ಹೇಳಲಿ. ಹೇಳುತ್ತಾರೆಯೇ? ಎಂದು ಪ್ರಶ್ನಿಸಿದ ಅವರು, “ಡೀಸೆಲ್ ಪೆಟ್ರೋಲ್ ದರ ಹೆಚ್ಚಳವಾಗಿರುವುದರಿಂದ ವಿರೋಧ ಪಕ್ಷದವರು ಸಾರಿಗೆ ದರಗಳನ್ನು ಹೆಚ್ಚಿಸಲಾಗುತ್ತದೆ” ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಕೆಎಸ್ಆರ್ಟಿಸಿ ಟಿಕೆಟ್ ದರಗಳನ್ನು ಹೆಚ್ಚಿಸುವ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
“ನರೇಂದ್ರ ಮೋದಿಯವರು ಕೇಂದ್ರ ಅಬಕಾರಿ ತೆರಿಗೆ 9.48 ರೂ. ಇದ್ದುದ್ದನ್ನು 32.98 ರೂ.ಗಳಿಗೆ ಏರಿಸಿದರು. ನಾವು ಮಾಡಿದೆವೋ ಅವರು ಹೆಚ್ಚು ಮಾಡಿದರು. ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಒಂದು ಬ್ಯಾರೆಲ್ಗೆ ಕಚ್ಛಾತೈಲಕ್ಕೆ 113 ಡಾಲರ್ ಇತ್ತು, ಈಗ ಎಷ್ಟಾಗಿದೆ ಎಂದು ತಿಳಿದುಕೊಳ್ಳಿ. 2015 ರಲ್ಲಿ 50 ಡಾಲರ್ಗೆ ಇಳಿದಾಗ ಬೆಲೆಯನ್ನು ಕಡಿಮೆ ಮಾಡಿದರೇ? ಒಮ್ಮೆ 27 ಡಾಲರ್ಗೆ ಕಚ್ಛಾತೈಲ ಬೆಲೆ ಇಳಿದಿತ್ತು. ಆಗ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಿದರೆ? ಬಿಜೆಪಿ ಹೆಚ್ಚಿಸಿದರೆ ಮಾಧ್ಯಮದವರು ಸುಮ್ಮನಿರುತ್ತಾರೆ. ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ” ಎಂದು ಹೇಳಿದರು.
“ಆರೋಪಗಳನ್ನು ವಸ್ತುಸ್ಥಿತಿಯ ಮೇಲೆ ಮಾಡಬೇಕು” ಎಂದ ಸಿಎಂ, “ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ ಒಂದು ಲೀಟರ್ ಪೆಟ್ರೋಲ್ ಬೆಲೆ 72 ರೂ.ಗಳಾಗಿತ್ತು. ಇಂದು 102 ರೂ.ಗಳಾಗಲು ಯಾರು ಕಾರಣ. ಒಂದು ಕಡೆ ಕಚ್ಛಾತೈಲದ ಬೆಲೆ ಕಡಿಮೆಯಾಗಿದ್ದರೆ, ಮತ್ತೊಂದೆಡೆ ಪೆಟ್ರೋಲ್ ಬೆಲೆ ಹೆಚ್ಚು ಮಾಡಲಾಗಿದೆ. ಮನ್ಮೋಹನ್ ಸಿಂಗ್ ಅವರು ಇದ್ದಾಗ 103 ಕಚ್ಛಾತೈಲದ ಬೆಲೆ ಡಾಲರ್ ಬೆಲೆ ಇದ್ದಾಗ ಸಹಾಯಧನವನ್ನೂ ನೀಡಿ ಪೆಟ್ರೋಲ್ ಬೆಲೆಯನ್ನೂ ಇಳಿಸಿದ್ದರು. ನರೇಂದ್ರ ಮೋದಿಯವರ ಕಾಲದಲ್ಲಿ ಹೆಚ್ಚಾಗಿದೆ” ಎಂದರು.
ಗಣಿಗಾರಿಕೆಗೆ ಅನುಮತಿ ನೀಡಿರುವ ಬಗ್ಗೆ ಪರಿಶೀಲಿಸಲಾಗುವುದು
ಸಂಡೂರಿನಲ್ಲಿ ಗಣಿಗಾರಿಕೆ ಮಾಡಲು ಪರಿಸರಪ್ರೇಮಿಗಳು ವಿರೋಧ ಮಾಡುತ್ತಿರುವ ಬಗ್ಗೆ ಮಾತನಾಡಿ, “ಕೇಂದ್ರ ಸಚಿವ ಹೆಚ್.ಡಿ .ಕುಮಾರಸ್ವಾಮಿಯವರನ್ನು ಕೇಳಿ. ಒಂದು ಕಾಲದಲ್ಲಿ ಅವರೇ ವಿರೋಧಿಸಿ ಈಗ ಅವರೇ ಗಣಿಗಾರಿಕೆ ಮಾಡಿ ಎನ್ನುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.





