ಕೆಲ ದಿನಗಳ ಹಿಂದಷ್ಟೇ ಐಪಿಎಲ್ಗೆ ವಿದಾಯ ಹೇಳಿದ್ದ ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್, ಇದೀಗ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಶನಿವಾರ ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆಗಳಲ್ಲಿ ಈ ನಿರ್ಧಾರವನ್ನು ಘೋಷಿಸುವ ಮೂಲಕ, ನಿವೃತ್ತಿಯನ್ನು ಖಚಿತಪಡಿಸಿದ್ದಾರೆ. ಆ ಮೂಲಕ ತಮ್ಮ ಜನ್ಮದಿನದಂದೇ ನಿವೃತ್ತಿ ನಿರ್ಧಾರ ತಿಳಿಸಿದ್ದಾರೆ.
“ಕಳೆದ ಕೆಲವು ದಿನಗಳಲ್ಲಿ ಪಡೆದ ಪ್ರೀತಿ, ಬೆಂಬಲ ಮತ್ತು ಪ್ರೀತಿಯಿಂದ ಮುಳುಗಿದ್ದೇನೆ. ಈ ಭಾವನೆಯನ್ನು ಸಾಧ್ಯವಾಗಿಸಿದ ಎಲ್ಲ ಅಭಿಮಾನಿಗಳಿಗೆ ತುಂಬಾ ಹೃದಯದ ಕೃತಜ್ಞತೆ ಮತ್ತು ಧನ್ಯವಾದಗಳು. ಸ್ವಲ್ಪ ಸಮಯದವರೆಗೆ ಸಾಕಷ್ಟು ಯೋಚಿಸಿದ ನಂತರ, ನಾನು ಪ್ರತಿನಿಧಿಸಿದ ಕ್ರಿಕೆಟ್ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿದೆ. ಅಧಿಕೃತವಾಗಿ ನಾನು ನಿವೃತ್ತಿಯನ್ನು ಘೋಷಿಸಿದ್ದೇನೆ. ಮುಂದಿನ ದಿನಗಳ ಎದುರಾಗುವ ಸವಾಲುಗಳನ್ನು ಎದುರಿಸಲು ನಾನು ಸಜ್ಜಾಗುತ್ತಿದ್ದೇನೆ,” ಎಂದು ದಿನೇಶ್ ಕಾರ್ತಿಕ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
It’s official 💖
Thanks
DK 🙏🏽 pic.twitter.com/NGVnxAJMQ3— DK (@DineshKarthik) June 1, 2024
“ಈ ಸುದೀರ್ಘ ಪ್ರಯಾಣವನ್ನು ಆಹ್ಲಾದಕರ ಮತ್ತು ಆನಂದದಾಯಕವಾಗಿಸಿದ ಎಲ್ಲಾ ಕೋಚ್ ಗಳು, ನಾಯಕರು, ಆಯ್ಕೆದಾರರು, ತಂಡದ ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಸದಸ್ಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ದೇಶದಲ್ಲಿ ಕ್ರೀಡೆಯನ್ನು ಆಡುವ ಲಕ್ಷಾಂತರ ಜನರಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದ ಕೆಲವೇ ಅದೃಷ್ಟಶಾಲಿಗಳಲ್ಲಿ ನಾನು ಕೂಡ ಒಬ್ಬ ಎಂದು ಪರಿಗಣಿಸುತ್ತೇನೆ ಮತ್ತು ಇನ್ನೂ ಅನೇಕ ಅಭಿಮಾನಿಗಳು ಮತ್ತು ಸ್ನೇಹಿತರ ಅಭಿಮಾನವನ್ನು ಗಳಿಸಿದ ಅದೃಷ್ಟಶಾಲಿ” ಎಂದು ಬರೆದುಕೊಂಡಿದ್ದಾರೆ.
“ಈ ಎಲ್ಲ ವರ್ಷಗಳಲ್ಲಿ ನನ್ನ ಹೆತ್ತವರು ಶಕ್ತಿ ಮತ್ತು ಬೆಂಬಲದ ಆಧಾರ ಸ್ತಂಭವಾಗಿದ್ದರು. ಅವರ ಆಶೀರ್ವಾದವಿಲ್ಲದೆ ಇಲ್ಲಿಯವರೆಗೂ ಬರಲು ಆಗುತ್ತಿರಲಿಲ್ಲ. ನನ್ನ ಜೀವನದ ಪಯಣದಲ್ಲಿ ಜೊತೆಯಾದ ವೃತ್ತಿಪರ ಕ್ರೀಡಾಪಟು ದೀಪಿಕಾ ಪಲ್ಲಿಕಲ್ ಅವರಿಗೆ ಸಾಕಷ್ಟು ಋಣಿಯಾಗಿದ್ದೇನೆ. ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮ ಬೆಂಬಲ ಮತ್ತು ಶುಭ ಹಾರೈಕೆಗಳಿಲ್ಲದೆ ಕ್ರಿಕೆಟ್ ಮತ್ತು ಕ್ರಿಕೆಟಿಗರು ಬೆಳೆಯಲು ಸಾಧ್ಯವಾಗಲ್ಲ” ಎಂದು ಅವರು ಭಾವನೆಗಳನ್ನು ಹಂಚಿಕೊಂಡಿದ್ದಾರೆ.
19ನೇ ವಯಸ್ಸಿನಲ್ಲಿ ಅಂದರೆ 2004ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಪದಾರ್ಪಣೆ ಮಾಡಿದ್ದ ದಿನೇಶ್ ಕಾರ್ತಿಕ್, 94 ಏಕದಿನ ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ ಅವರು 9 ಅರ್ಧಶತಕಗಳೊಂದಿಗೆ 1,792 ರನ್ ಗಳಿಸಿದ್ದಾರೆ. ಟೆಸ್ಟ್ನಲ್ಲಿ 42 ಇನ್ನಿಂಗ್ಸ್ ಆಡಿ ಅವರು ಒಂದು ಶತಕದೊಂದಿಗೆ 1,025 ರನ್ ಗಳಿಸಿದ್ದಾರೆ. ಇನ್ನು 60 ಟಿ-20 ಪಂದ್ಯಗಳನ್ನು ಆಡಿ 686 ರನ್ ಗಳಿಸಿದ್ದಾರೆ.
ಒಟ್ಟು ಎಲ್ಲ ಮಾದರಿಯ ಕ್ರಿಕೆಟ್ನ 180 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್, ಒಟ್ಟು 3463 ರನ್ ಗಳಿಸಿದ್ದಾರೆ. ಈ ಪೈಕಿ ಒಂದು ಟೆಸ್ಟ್ ಶತಕ ಹಾಗೂ 17 ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ: ಉಗ್ರರಿಂದ ದಾಳಿ ಬೆದರಿಕೆ, ನ್ಯೂಯಾರ್ಕ್ನಲ್ಲಿ ಭದ್ರತೆ ಹೆಚ್ಚಳ
ದೇಶೀಯ ಕ್ರಿಕೆಟ್ನಲ್ಲೂ ಅವರು ಛಾಪು ಮೂಡಿಸಿದ್ದ ಡಿಕೆ, ಸೈಯದ್ ಮುಷ್ತಾಕ್ ಅಲಿ, ರಣಜಿಯಲ್ಲೂ ಅವರು ಆಡಿದ್ದಾರೆ. ಅವರ ನಾಯಕತ್ವದಲ್ಲಿಯೇ ತಮಿಳುನಾಡು ತಂಡವು ಎರಡು ಬಾರಿ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿತ್ತು.





