ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರ ಸ್ಪಿನ್ ಮಾಂತ್ರಿಕತೆಗೆ ಬೆನ್ ಸ್ಟೋಕ್ಸ್ ನೇತೃತ್ವದ ಆಂಗ್ಲರ ಬಳಗ 2ನೇ ಇನ್ನಿಂಗ್ಸ್ನಲ್ಲಿ ಕೇವಲ 192 ರನ್ಗಳಿಗೆ ಆಲೌಟ್ ಆಗಿದೆ.
ನಾಲ್ಕನೇ ದಿನದಾಟವನ್ನು ಆರಂಭಿಸಿದ್ದ ಇಂಗ್ಲೆಂಡ್ಗೆ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಆರಂಭದಲ್ಲಿಯೇ ಆಘಾತ ನೀಡಿದ್ದರು. ಇಂಗ್ಲೆಂಡ್ ಬ್ಯಾಟರ್ಗಳನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಬಿಡದೆ ವಿಕೆಟ್ ಪಡೆಯುವ ಮೂಲಕ ಜೊತೆಯಾಟ ನಡೆಯದಂತೆ ನೋಡಿಕೊಂಡರು.
2ನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಪರವಾಗಿ ಉತ್ತಮ ಬೌಲಿಂಗ್ ದಾಳಿ ನಡೆಸಿದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೇವಲ 22 ರನ್ ನೀಡಿ ಜೋ ರೂಟ್, ಸ್ಟೋಕ್ಸ್ ಸೇರಿದಂತೆ ನಾಲ್ಕು ಪ್ರಮುಖ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಉಳಿದಂತೆ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದರೆ, ಆಕಾಶ್ ದೀಪ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಒಂದೊಂದು ವಿಕೆಟ್ ಗಳಿಸಿದರು.
ಇಂಗ್ಲೆಂಡ್ ಪರವಾಗಿ ಬ್ಯಾಟಿಂಗ್ನಲ್ಲಿ ಜೋ ರೂಟ್ 40 ಹಾಗೂ ನಾಯಕ ಬೆನ್ ಸ್ಟೋಕ್ಸ್ 33 ಗಳಿಸಿ ಅತ್ಯಧಿಕ ಸ್ಕೋರರ್ ಎನಿಸಿದರು.
ಪಂದ್ಯ ಮುಗಿಯಲು ಇನ್ನೂ ಒಂದು ದಿನ ಬಾಕಿ ಇದ್ದು, ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ 193 ರನ್ ಗಳಿಸಬೇಕಿದೆ.





