- ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂಬವನ್ನು 7 ಗಂಟೆ ಸತಾಯಿಸಿದ ಏರ್ ಇಂಡಿಯಾ ಅಧಿಕಾರಿಗಳು!
- ಅ.5ರ ಶನಿವಾರದಂದು ಕುಸಿದುಬಿದ್ದು ಮೃತಪಟ್ಟಿದ್ದ ಮಂಡ್ಯದ ಯುವಕ ಅಬೂಬಕ್ಕರ್
ಉದ್ಯೋಗದ ನಿಮಿತ್ತ ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಗೆ ತೆರಳಿದ್ದ ಮಂಡ್ಯದ ಯುವಕ ಅಬೂಬಕ್ಕರ್ ಅವರು ಕಳೆದ ಅಕ್ಟೋಬರ್ 5ರ ಶನಿವಾರ ಕುಸಿದು ಬಿದ್ದು ಮೃತಪಟ್ಟಿದ್ದರು. ಅವರ ಮೃತದೇಹವನ್ನು ಊರಿಗೆ ತಲುಪಿಸುವ ಕಾರ್ಯವು SKSSF ಅಬುಧಾಬಿ ಕರ್ನಾಟಕ ಸಮಿತಿಯ ಅವಿರತ ಶ್ರಮದಿಂದ ಸಫಲವಾಯಿತು.
ಮಂಡ್ಯ ತಾಲೂಕಿನ ಗೂಬೆ ಹಳ್ಳದ ನಿವಾಸಿ ಅಬೂಬಕ್ಕರ್ (30) ಅಬುಧಾಬಿಯ ಕೆಫೆಯೊಂದರಲ್ಲಿ ಕೆಲಸದ ನಿಮಿತ್ತ ಕಳೆ ಅಕ್ಟೋಬರ್ 1ರಂದು ತೆರಳಿದ್ದರು. ಅ.5ರ ಶನಿವಾರ ಸಂಜೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಫೆಯಿಂದ ರೂಮಿಗೆ ತೆರಳಿದ್ದರು. ಮರಳಿ ಕೆಲಸಕ್ಕೆಂದು ಕೆಫೆಗೆ ಬರುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಕುಸಿದುಬಿದ್ದು ಮೃತಪಟ್ಟಿದ್ದರು.
SKSSF ಅಬುಧಾಬಿ ಕರ್ನಾಟಕ ಸಮಿತಿಯ ಸ್ವಯಂ ಸೇವಕರು, ಮೃತರ ಸಂಪೂರ್ಣ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳ ನೆರವಿನಿಂದ ಮೃತದೇಹವನ್ನು ವಾರದೊಳಗೆ ಸ್ವಂತ ಊರಿಗೆ ಕಳುಹಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಅ.11ರ ಶನಿವಾರ ಬೆಳಗ್ಗೆ ಅಬುಧಾಬಿಯಿಂದ ಮುಂಬೈಗೆ ಕನೆಕ್ಟಿಂಗ್ ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸುವಲ್ಲಿ ಸಫಲರಾದರು.
ಈ ಸಂದರ್ಭದಲ್ಲಿ SKSSF ಅಬುಧಾಬಿ ಕರ್ನಾಟಕ ಸಮಿತಿಯ ಮುಖಂಡರಾದ ಸಾಹೀರ್ ಹುದವಿ ಚಿಕ್ಕಮಗಳೂರು, ಬಶೀರ್ ಕೊಡ್ಲಿಪೇಟೆ, ಝೈನ್ ಸಖಾಫಿ, ಕೆಎಂಸಿಸಿ ಅಬುಧಾಬಿ ಮುಖಂಡರಾದ ಶಿಹಾಬ್ ಕಾಸರಗೋಡು, ಅನೀಸ್ ಮಾಂಗಾಡ್, ಪಿ.ಸಿ.ಅಬೂಬಕರ್ ಹಾಗೂ SKSSF ಯುಎಇ ಕರ್ನಾಟಕ ಮುಖಂಡರಾದ ಯಾಹ್ಯಾ ಕೊಡ್ಲಿಪೇಟೆ, ಯೂಸುಫ್ ಈಶ್ವರಮಂಗಿಲ ಸೇರಿದಂತೆ ಹಲವು ಸ್ವಯಂ ಸೇವಕರು ನೆರವಾಗಿದ್ದರು.

ಈ ದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ SKSSF ಯುಎಇ ಕರ್ನಾಟಕ ಮುಖಂಡರಾದ ಯಹ್ಯಾ ಕೊಡ್ಲಿಪೇಟೆ, “ಅಬೂಬಕ್ಕರ್ ಅವರ ಕುಟುಂಬ, ಸ್ನೇಹಿತರು, ಪರಿಚಯಸ್ಥರನ್ನು ಸಂಪರ್ಕಿಸಿ ಎಲ್ಲ ದಾಖಲೆಗಳನ್ನು ಸಂಗ್ರಹಿಸಿದೆವು. ಆ ಬಳಿಕ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ನೆರವಿನಿಂದ ಅಬೂಬಕ್ಕರ್ ಮಂಡ್ಯ ಅವರ ಮೃತದೇಹವನ್ನು ವಾರದೊಳಗೆ ಊರಿಗೆ ಕಳುಹಿಸುವ ಪ್ರಕ್ರಿಯೆ ಪೂರ್ಣವಾಯಿತು. ಇದಕ್ಕೆ ತಗುಲುವ ಎಲ್ಲ ಖರ್ಚು ವೆಚ್ಚವನ್ನು ರಾಯಭಾರ ಕಚೇರಿಯೇ ನೋಡಿಕೊಂಡಿತು. ಅದಕ್ಕಾಗಿ ಅಧಿಕಾರಿಗಳಿಗೆ ಅನಿವಾಸಿ ಕನ್ನಡಿಗರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ” ಎಂದು ತಿಳಿಸಿದರು.
ಕುಟುಂಬವನ್ನು 7 ಗಂಟೆ ಸತಾಯಿಸಿದ ಏರ್ ಇಂಡಿಯಾ ಅಧಿಕಾರಿಗಳು!
ಅಬುಧಾಬಿಯಿಂದ ವಿಮಾನದ ಮೂಲಕ ಶನಿವಾರ ಬೆಳಗ್ಗೆ ಮುಂಬೈಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮೃತದೇಹವು ಮಧ್ಯಾಹ್ನ 1ರ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತ್ತು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಬೂಬಕ್ಕರ್ ಅವರ ಕುಟುಂಬವನ್ನು ಏರ್ ಇಂಡಿಯಾ ಅಧಿಕಾರಿಗಳು ಸುಮಾರು ಏಳು ಗಂಟೆಗಳ ಕಾಲ ಕಾಯಿಸಿ, ಸತಾಯಿಸಿರುವ ವಿಚಾರ ತಿಳಿದುಬಂದಿದೆ.
‘ಕ್ಲೀಯರೆನ್ಸ್ ಸಿಕ್ಕಿಲ್ಲ, ದಾಖಲೆಗಳು ಸರಿ ಇಲ್ಲ’ ಎಂಬ ನೆಪವೊಡ್ಡಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಡಿಯಾದ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಸತಾಯಿಸಿರುವುದಾಗಿ ಅಬೂಬಕ್ಕರ್ ಕುಟುಂಬ ಆರೋಪಿಸಿದೆ.

ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ಮಂಡ್ಯದ ಅಬೂಬಕ್ಕರ್ ಅವರ ಸಹೋದರ ಮುಸ್ತಫಾ, “ಅ.1ರ ಬುಧವಾರ ನನ್ನ ಸಹೋದರ ಅಬುಧಾಬಿಗೆ ಕೆಲಸಕ್ಕೆಂದು ತೆರಳಿದ್ದರು. ಅ.5ರ ಶನಿವಾರ ಕುಸಿದುಬಿದ್ದು ಮೃತಪಟ್ಟಿದ್ದ. ಅವತ್ತೇ ನಮ್ಮ ಕುಟುಂಬಕ್ಕೆ ಮಾಹಿತಿ ದೊರಕಿತ್ತು. ಹಲವರ ಶ್ರಮದಿಂದ ಮೃತದೇಹ ಊರಿಗೆ ಬರುವಂತಾಯಿತು. ಅಬುಧಾಬಿಯಿಂದ ಬರುವಾಗ ಎಲ್ಲ ದಾಖಲೆಗಳು ಸರಿಯಾಗಿತ್ತು. ಶನಿವಾರ ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೃತದೇಹ ತಲುಪಿತ್ತು. ಆದರೆ, ಏರ್ ಇಂಡಿಯಾದ ಅಧಿಕಾರಿಗಳು, ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ನೆಪವೊಡ್ಡಿ ನಮ್ಮನ್ನು ಏಳು ಗಂಟೆ ಸತಾಯಿಸಿದ್ರು. ಕೊನೆಗೆ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಅವರು ಕರೆ ಮಾಡಿ, ಅಧಿಕಾರಿಗಳೊಂದಿಗೆ ಮಾತನಾಡಿದ ಬಳಿಕ ರಾತ್ರಿ 8 ಗಂಟೆಗೆ ಮೃತದೇಹವನ್ನು ಬಿಟ್ಟುಕೊಟ್ಟರು. ಏರ್ ಇಂಡಿಯಾ ವಿಮಾನದ ಅಧಿಕಾರಿಗಳ ನಡೆ ತುಂಬಾ ಬೇಸರ ತರಿಸಿತು” ಎಂದು ತಮ್ಮ ನೋವನ್ನು ತೋಡಿಕೊಂಡರು.

“ಮಧ್ಯಾಹ್ನ 1 ಗಂಟೆಗೆ ಸಹೋದರನ ಮೃತದೇಹ ಸಿಗುವ ನಂಬಿಕೆಯಿಂದ ಸಂಜೆ 6 ಗಂಟೆಗೆ ಅಂತ್ಯ ಸಂಸ್ಕಾರ ನಡೆಸುವ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿದ್ದೆವು. ಹೀಗಾಗಿ, ಹಲವಾರು ಮಂದಿ ನಮ್ಮ ಮನೆಗೆ ಬಂದಿದ್ದರು. ಏರ್ ಇಂಡಿಯಾ ಅಧಿಕಾರಿಗಳ ನಡೆಯಿಂದಾಗಿ ಮಧ್ಯಾಹ್ನ 1 ಗಂಟೆಗೆ ತಲುಪಿದ್ದ ಮೃತದೇಹವು ನಮಗೆ ಸಿಗುವಾಗ ರಾತ್ರಿ 8 ಗಂಟೆಯಾಗಿತ್ತು. ಆ ಬಳಿಕ ಬೆಂಗಳೂರಿನಿಂದ ಮಂಡ್ಯಕ್ಕೆ ತಲುಪುವಾಗ ರಾತ್ರಿ 10.30 ಆಗಿತ್ತು. ಅಂತ್ಯ ಸಂಸ್ಕಾರವನ್ನು ಮಂಡ್ಯದ ಮುಸ್ಲಿಂ ಬ್ಲಾಕ್ನಲ್ಲಿರುವ ಈದ್ಗಾದಲ್ಲಿ ನಡೆಸಿದೆವು. ಅಂತ್ಯ ಸಂಸ್ಕಾರ ಕ್ರಿಯೆ ಮುಗಿಯುವಾಗ ರಾತ್ರಿ 12.30 ಕಳೆದಿತ್ತು. ಏರ್ ಇಂಡಿಯಾದ ಅಧಿಕಾರಿಗಳ ನಡೆಯಿಂದಾಗಿ ಎಲ್ಲವೂ ತಡವಾಗಿ ನಡೆಯಿತು. 7 ಗಂಟೆ ತಡವಾಗಿ ಎಲ್ಲ ಕ್ರಿಯೆ ಆರಂಭವಾಗಿದ್ದರಿಂದ ಸಹೋದರನ ಮೃತದೇಹವನ್ನು ನೋಡಲೆಂದು ಬಂದಿದ್ದ ಹಲವು ಮಂದಿ, ಮೃತದೇಹ ನೋಡೋದಕ್ಕೆ ಸಿಗದ್ದರಿಂದ ಹಿಂದಿರುಗಿ ಹೋಗಬೇಕಾಯಿತು. ಅಧಿಕಾರಿಗಳಿಗೆ ಕನಿಷ್ಠ ಮಾನವೀಯ ಪ್ರಜ್ಞೆ ಇರಬೇಕು. ಮರಣ ಹೊಂದಿದ ವ್ಯಕ್ತಿಗಳ ಕುಟುಂಬ ಸದಸ್ಯರ ಜೊತೆಗೂ ಈ ರೀತಿಯಲ್ಲಿ ನಡೆದುಕೊಳ್ಳಬಾರದಿತ್ತು. ನಮ್ಮ ಕುಟುಂಬಕ್ಕೆ ತುಂಬಾ ನೋವಾಯಿತು” ಎಂದು ಅಬೂಬಕ್ಕರ್ ಅವರ ಸಹೋದರ ಬೇಸರ ಹೊರಹಾಕಿದರು.

ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಎಸ್ಕೆಎಸ್ಸೆಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಮಾತನಾಡಿ, “ಅಬೂಬಕ್ಕರ್ ಅವರ ಮೃತದೇಹವು ಮಧ್ಯಾಹ್ನ 1ರ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತ್ತು. ಆದರೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಬೂಬಕ್ಕರ್ ಅವರ ಕುಟುಂಬವನ್ನು ಏರ್ ಇಂಡಿಯಾ ಅಧಿಕಾರಿಗಳು ಸುಮಾರು ಏಳು ಗಂಟೆಗಳ ಕಾಲ ಕಾಯಿಸಿ, ಸತಾಯಿಸಿದ್ದಾರೆ. ಇದು ನಿಜಕ್ಕೂ ಖಂಡನೀಯ. ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರ ಮೂಲಕ ಏರ್ ಇಂಡಿಯಾ ಅಧಿಕಾರಿಗಳಿಗೆ ದೂರವಾಣಿ ಮೂಲಕ ಎಲ್ಲ ಮಾಹಿತಿ ನೀಡಿದ ಬಳಿಕವಷ್ಟೇ ರಾತ್ರಿ 8ರ ಸುಮಾರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ” ಎಂದು ಮಾಹಿತಿ ನೀಡಿದರು.
“ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳಲ್ಲಿ ಕನಿಷ್ಠ ಮಾನವೀಯತೆ ಇರಬೇಕು. ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡು, ವಾರದ ಬಳಿಕ ಊರಿಗೆ ಮೃತದೇಹ ಬಂದಿತ್ತು. ಈ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಸಾಮಾನ್ಯ ಪರಿಜ್ಞಾನ ಅಧಿಕಾರಿಗಳಿಗಿಲ್ಲ. ಕುಟುಂಬದ ಸದಸ್ಯನನ್ನು ಕಳೆದುಕೊಂಡ ಬೇಸರದಲ್ಲಿರುವಾಗ ಏರ್ ಇಂಡಿಯಾ ಅಧಿಕಾರಿಗಳ ನಡೆ ನಮಗೂ ತುಂಬಾ ನೋವುಂಟು ಮಾಡಿದೆ. ಈ ರೀತಿ ಮುಂದೆ ಯಾರಿಗೂ ಆಗದಂತೆ ರಾಜ್ಯ ಸರ್ಕಾರವು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು” ಎಂದು ಅನೀಸ್ ಕೌಸರಿ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಮೂರು ದಿನಗಳ ಹಿಂದೆ ಅಬುಧಾಬಿಗೆ ತೆರಳಿದ್ದ ಮಂಡ್ಯದ ನಿವಾಸಿ ಕುಸಿದು ಬಿದ್ದು ಮೃತ್ಯು
ಅಬೂಬಕ್ಕರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾವು ನಿವಾಸಿಯಾಗಿರುವ ಮುಹಮ್ಮದ್ ಎಂಬುವವರ ಮಗಳನ್ನು ವಿವಾಹವಾಗಿದ್ದರು. ಮೃತಪಟ್ಟ ಅಬೂಬಕ್ಕರ್ ಅವರು ಪತ್ನಿ, ಇಬ್ಬರು ಮಕ್ಕಳ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಅನಿವಾಸಿ ಕನ್ನಡಿಗರ ಗಮನಕ್ಕೆ:
ಈದಿನ ಡಾಟ್ ಕಾಮ್ ವೆಬ್ಸೈಟ್ನಲ್ಲಿ NRI(ಅನಿವಾಸಿ ಕನ್ನಡಿಗ) ಡೆಸ್ಕ್ ಅನ್ನು ಆರಂಭಿಸಿದ್ದೇವೆ. ಸೌದಿ, ದುಬೈ, ಅಮೇರಿಕ, ಇಂಗ್ಲೆಂಡ್, ಸಿಂಗಾಪುರ ಸೇರಿದಂತೆ ವಿಶ್ವದ ವಿವಿಧ ಕಡೆಗಳಲ್ಲಿ ಇರುವ ಕನ್ನಡಿಗರು ನಡೆಸುವ ಕಾರ್ಯಕ್ರಮಗಳನ್ನು ಕನ್ನಡ ನಾಡಿನ ಜನರಿಗೆ ತಲುಪಿಸಲು ವರದಿ ಮಾಡುತ್ತಿದ್ದೇವೆ. ಹಾಗಾಗಿ, ತಮ್ಮ ವರದಿಯನ್ನು ನಮಗೆ ಕಳುಹಿಸಬಹುದು. ಜೊತೆಗೆ ಕನ್ನಡಿಗರು ಅಥವಾ ಅನಿವಾಸಿಗಳಿಗೆ ಸಂಬಂಧಪಟ್ಟ ಎಲ್ಲ ಅಗತ್ಯ ಮಾಹಿತಿಯನ್ನು ಕಳುಹಿಸಬಹುದು. ಈ ಬಗ್ಗೆ ಸಂಪರ್ಕ ಮಾಡಲು ಇ-ಮೇಲ್ ಅಥವಾ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.
ಇರ್ಷಾದ್ ವೇಣೂರು
ಈದಿನ ಡಾಟ್ ಕಾಮ್
NRI ಡೆಸ್ಕ್
ಮೊ: 9844963059
E-mail: eedinairshadvenoor@gmail.com
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.





