ಕರಾವಳಿಯ ಕೊಂಕಣಿ ಸಂಗೀತ ಲೋಕದಲ್ಲಿ ಬ್ರಾಸ್ ಬ್ಯಾಂಡ್ ನ ಪ್ರಚಾರ ಹಾಗೂ ಉತ್ತೇಜನಕ್ಕಾಗಿ ‘ಆಮಿ ಆನಿ ಆಮ್ಚಿಂ’ ಸಂಘಟನೆಯ ಮೂಲಕ ಹುಟ್ಟಿಕೊಂಡ ʻಪೆಪೆರೆ ಪೆಪೆ ಢುಂʼ ಕಾರ್ಯಕ್ರಮವು ಇದೇ ಮೊದಲ ಬಾರಿಗೆ ಗಲ್ಫ್ ರಾಷ್ಟ್ರ ಒಂದರಲ್ಲಿ ಪ್ರದರ್ಶನ ನೀಡಲಿದೆ.
ಅಕ್ಟೋಬರ್ 10(ಇಂದು)ರಂದು ಒಮನ್ ದೇಶದ ರಾಜಧಾನಿ ಮಸ್ಕತ್ ನ ರುವಿಯ ಅಲ್ ಫಲಾಜ್ ಹೋಟೆಲ್ ನಲ್ಲಿ ಈ ಕಾರ್ಯಕ್ರಮದ ಎರಡನೇ ಆವೃತ್ತಿಯು ನಡೆಯಲಿದೆ.

ಈಗಾಗಲೇ ಮಂಗಳೂರಿನಿಂದ 10 ಜನರ ಬ್ಲೂ ಬ್ರಾಸ್ ಬ್ಯಾಂಡ್ ವಾದಕರ ತಂಡ ಮತ್ತು 10 ಜನ ಆಮಿ ಆನಿ ಆಮ್ಚಿಂ ಸಂಘಟನೆಯ ಸದಸ್ಯರು ಮಸ್ಕತ್ ತಲುಪಿದ್ದು MCCP ಸಂಘಟನೆಯ ಪದಾಧಿಕಾರಿಗಳು ಅವರನ್ನು ರೂವಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಇಂದು ನಡೆಯಲಿರುವ ಈ ಸಂಗೀತ ಸ್ಪರ್ಧೆಯಲ್ಲಿ ‘ಮಸ್ಕತ್ ಚಿಂ ನಕ್ತಿರಾಂ’, ‘ದಬಕ್ ದಬಾ ಕಲಾಕಾರ್’, ‘ಗಾಂವ್ಚಿಂ ಮೊತಿಯಾಂ’ ಮತ್ತು ‘ತೆನ್ಕಾಂತ್ಲಿಂ ತಾಲೆಂತಾಂ’ ಎಂಬ ನಾಲ್ಕು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು ವಿಜೇತ ತಂಡಕ್ಕೆ 1,000 ಒಮಾನಿ ರಿಯಲ್ (ಸುಮಾರು ರೂ. 2,30,000) ಮೊತ್ತದ ಪ್ರಶಸ್ತಿ ದೊರೆಯಲಿದ್ದು, ಉಳಿದ ಮೂರು ತಂಡಗಳಿಗೆ ತಲಾ 500 ಒಮಾನಿ ರಿಯಲ್ ( ಸುಮಾರು ರೂ. 1,15000) ಮೊತ್ತದ ಪ್ರಶಸ್ತಿಯನ್ನು ನೀಡಲಾಗುವುದು.
ಸಂತೋಷ್ ಡಿಕೋಸ್ತಾ, ರೀನ ಕ್ಯಾಸ್ಟಲಿನೊ ಮತ್ತು ಅರುಣ್ ಡಿಸೋಜಾ ಈ ಕಾರ್ಯಕ್ರಮದ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ ಸಹಿತ ಸ್ಥಳೀಯ ಧರ್ಮಗುರು ವಂ. ಸ್ಟೀಫನ್ ಲುವಿಸ್, ಕೆಲರಾಯ್ ಚರ್ಚ್ ಧರ್ಮಗುರು ವಂ. ಸಿಲ್ವೆಸ್ಟರ್ ಡಿಕೊಸ್ಟಾ, ಯುಟಿ ಇಫ್ತಿಕಾರ್ ಫರೀದ್, ವಾಲ್ಟರ್ ನಂದಳಿಕೆ, ಅಲೆಕ್ಸಿಸ್ ಕ್ಯಾಸ್ಟಲಿನೊ ಮುಂತಾದವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮ ಹೌಸ್ ಫುಲ್ ಪ್ರದರ್ಶನ ಕಾಣುವ ಎಲ್ಲಾ ಸಾಧ್ಯತೆಗಳಿವೆ. ‘ಆಮಿ ಆನಿ ಆಮ್ಚಿಂ’ ತಂಡದ ಕಲ್ಪನೆಯ ʻಪೆಪೆರೆ ಪೆಪೆ ಢುಂʼ ಮೊದಲ ಆವೃತ್ತಿ ಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 20 ತಂಡಗಳು ಪಾಲ್ಗೊಂಡಿದ್ದು, ಬ್ರಾಸ್ ಬ್ಯಾಂಡ್ ಕಹಳೆ ಮನೆಮನೆಗೆ ತಲುಪಿಸುವ ಪ್ರಯತ್ನವು ಅತ್ಯಂತ ಯಶಸ್ವಿಯಾಗಿತ್ತು.








