ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಎನ್ ಚಂದ್ರಬಾಬು ನಾಯ್ಡು ಅವರು ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ರಾಜಕೀಯ ಚರ್ಚೆಗೆ ವೇದಿಕೆಯೊದಗಿಸಿದೆ.
ತೆಲಂಗಾಣದ ಮಾಜಿ ರಾಜ್ಯಪಾಲೆ ಹಾಗೂ ಬಿಜೆಪಿ ನಾಯಕಿ ತಮಿಳ್‌ಸೈ ಸೌಂದರರಾಜನ್ ಅವರನ್ನು ವೇದಿಕೆಯಲ್ಲಿಯೇ ಅಮಿತ್ ಶಾ ತರಾಟೆಗೆ ತೆಗೆದುಕೊಳ್ಳುವ ದೃಶ್ಯವೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸಮಾರಂಭದ ವೇಳೆ ವೇದಿಕೆ ಬರುತ್ತಿದ್ದಂತೆಯೇ ತಮಿಳ್‌ಸೈ, ಅಲ್ಲೇ ಕುಳಿತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವೆಂಕಯ್ಯ ನಾಯ್ಡು ಅವರಿಗೆ ವಂದಿಸಿದ್ದಾರೆ. ಪ್ರತಿಯಾಗಿ ವೆಂಕಯ್ಯ ನಾಯ್ಡು ಹಾಗೂ ಅಮಿತ್ ಶಾ ಕೂಡ ವಂದಿಸಿದ್ದಾರೆ.
Looks like some kind of warning for @DrTamilisai4BJP by Home minister @AmitShah ?
We know what she said two days ago. pic.twitter.com/E4iretvMOF
— Sanjeevee sadagopan (@sanjusadagopan) June 12, 2024
ಇದೇ ವೇಳೆ ಮುಂದೆ ಹೋಗುತ್ತಿದ್ದ ತಮಿಳ್‌ಸೈ ಅವರನ್ನು ವಾಪಸ್ ಕರೆದ ಅಮಿತ್ ಶಾ, ಎಚ್ಚರಿಕೆ ನೀಡುತ್ತಿರುವ ದೃಶ್ಯ ಕಂಡುಬಂದಿದೆ. ಈ ಎಚ್ಚರಿಕೆಯನ್ನು ಅಮಿತ್ ಶಾ ಪಕ್ಕದಲ್ಲೇ ಇದ್ದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಜೆಪಿ ನಡ್ಡಾ ಕೂಡ ಸಾಕ್ಷಿಯಾಗಿದ್ದಾರೆ.
ತಮಿಳ್‌ಸೈ ಅವರತ್ತ ತೋರುಬೆರಳು ಆಡಿಸುತ್ತಾ ಅಮಿತ್ ಶಾ ಅವರು ಎಚ್ಚರಿಕೆ ನೀಡಿರುವಂತೆ ಕಾಣಿಸಿದೆ. ಅವರ ಮಾತುಗಳನ್ನು ತಮಿಳ್ ಸೈ ಮೌನವಾಗಿ ಆಲಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯ ಕಂಡ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯ ಸೋಲಿನ ಬಳಿಕ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಹಾಗೂ ತಮಿಳ್‌ಸೈ ನಡುವೆ ಮನಸ್ತಾಪ ಭುಗಿಲೆದ್ದಿದೆ. ಈ ವಿಚಾರವಾಗಿ ಅಮಿತ್ ಶಾ ಅವರು ಮಾಜಿ ರಾಜ್ಯಪಾಲೆಯನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಹಲವು ಮಂದಿ ಅಭಿಪ್ರಾಯಪಟ್ಟಿದ್ದಾರೆ.
Attended the oath taking ceremony of the new Andhra Pradesh Government. Congratulations to Shri @ncbn Garu on becoming the Chief Minister and also to all the others who took oath as Ministers in the Government. The @JaiTDP, @JanaSenaParty and @BJP4Andhra Government is fully… pic.twitter.com/ZCooS5ihIe
— Narendra Modi (@narendramodi) June 12, 2024
“ತಮಿಳ್‌ಸೈ ಅವರಿಗೆ ಅಮಿತ್ ಶಾ ಅವರಿಂದ ಕಠಿಣ ಎಚ್ಚರಿಕೆ ರೀತಿ ಇದು ಕಾಣಿಸುತ್ತಿದೆ. ಆದರೆ ಈ ‘ಸಾರ್ವಜನಿಕ’ ಎಚ್ಚರಿಕೆಗೆ ಕಾರಣ ಏನಿರಬಹುದು? ಅನಗತ್ಯವಾದ ಸಾರ್ವಜನಿಕ ಹೇಳಿಕೆಗಳೇ?” ಎಂದು ತಮಿಳುನಾಡು ಬಿಜೆಪಿ ಸಾಮಾಜಿಕ ಮಾಧ್ಯಮ ಘಟಕದ ಉಪಾಧ್ಯಕ್ಷ ಕಾರ್ತಿಕ್ ಗೋಪಿನಾಥ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
“ಇದು ಯಾವ ರೀತಿಯ ರಾಜಕಾರಣ? ತಮಿಳುನಾಡಿನ ಪ್ರಮುಖ ಮಹಿಳಾ ರಾಜಕಾರಣಿಯನ್ನು ಸಾರ್ವಜನಿಕವಾಗಿ ಬೆದರಿಸುವುದು ಸೂಕ್ತವೇ? ಎಲ್ಲರಿಗೂ ಇದು ಕಾಣಿಸುತ್ತದೆ ಎನ್ನುವುದು ಅಮಿತ್ ಶಾಗೆ ತಿಳಿದಿರಬೇಕಿತ್ತು. ಬಹಳ ಕೆಟ್ಟ ಉದಾಹರಣೆ” ಎಂದು ತಮಿಳುನಾಡಿನ ಡಿಎಂಕೆ ವಕ್ತಾರ ಸರವಣನ್ ಅಣ್ಣಾದುರೈ ಟೀಕಿಸಿದ್ದಾರೆ.
ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಹಾಗೂ ತೆಲಂಗಾಣದ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿರುವ ತಮಿಳ್‌ಸೈ ಸೌಂದರ್‌ರಾಜನ್ ಅವರು, ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿ ತಮಿಳುನಾಡಿನ ಚೆನ್ನೈ ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ 39 ಕ್ಷೇತ್ರದಲ್ಲಿ ಬಿಜೆಪಿಗೆ ಒಂದೂ ಸೀಟು ಸಿಕ್ಕಿರಲಿಲ್ಲ. ಈ ಸೋಲಿಗೆ ಅಣ್ಣಾಮಲೈ ಕಾರಣ ಎಂದು ಪಕ್ಷದ ಒಂದು ಬಣ ಆರೋಪಿಸಿತ್ತು. ಮಾಜಿ ಮಿತ್ರ ಪಕ್ಷ ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದಿದ್ದರೆ, ಪಕ್ಷಕ್ಕೆ ಕೆಲವು ಸೀಟುಗಳಾದರೂ ಸಿಗುತ್ತಿದ್ದವು ಎಂದು ತಮಿಳ್‌ಸೈ ನೀಡಿದ್ದ ಹೇಳಿಕೆ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದನ್ನು ಓದಿದ್ದೀರಾ? ಕುವೈತ್ ಅಗ್ನಿ ದುರಂತದಲ್ಲಿ 40 ಮಂದಿ ಭಾರತೀಯರು ಮೃತ್ಯು; ಉನ್ನತಮಟ್ಟದ ಸಭೆ ಕರೆದ ಪ್ರಧಾನಿ ಮೋದಿ
ಅಲ್ಲದೇ, ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, “ಅಪರಾಧ ಹಿನ್ನೆಲೆಯ ಜನ ಪಕ್ಷದಲ್ಲಿ ಸೇರಿದ್ದಾರೆ” ಎಂದು ತಿಳಿಸಿದ್ದರು. ಅದರ ಬಗ್ಗೆ ಬೇಸರಗೊಂಡಿದ್ದ ಅಮಿತ್ ಶಾ ಅವರು, “ಪಕ್ಷದ ವಿಚಾರಗಳ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡಬಾರದು. ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು” ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.





